Jannik Sinner: ಯಾನಿಕ್ ಸಿನ್ನರ್​ಗೆ ಯುಎಸ್ ಓಪನ್ ಕಿರೀಟ

|

Updated on: Sep 09, 2024 | 1:36 PM

US Open: ಈ ಬಾರಿಯ ಯುಎಸ್​ ಓಪನ್ ಟೆನಿಸ್ ಟೂರ್ನಿಯ ಎರಡನೇ ಸುತ್ತಿನಲ್ಲೇ ಕಾರ್ಲೋಸ್ ಅಲ್ಕರಾಝ್ ಹೊರಬಿದ್ದಿದ್ದರು. ಇನ್ನು ನೊವಾಕ್ ಜೊಕೊವಿಚ್ ಮೂರನೇ ಸುತ್ತಿನಲ್ಲೇ ನಿರ್ಗಮಿಸಿದ್ದರು. ಇತ್ತ ಟೂರ್ನಿಯುದ್ದಕ್ಕೂ ಅತ್ಯುತ್ತಮ ಪ್ರದರ್ಶನ ನೀಡಿದ 23 ವರ್ಷದ ಯಾನಿಕ್ ಸಿನ್ನರ್ ಅಂತಿಮವಾಗಿ ಯುಎಸ್​ ಓಪನ್ ಕಿರೀಟವನ್ನು ತಮ್ಮದಾಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

Jannik Sinner: ಯಾನಿಕ್ ಸಿನ್ನರ್​ಗೆ ಯುಎಸ್ ಓಪನ್ ಕಿರೀಟ
Jannik Sinner
Follow us on

ವಿಶ್ವದ ನಂಬರ್ ಒನ್ ಟೆನಿಸ್ ತಾರೆ ಯಾನಿಕ್ ಸಿನ್ನರ್ ಯುಎಸ್ ಓಪನ್ ಕಿರೀಟ ತಮ್ಮದಾಗಿಸಿಕೊಂಡಿದ್ದಾರೆ. ನ್ಯೂಯಾರ್ಕ್​ನ ಆರ್ಥರ್ ಆಶೆ ಸ್ಟೇಡಿಯಂನಲ್ಲಿ  ನಡೆದ​ ಫೈನಲ್​ ಪಂದ್ಯದಲ್ಲಿ ಅಮೆರಿಕದ ಟೇಲರ್ ಫ್ರಿಟ್ಝ್ ಅವರನ್ನು ನೇರ ಸೆಟ್​ಗಳಿಂದ ಸೋಲಿಸಿ ಯಾನಿಕ್ ಚಾಂಪಿಯನ್ ಪಟ್ಟ ಅಲಂಕರಿಸಿದರು. ಈ ಮೂಲಕ ಯುಎಸ್​ ಓಪನ್ ಗೆದ್ದ ಮೊದಲ ಇಟಾಲಿಯನ್ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಭಾರೀ ಕುತೂಹಲಕ್ಕೆ ಕಾರಣವಾಗಿದ್ದ ಅಂತಿಮ ಹಣಾಹಣಿಯನ್ನು ಯಾನಿಕ್ ಸಿನ್ನರ್ ಏಕಪಕ್ಷೀಯವಾಗಿಸುವಲ್ಲಿ ಸಫಲರಾದರು. ಮೊದಲ ಸುತ್ತಿನಲ್ಲೇ ಅತ್ಯುತ್ತಮ ಸರ್ವ್​ಗಳೊಂದಿಗೆ ಗಮನ ಸೆಳೆದ ಜಾನಿಕ್, ಆ ಬಳಿಕ ಫೋರ್​ಹ್ಯಾಂಡ್ ಶಾಟ್​ಗಳ ಮೂಲಕ ಫ್ರಿಟ್ಝ್​ ಮೇಲೆ ಒತ್ತಡ ಹೇರುವಲ್ಲಿ ಯಶಸ್ವಿಯಾದರು. ಪರಿಣಾಮ ಮೊದಲ ಸುತ್ತನ್ನು ಸಿನ್ನರ್ 6-3 ಅಂತರದಿಂದ ಗೆದ್ದುಕೊಂಡರು.

ಇದೇ ಲಯವನ್ನು ಎರಡನೇ ಸುತ್ತಿನಲ್ಲೂ ಮುಂದುವರೆಸಿದ ಯಾನಿಕ್ ಸಿನ್ನರ್ ಡ್ರಾಪ್​ಶಾಟ್ ಮತ್ತು ಓವರ್​ಹೆಡ್ ಹೊಡೆತಗಳ ಮೂಲಕ ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದರು. ಪರಿಣಾಮ ಟೇಲರ್ ಫ್ರಿಟ್ಝ್​ 4 ಅಂಕಗಳನ್ನು ಕಲೆಹಾಕುವಷ್ಟರಲ್ಲಿ ಸಿನ್ನರ್ 6 ಪಾಯಿಂಟ್ಸ್ ಗಳಿಸಿ 6-4 ಅಂತರದಿಂದ ದ್ವಿತೀಯ ಸುತ್ತನ್ನು ಗೆದ್ದುಕೊಂಡರು.

