Novak Djokovic: ಫ್ರೆಂಚ್ ಓಪನ್‌ನಿಂದ ಹಿಂದೆ ಸರಿದ ನೊವಾಕ್ ಜೊಕೊವಿಚ್

|

Updated on: Jun 05, 2024 | 7:50 AM

Novak Djokovic: ಸರ್ಬಿಯಾದ 37 ವರ್ಷದ ಟೆನ್ನಿಸ್ ತಾರೆ ನೊವಾಕ್ ಜೊಕೊವಿಚ್ ಈವರೆಗೆ 24 ಗ್ರ್ಯಾಂಡ್ ಸ್ಲಾಂ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಈ ಹಿಂದೆ 22 ಗ್ರ್ಯಾಂಡ ಸ್ಲಾಂ ಗೆದ್ದು ಇತಿಹಾಸ ನಿರ್ಮಿಸಿದ್ದ ರೋಜರ್ ಫೆಡರರ್ ಅವರ ದಾಖಲೆಯನ್ನು ಮುರಿಯುವ ಮೂಲಕ ಜೊಕೊವಿಚ್ ಈ ಐತಿಹಾಸಿಕ ಸಾಧನೆ ಮಾಡಿರುವುದು ವಿಶೇಷ.

Novak Djokovic: ಫ್ರೆಂಚ್ ಓಪನ್‌ನಿಂದ ಹಿಂದೆ ಸರಿದ ನೊವಾಕ್ ಜೊಕೊವಿಚ್
Novak Djokovic
Follow us on

ಹಾಲಿ ಚಾಂಪಿಯನ್ ನೊವಾಕ್ ಜೊಕೊವಿಚ್ (Novak Djokovic) ಪ್ರಸ್ತುತ ಫ್ರೆಂಚ್ ಓಪನ್‌ ಟೆನ್ನಿಸ್ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. ಪ್ರೀ ಕ್ವಾರ್ಟರ್ ಫೈನಲ್​ ಪಂದ್ಯದ ವೇಳೆ ಗಾಯಗೊಂಡಿದ್ದ ಜೊಕೊವಿಚ್ ಕ್ವಾರ್ಟರ್ ಫೈನಲ್​ಗೂ ಮುನ್ನ ತಮ್ಮ ನಿರ್ಧಾರ ಪ್ರಕಟಿಸಿದ್ದಾರೆ. ಅದರಂತೆ ಇದೀಗ ಕ್ವಾರ್ಟರ್ ಫೈನಲ್​ನಲ್ಲಿ ವಾಕ್​ಓವರ್​ ಪಡೆದಿರುವ ಕ್ಯಾಸ್ಪರ್ ರೂಡ್ ನೇರವಾಗಿ ಸೆಮಿಫೈನಲ್‌ಗೆ ಪ್ರವೇಶಿಸಿದ್ದಾರೆ.

ಇದಕ್ಕೂ ಮುನ್ನ ನಡೆದ ಫ್ರಾನ್ಸಿಸ್ಕೊ ​​ಸೆರುಂಡೊಲೊ ವಿರುದ್ಧದ ಪಂದ್ಯದ ವೇಳೆ ಜೊಕೊವಿಚ್ ಗಾಯಗೊಂಡಿದ್ದರು. ರಣರೋಚಕ ಹೋರಾಟಕ್ಕೆ ಸಾಕ್ಷಿಯಾಗಿದ್ದ ಪ್ರೀ ಕ್ವಾರ್ಟರ್​ನಲ್ಲಿ ನೊವಾಕ್ ಜೊಕೊವಿಚ್ ನೋವಿನ ನಡುವೆಯೂ ಪಂದ್ಯವನ್ನು ಪೂರ್ಣಗೊಳಿಸಿದ್ದರು.

ಈ ಪಂದ್ಯದ ಮೊದಲ ಸುತ್ತಿನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ನೊವಾಕ್ ಜೊಕೊವಿಚ್ 6-1 ಅಂತರದಿಂದ ಸೆಟ್ ಗೆದ್ದಿದ್ದರು. ಆದರೆ ದ್ವಿತೀಯ ಸುತ್ತಿನಲ್ಲಿ ​​ಸೆರುಂಡೊಲೊ ಕಂಬ್ಯಾಕ್ ಮಾಡಿದರು. ಅಲ್ಲದೆ 5-7 ಅಂತರದಿಂದ ಸೆಟ್ ಗೆಲ್ಲುವಲ್ಲಿ ಯಶಸ್ವಿಯಾದರು. ಇನ್ನು ಮೂರನೇ ಸುತ್ತಿನ ವೇಳೆ ನೊವಾಕ್ ಮೊಣಕಾಲಿನ ನೋವಿಗೆ ಒಳಗಾಗಿದ್ದರು. ಇದಾಗ್ಯೂ ಪಂದ್ಯ ಮುಂದುವರೆಸಿದ್ದ ಸರ್ಬಿಯನ್ ತಾರೆ 3-6 ಅಂತರದಿಂದ ಸೋಲನುಭವಿಸಿದರು.

