PKL 2022: ರಣ ರೋಚಕ ಟೈನಲ್ಲಿ ಅಂತ್ಯಕಂಡ ಬೆಂಗಳೂರು ಬುಲ್ಸ್-ದಬಾಂಗ್ ದಿಲ್ಲಿ ಕಬಡ್ಡಿ ಪಂದ್ಯ

| Updated By: Vinay Bhat

Updated on: Feb 05, 2022 | 10:02 AM

Bengaluru Bulls vs Dabang Delhi : ವೈಟ್‌ಫೀಲ್ಡ್‌ನಲ್ಲಿರುವ ಗ್ರ್ಯಾಂಡ್ ಶೆರಟಾನ್ ಹೋಟೆಲ್​ನಲ್ಲಿ ಶುಕ್ರವಾರ ನಡೆದ ಪಂದ್ಯವು 36-36 ರಿಂದ ಟೈ ಆಯಿತು. ಬೆಂಗಳೂರು ತಂಡದ ನಾಯಕ ಪವನ್ ಶೆರಾವತ್ 17 ಮತ್ತು ಡೆಲ್ಲಿ ತಂಡದ ನಾಯಕ ನವೀನ್ ಕುಮಾರ್ 13 ಅಂಕಗಳನ್ನು ಗಳಿಸಿದರು.

PKL 2022: ರಣ ರೋಚಕ ಟೈನಲ್ಲಿ ಅಂತ್ಯಕಂಡ ಬೆಂಗಳೂರು ಬುಲ್ಸ್-ದಬಾಂಗ್ ದಿಲ್ಲಿ ಕಬಡ್ಡಿ ಪಂದ್ಯ
bengaluru bulls vs dabang delhi
Follow us on

ಪಂದ್ಯ ಮುಗಿಯಲಿದ್ದ ಕೊನೇ ಸೆಕೆಂಡ್‌ವರೆಗೆ ಗೆಲುವಿಗಾಗಿ ಹೋರಾಡಿದ ಬೆಂಗಳೂರು ಬುಲ್ಸ್ ಮತ್ತು ದಬಾಂಗ್ ಡೆಲ್ಲಿ (Bengaluru Bulls vs Dabang Delhi) ನಡುವಿನ ಪಂದ್ಯ ಅಂತಿಮವಾಗಿ ರೋಚಕ ಟೈನಲ್ಲಿ ಅಂತ್ಯಗೊಂಡಿದೆ. ಕಡೆಯ  ಒಂದು ನಿಮಿಷಗಳಲ್ಲಿ ಎರಡು ತಂಡದ ಆಟಗಾರರ ನಡುವೆ ನಡೆದ ಜಿದ್ದಾಜಿದ್ದಿನ ಕಾಳಗ ಮಾತ್ರ ಅಭಿಮಾನಿಗಳನ್ನು ತುದಿಗಾಲಿನಲ್ಲಿ ನಿಲ್ಲಿಸಿತ್ತು. ವೈಟ್‌ಫೀಲ್ಡ್‌ನಲ್ಲಿರುವ ಗ್ರ್ಯಾಂಡ್ ಶೆರಟಾನ್ ಹೋಟೆಲ್​ನಲ್ಲಿ ಶುಕ್ರವಾರ ನಡೆದ ಪಂದ್ಯವು 36-36 ರಿಂದ ಟೈ ಆಯಿತು. ಬೆಂಗಳೂರು ತಂಡದ ನಾಯಕ ಪವನ್ ಶೆರಾವತ್ (Pawan Kumar) 17 ಮತ್ತು ಡೆಲ್ಲಿ ತಂಡದ ನಾಯಕ ನವೀನ್ ಕುಮಾರ್ 13 ಅಂಕಗಳನ್ನು ಗಳಿಸಿದರು. ಅರ್ಧವಿರಾಮದ ವೇಳೆ ಡೆಲ್ಲಿ ತಂಡವು 18-14ರಿಂದ ಮುನ್ನಡೆಯಲ್ಲಿತ್ತು. ಆದರೆ ವಿರಾಮದ ನಂತರ ಪವನ್ ಮಿಂಚಿದರು. ಇದರಿಂದಾಗಿ ಎರಡನೇ ಅವಧಿಯಲ್ಲಿ ಬುಲ್ಸ್ ತಂಡವು 22 ಅಂಕಗಳನ್ನು ಗಳಿಸಿದರೆ, ಡೆಲ್ಲಿ ತಂಡವು 18 ಪಾಯಿಂಟ್ಸ್ ಪಡೆಯಿತು. ಇದರಿಂದಾಗಿ ತಂಡವು ಸೋಲು ತಪ್ಪಿಸಿಕೊಂಡಿತು.