ಇನ್ನು ಟೇಲರ್ ಫ್ರಿಟ್ಝ್​ಗೆ ನಿರ್ಣಾಯವಾಗಿದ್ದ ಮೂರನೇ ಸುತ್ತಿನಲ್ಲಿ ಉಭಯ ಆಟಗಾರರಿಂದ ಭರ್ಜರಿ ಪೈಪೋಟಿ ಕಂಡು ಬಂತು. ಅತ್ತ ಮೂರನೇ ಸುತ್ತನ್ನು ಸುಲಭವಾಗಿ ಗೆದ್ದುಕೊಳ್ಳಬಹುದು ಎಂದುಕೊಂಡಿದ್ದ ಯಾನಿಕ್​ಗೆ ಅತ್ಯುತ್ತಮ ಸರ್ವ್​ಗಳ ಮೂಲಕ ಫ್ರಿಟ್ಝ್​ ಪೈಪೋಟಿ ನೀಡಿದರು. ಪರಿಣಾಮ ಮೂರನೇ ಸೆಟ್ ಗೆಲ್ಲಲು ಜಾನಿಕ್ ಸಿನ್ನರ್ ತುಸು ಹೆಚ್ಚೇ ಬೆವರಿಳಿಸಬೇಕಾಯಿತು.

ಇದಾಗ್ಯೂ ಅಂತಿಮವಾಗಿ 7-5 ಅಂತರದಿಂದ ಮೂರನೇ ಸುತ್ತನ್ನು ಗೆಲ್ಲುವ ಮೂಲಕ ಯಾನಿಕ್ ಸಿನ್ನರ್ ಯಶಸ್ವಿಯಾದರು. ಈ ಮೂಲಕ ನೇರ ಸೆಟ್​ಗಳಿಂದ ಫೈನಲ್ ಪಂದ್ಯವನ್ನು ಗೆದ್ದು ಯಾನಿಕ್ ಸಿನ್ನರ್ ಯುಎಸ್​ ಓಪನ್ ಗೆದ್ದ ಇಟಲಿಯ ಮೊದಲ ಟೆನಿಸ್ ತಾರೆ ಎಂಬ ದಾಖಲೆಯನ್ನು ನಿರ್ಮಿಸಿದರು.

ಇದಕ್ಕೂ ಮುನ್ನ 23 ವರ್ಷದ ಯಾನಿಕ್ ಸಿನ್ನರ್ ಜನವರಿಯಲ್ಲಿ ನಡೆದ ಆಸ್ಟ್ರೇಲಿಯನ್ ಓಪನ್‌ ಚಾಂಪಿಯನ್​ಶಿಪ್​ ಗೆದ್ದಿದ್ದರು. ಈ ಮೂಲಕ ಸ್ಲಾಮ್​ ಖಾತೆ ತೆರೆದಿದ್ದ ಇಟಲಿಯನ್ ಟೆನಿಸ್ ತಾರೆ ಇದೀಗ ಯುಎಸ್​ ಓಪನ್ ಮೂಲಕ ಮತ್ತೊಮ್ಮೆ ಟೆನಿಸ್ ಅಂಗಳದಲ್ಲಿ ಪರಾಕ್ರಮ ಮೆರೆದಿದ್ದಾರೆ.

ಮಹಿಳಾ ಸಿಂಗಲ್ಸ್ ಫೈನಲ್:

ಮಹಿಳಾ ಸಿಂಗಲ್ಸ್ ಫೈನಲ್​ ಪಂದ್ಯದಲ್ಲಿ ಅಮೆರಿಕದ ಜೆಸ್ಸಿಕಾ ಪೆಗುಲಾ ವಿರುದ್ಧ ಬೆಲರೂಸಿಯನ್ ತಾರೆ ಅರೀನಾ ಸಬಲೆಂಕಾ ಜಯ ಸಾಧಿಸಿದ್ದಾರೆ. ಅಂತಿಮ ಹಣಾಹಣಿಯನ್ನು ಅರೀನಾ 7-5, 7-5 ಅಂತರದಿಂದ ಗೆದ್ದುಕೊಳ್ಳುವ ಮೂಲಕ ಯುಎಸ್​ ಓಪನ್ ಮಹಿಳಾ ಕಿರೀಟವನ್ನು ತಮ್ಮದಾಗಿಸಿಕೊಂಡರು.

 

Published On - 10:57 am, Mon, 9 September 24