36ನೇ ರಾಷ್ಟ್ರೀಯ ಕ್ರೀಡಾಕೂಟದ (National Games) ರೇಸ್ ವಾಕ್ (race walk) ಸ್ಪರ್ಧೆಯಲ್ಲಿ ಹೊಸ ದಾಖಲೆ ಬರೆಯುವ ಮೂಲಕ ಸಾಮಾನ್ಯ ವ್ಯಕ್ತಿಯೊಬ್ಬರು ಹೊಸ ದಾಖಲೆ ಬರೆದು ಇದೀಗ ಇಡೀ ದೇಶದ ಗಮನ ಸೆಳೆದಿದ್ದಾರೆ. ಇಂತಹದೊಂದು ಅಸಾಮಾನ್ಯ ಸಾಧನೆ ಮಾಡಿದ್ದು ಉತ್ತರ ಪ್ರದೇಶದ ರಾಮ್ ಬಾಬು. ಸಾಮಾನ್ಯವಾಗಿ ರೇಸ್ ವಾಕ್ ಸ್ಪರ್ಧೆಯನ್ನು ದೊಡ್ಡ ಸವಾಲು ಎಂದು ವಿಶ್ಲೇಷಿಸಲಾಗುತ್ತದೆ. ಏಕೆಂದರೆ ಅತ್ತ ನಿಧಾನವಾಗಿ ನಡೆಯುವಂತಿಲ್ಲ, ಇತ್ತ ಓಡುವಂತಿಲ್ಲ. ಇವೆರಡರ ನಡುವಿನ ಬ್ಯಾಲೆನ್ಸ್ ಮೂಲಕವೇ ಬರೋಬ್ಬರಿ 35 ಕಿ.ಮೀ ದೂರ ಕ್ರಮಿಸಿ ರಾಮ್ ಬಾಬು ಹೊಸ ಇತಿಹಾಸ ನಿರ್ಮಿಸಿರುವುದು ವಿಶೇಷ.
ಇಲ್ಲಿ ಮತ್ತೊಂದು ವಿಶೇಷ ಎಂದರೆ ರಾಮ್ ಬಾಬು ಸಂಪೂರ್ಣ ಕ್ರೀಡೆಯಲ್ಲಿ ತೊಡಿಗಿಸಿಕೊಂಡಿರುವ ಕ್ರೀಡಾಪಟುವಲ್ಲ. ಅಂದರೆ ಕೋವಿಡ್ ಲಾಕ್‌ಡೌನ್ ಸಮಯದಲ್ಲಿ ತೀವ್ರ ಆರ್ಥಿಕ ಸಂಕಷ್ಟವನ್ನು ಎದುರಿಸಿದ 23 ವರ್ಷದ ರಾಮ್ ಬಾಬು ಎರಡು ಹೊತ್ತಿನ ಊಟಕ್ಕಾಗಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ (MNREGA) ಕೆಲಸ ಮಾಡುತ್ತಿದ್ದಾರೆ. ಅದು ಕೂಡ ಮಣ್ಣನ್ನನು ಅಗೆಯುವ ಕೆಲಸ ಎಂಬುದು ಉಲ್ಲೇಖಾರ್ಹ. ಹೀಗೆ ಕಷ್ಟಕಾರ್ಪಣ್ಯಗಳನ್ನು ಎದುರಿಸುತ್ತಿರುವ ರಾಮ್ ಬಾಬು ಇದೀಗ ರಾಷ್ಟ್ರೀಯ ದಾಖಲೆ ಬರೆದು ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.
ಗಾಂಧಿನಗರದ ಐಐಟಿ ಕ್ಯಾಂಪಸ್ನಲ್ಲಿ ನಡೆದ 36ನೇ ರಾಷ್ಟ್ರೀಯ ಕ್ರೀಡಾಕೂಟದ 35-ಕಿಮೀ ರೇಸ್ ವಾಕ್ ಸ್ಪರ್ಧೆಯಲ್ಲಿ ಸ್ಪರ್ಧಿಸಿದ್ದ ರಾಮ್ ಬಾಬು ಕೇವಲ 2:36.32 ಸೆಕೆಂಡ್‌ಗಳಲ್ಲಿ ಗುರಿ ಮುಟ್ಟುವ ಮೂಲಕ ಹೊಸ ದಾಖಲೆ ಬರೆದರು.