ಆದರೆ ನಾಲ್ಕನೇ ಸುತ್ತಿನಲ್ಲಿ ಮತ್ತೆ ತಮ್ಮ ಅನುಭವವನ್ನು ಧಾರೆಯೆರೆಯುವ ಮೂಲಕ 7-5 ಅಂತರದಿಂದ ಗೆದ್ದರು. ಹಾಗೆಯೇ ಕೊನೆಯ ಸುತ್ತಿನಲ್ಲಿ 6-3 ಅಂತರದಿಂದ ​​ಸೆರುಂಡೊಲೊ ಅವರನ್ನು ಬಗ್ಗು ಬಡಿದು ನೊವಾಕ್ ಜೊಕೊವಿಚ್ ಕ್ವಾರ್ಟರ್​ ಫೈನಲ್​ಗೆ ಪ್ರವೇಶಿಸಿದ್ದರು.

ಈ ಪಂದ್ಯದ ವೇಳೆ ಮೊಣಕಾಲಿನ ನೋವಿಗೆ ತುತ್ತಾಗಿದ್ದರಿಂದ ನೊವಾಕ್ ಜೊಕೊವಿಚ್ ಹೆಚ್ಚಿನ ವಿಶ್ರಾಂತಿ ಪಡೆದಿದ್ದರು. ಅಲ್ಲದೆ ಈ ಪಂದ್ಯದ ಬಳಿಕ ಸ್ಕ್ಯಾನಿಂಗ್​ಗೆ ಒಳಗಾಗಿದ್ದು, ಈ ವೇಳೆ ಮೊಣಕಾಲಿನ ಮಧ್ಯದ ಚಂದ್ರಾಕೃತಿಯಲ್ಲಿ ಗಾಯವಾಗಿರುವುದು ಕಂಡು ಬಂದಿದೆ. ಹೀಗಾಗಿ ಹೆಚ್ಚಿನ ವಿಶ್ರಾಂತಿ ಪಡೆಯುವಂತೆ ವೈದ್ಯರು ಸೂಚಿಸಿದ್ದಾರೆ. ಅದರಂತೆ ಇದೀಗ ನೊವಾಕ್ ಜೊಕೊವಿಚ್ ಪ್ರತಿಷ್ಠಿತ ಫ್ರೆಂಚ್ ಓಪನ್ ಟೆನ್ನಿಸ್ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ.

ಇದನ್ನೂ ಓದಿ: ಅಲ್ಕರಾಝ್ ವಿರುದ್ಧ ಸೋಲಿನ ಸೇಡು ತೀರಿಸಿಕೊಂಡ ಜೊಕೊವಿಚ್

ಕೋರ್ಟ್​ನಲ್ಲಿನ ಜಾರುತ್ತಿದ್ದ ಮೇಲ್ಮೈಯಿಂದಾಗಿ ನಾನು ಗಾಯಗೊಂಡಿದ್ದೇನೆ ಎಂದು ಜೊಕೊವಿಚ್ ಆರೋಪಿಸಿದ್ದಾರೆ. ಪ್ರತಿ ಹಂತದಲ್ಲೂ ನಾನು ಜಾರುತ್ತಿದ್ದೆ. ಇಂತಹ ಅನಿರೀಕ್ಷಿತ ಜಾರುವಿಕೆಯಿಂದಾಗಿ ನನ್ನ ಮೊಣಕಾಲಿಗೆ ಗಾಯವಾಗಿದೆ ಎಂದು ಸರ್ಬಿಯನ್ ತಾರೆ ಕೋರ್ಟ್​ನ ಮೇಲ್ಮೈ ಸ್ಥಿತಿಯ ಬಗ್ಗೆ ಪಂದ್ಯಾವಳಿಯ ಪ್ರಾಧಿಕಾರಕ್ಕೆ ದೂರು ನೀಡಿದ್ದಾರೆ.

ನೊವಾಕ್ ಜೊಕೊವಿಚ್ ವಿಡಿಯೋ:

ದಾಖಲೆ ಬರೆದ ನೊವಾಕ್:

ನೊವಾಕ್ ಜೊಕೊವಿಚ್ ಈವರೆಗೆ 370 ಗ್ರ್ಯಾಂಡ್ ಸ್ಲಾಂ ಪಂದ್ಯಗಳನ್ನು ಗೆದ್ದಿದ್ದಾರೆ. ಈ ಬಾರಿಯ ಫ್ರೆಂಚ್ ಓಪನ್​ನ ಪ್ರೀ ಕ್ವಾರ್ಟರ್ ಫೈನಲ್​ನಲ್ಲಿ ಜಯ ಸಾಧಿಸುವ ಮೂಲಕ ಅತೀ ಹೆಚ್ಚು ಗ್ರ್ಯಾಂಡ್ ಸ್ಲಾಂ ಪಂದ್ಯಗಳನ್ನು ಗೆದ್ದ ದಾಖಲೆ ನಿರ್ಮಿಸಿದ್ದಾರೆ. ಇದಕ್ಕೂ ಮುನ್ನ ಈ ದಾಖಲೆ ರೋಜರ್ ಫೆಡರರ್ (369) ಹೆಸರಿನಲ್ಲಿತ್ತು. ಇದೀಗ ಈ ದಾಖಲೆಯೊಂದಿಗೆ ನೊವಾಕ್ ಈ ಬಾರಿಯ ಫ್ರೆಂಚ್ ಓಪನ್​ನಿಂದ ಹಿಂದೆ ಸರಿದಿದ್ದಾರೆ.