ಬೆಂಗಳೂರು ತಂಡದ ಪರ ಏಕಾಂಗಿ ಹೋರಾಟ ನಡೆಸಿದ ನಾಯಕ ಪವನ್‌ ಕುಮಾರ್‌ ಸೆಹ್ರಾವತ್‌ 17 ಅಂಕ ಗಳಿಸಿದರೆ, ದಬಾಂಗ್‌ ದಿಲ್ಲಿ ತಂಡದ ಪರ ನವೀನ್‌ ಕುಮಾರ್‌ 13 ಅಂಕಗಳಿಸಿ ತಂಡವನ್ನು ಸೋಲಿನ ದವಡೆಯಿಂದ ಪಾರು ಮಾಡಿದರು. ಲೀಗ್‌ನಲ್ಲಿ ಈವರೆಗೆ ಆಡಿದ 18 ಪಂದ್ಯಗಳಿಂದ 9 ಜಯ, 7 ಸೋಲು ಮತ್ತು 2 ಡ್ರಾ ಸಾಧಿಸಿರುವ ಬೆಂಗಳೂರು ಬುಲ್ಸ್‌ ತಂಡ ಒಟ್ಟು 54 ಅಂಕಗಳನ್ನು ಗಳಿಸಿದ್ದು, ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಕಳೆದ ಪಂದ್ಯ ಸೋತು, ಈ ಪಂದ್ಯದಲ್ಲಿ ಡ್ರಾ ಸಾಧಿಸಿದರೂ ಡೆಲ್ಲಿ ತಂಡ ಅಂಕಪಟ್ಟಿಯ ಅಗ್ರಸ್ಥಾನ ಕಾಯ್ದುಕೊಂಡಿದೆ.

ಹರ್ಯಾಣಕ್ಕೆ ಭರ್ಜರಿ ಗೆಲುವು:

ನಿನ್ನೆ ನಡೆದ ಇನ್ನೊಂದು ಪಂದ್ಯದಲ್ಲಿ ಹರಿಯಾಣ ಸ್ಟೀಲರ್ಸ್‌ ತಂಡವು 46-29 ರಿಂದ ಬೆಂಗಾಲ್ ವಾರಿಯರ್ಸ್ ತಂಡದ ವಿರುದ್ಧ ಜಯಿಸಿದೆ. ಹಿಂದಿನ ಎರಡು ಪಂದ್ಯಗಳಲ್ಲಿ ಡ್ರಾ ಮತ್ತು ಸೋಲಿಗೆ ಒಳಗಾಗಿದ್ದ ಹರಿಯಾಣ ಸ್ಟೀಲರ್ಸ್‌ ತಂಡ ಲೀಗ್‌ನ 92ನೇ ಪಂದ್ಯದಲ್ಲಿ ಬೆಂಗಾಲ್‌ ವಾರಿಯರ್ಸ್‌ ಅನ್ನು ಸೋಲಿಸಿ ಗೆಲುವಿನ ಲಯಕ್ಕೆ ಮರಳಿತು. ಹರಿಯಾಣ ಪರ ಕ್ರಮವಾಗಿ 10 ಮತ್ತು 8 ಅಂಕಗಳ ಕೊಡುಗೆ ನೀಡಿದ ವಿಕಾಶ್‌ ಕಂಡೋಲಾ ಮತ್ತು ವಿನಯ್‌ ತಂಡದ ಜಯದಲ್ಲಿ ನಿರ್ಣಾಯಕ ಪಾತ್ರವಹಿಸಿದರು. ಅತ್ತ ಮಣಿಂದರ್‌ ಸಿಂಗ್‌ ಏಕಾಂಗಿ ಹೋರಾಟ ನಡೆಸಿ 13 ಅಂಕ ಗಳಿಸಿದರೂ ತಂಡವನ್ನು ಸೋಲಿನಿಂದ ಪಾರು ಮಾಡಲು ವಿಫಲಗೊಂಡರು.ಜಿದ್ದಾಜಿದ್ದಿಯಿಂದ ಕೂಡಿದ್ದ ಮೊದಲಾರ್ಧದಲ್ಲಿ ಉಭಯ ತಂಡಗಳು 19-19 ಸಮಬಲ ಸಾಧಿಸಿದ್ದವು. ಆದರೆ ದ್ವಿತಿಯಾರ್ಧದಲ್ಲಿ ರೈಡಿಂಗ್‌ ಮತ್ತು ಟ್ಯಾಕಲ್‌ನಲ್ಲಿ ಹರ್ಯಾಣ ಮಿಂಚಿನ ಪ್ರದರ್ಶನ ನೀಡಿತು.

Justin Langer: ಆಸ್ಟ್ರೇಲಿಯಾ ಹೆಡ್ ಕೋಚ್ ಸ್ಥಾನದಿಂದ ದಿಢೀರ್ ಕೆಳಗಿಳಿದ ಲ್ಯಾಂಗರ್: ಅನುಮಾನ ಮೂಡಿಸಿದ ಜಸ್ಟಿನ್ ನಡೆ

U19 World Cup Final: ಇಂದು ಅಂಡರ್-19 ವಿಶ್ವಕಪ್ ಫೈನಲ್: 5ನೇ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿರುವ ಭಾರತಕ್ಕೆ ಇಂಗ್ಲೆಂಡ್ ಸವಾಲು