ಈ ವಿಶೇಷ ದಾಖಲೆ ಬಗ್ಗೆ ಮಾತನಾಡಿದ ರಾಮ್ ಬಾಬು, ಇಂತಹದೊಂದು ಸಾಧನೆ ಖುಷಿ ಕೊಡುತ್ತದೆ. ಏಕೆಂದರೆ ನಾನು ಯಾವತ್ತೂ ಇಂತಹ ಯಾವುದೇ ಸಾಧನೆ ಮಾಡಿರಲಿಲ್ಲ. ಈ ಹಿಂದೆ ನಾನು ವಾರಣಾಸಿಯಲ್ಲಿ ಮಾಣಿಯಾಗಿ ಕೆಲಸ ಮಾಡುತ್ತಿದ್ದೆ. ಇದಾದ ಬಳಿಕ ಕೊರಿಯರ್ಗಾಗಿ ಗೋಣಿ ಚೀಲಗಳನ್ನು ಹೊಲಿಯುತ್ತಿದ್ದೆ.
ಲಾಕ್‌ಡೌನ್ ಸಂದರ್ಭದಲ್ಲಿ MNREGA ಯೋಜನೆಯಡಿಯಲ್ಲಿ ವಿವಿಧ ಗ್ರಾಮಗಳ ಯೋಜನೆಗಳಿಗೆ ಮಣ್ಣನ್ನು ಅಗೆಯಬೇಕಾಗಿತ್ತು. ಇಲ್ಲಿ ನಮಗೆ ನಿಗದಿ ಪಡಿಸಲಾದ ಕೆಲಸಕ್ಕೆ ಅನುಗುಣವಾಗಿ ದೈನಂದಿನ ವೇತನವನ್ನು ನಿರ್ಧರಿಸುತ್ತಾರೆ. 7ನೇ ತರಗತಿ ಮಾತ್ರ ಓದಿದ್ದ ನನಗೆ ಕೂಲಿ ಕೆಲಸಗಳೇ ಜೀವನಕ್ಕೆ ದಾರಿಯಾಗಿತ್ತು.
ಇದಾಗಿ ರೇಸ್ ವಾಕ್ನಲ್ಲಿ ದಾಖಲೆ ಬರೆದಿದ್ದೇನೆ ಎಂಬುದು ಗೊತ್ತಾಗಿರುವುದು ಸಂತಸ ನೀಡಿದೆ. ಆದರೆ ಈ ದಾಖಲೆಯನ್ನು ಮುರಿಯುತ್ತೇನೆ ಎಂದು ಗೊತ್ತಿತ್ತು. ಏಕೆಂದರೆ ನಾನು ಕಠಿಣ ತರಬೇತಿ ಪಡೆದಿದ್ದೆ. ಅಭ್ಯಾಸದಲ್ಲಿ 40-ಕಿಮೀ ಸೆಟ್‌ಗಳನ್ನು ನಡೆದಿದ್ದೇನೆ. ಇದರಿಂದ ನಾನು 35 ಕಿಮೀಗಳೊಂದಿಗೆ ಸುಲಭವಾಗಿ ಗುರಿ ಮುಟ್ಟಿದ್ದೇನೆ. ಆ ನಂತರ ನನ್ನ ಮನಸ್ಸಿನಲ್ಲಿ ಮೂಡಿ ಬಂದ ಮೊದಲ ಆಲೋಚನೆ ಎಂದರೆ ಇನ್ನೂ ಉತ್ತಮವಾಗಿ ಮಾಡಬಹುದಿತ್ತು ಎಂಬುದು. ಇದೀಗ ಈ ತಿಂಗಳ ಕೊನೆಯಲ್ಲಿ ಬೆಂಗಳೂರಿನಲ್ಲಿ ನಡೆಯಲಿರುವ ಓಪನ್ ನ್ಯಾಷನಲ್ ಗೇಮ್ಸ್ನಲ್ಲಿ ಭಾಗವಹಿಸಲು ಉತ್ಸುಕನಾಗಿದ್ದೇನೆ ಎಂದು ರಾಮ್ ಬಾಬು ತಿಳಿಸಿದ್ದಾರೆ.
Published On - 10:41 am, Thu, 6 October 22