Tokyo Paralympics: ಭಾರತಕ್ಕೆ 5ನೇ ಚಿನ್ನ: ಬ್ಯಾಡ್ಮಿಂಟನ್ ಫೈನಲ್​ನಲ್ಲಿ ಕೃಷ್ಣ ನಗರ್​ಗೆ ರೋಚಕ ಗೆಲುವು

| Updated By: Vinay Bhat

Updated on: Sep 05, 2021 | 9:53 AM

Krishna Nagar: ಅಂತಿಮ ಸೆಟ್​ನಲ್ಲಿ ಊಹಿಸಲಾಗದ ರೀತಿ ಆಟವಾಡಿದ ಕೃಷ್ಣ ರೋಚಕ ಗೆಲುವು ಸಾಧಿಸಿ ಎರಡನೇ ಬಾರಿ ಚಿನ್ನದ ಪದಕ ಗೆದ್ದ ಸಾಧನೆ ಮಾಡಿದರು. ಹಾಮಕಾಂಗ್​ನ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡರು.

Tokyo Paralympics: ಭಾರತಕ್ಕೆ 5ನೇ ಚಿನ್ನ: ಬ್ಯಾಡ್ಮಿಂಟನ್ ಫೈನಲ್​ನಲ್ಲಿ ಕೃಷ್ಣ ನಗರ್​ಗೆ ರೋಚಕ ಗೆಲುವು
Krishna Nagar
Follow us on

ಟೋಕಿಯೊ ಪ್ಯಾರಾಲಿಂಪಿಕ್ಸ್​ನಲ್ಲಿ (Tokyo Paralympics) ಭಾರತದ ಪದಕಗಳ ಸಂಖ್ಯೆ 19ಕ್ಕೆ ಏರಿಕೆಯಾಗಿದೆ. ಪುರುಷರ ಬ್ಯಾಡ್ಮಿಂಟನ್ ಎಸ್​ಹೆಚ್​6 ವಿಭಾಗದ ಫೈನಲ್ ಪಂದ್ಯದಲ್ಲಿ ಕೃಷ್ಣ ನಗರ್ ಭರ್ಜರಿ ಗೆಲುವು ಸಾಧಿಸಿ ಚಿನ್ನದ ಪದಕ ಗೆದ್ದ ಸಾಧನೆ ಮಾಡಿದ್ದಾರೆ. ಹಾಂಕಾಂಗ್​ನ ಚು ಮನ್ ಕೈ ವಿರುದ್ಧ ನಡೆದ ಮೆಡಲ್ ಪಂದ್ಯದಲ್ಲಿ ಕೃಷ್ಣ 2-1 ಸೆಟ್​ಗಳ ಅಂತರದಿಂದ ಗೆದ್ದು ಭಾರತಕ್ಕೆ 5ನೇ ಚಿನ್ನ ತಂದುಕೊಟ್ಟಿದ್ದಾರೆ.

ಸಾಕಷ್ಟು ರೋಚಕತೆಯಿಂದ ಕೂಡಿದ್ದ ಪಂದ್ಯದಲ್ಲಿ ಕೃಷ್ಣ ನಗರ್ ಮೊದಲ ಸೆಟ್​ನಲ್ಲೇ 21-17 ಅಂಕಗಳ ಮುನ್ನಡೆ ಸಾಧಿಸಿದರು. ಎರಡನೇ ಸೆಟ್​ನಲ್ಲಿ ಕಮ್​ಬ್ಯಾಕ್ ಮಾಡಿದ ಚು ಮನ್ ಕೈ 21-16 ಅಂಕಗಳಿಂದ ಗೆದ್ದು ಸಮಬಲ ಸಾಧಿಸಿದರು. ಅಂತಿಮ ಸೆಟ್​ನಲ್ಲಿ ಊಹಿಸಲಾಗದ ರೀತಿ ಆಟವಾಡಿದ ಕೃಷ್ಣ 21-17 ಅಂತರದಿಂದ ರೋಚಕ ಗೆಲುವು ಸಾಧಿಸಿ ಎರಡನೇ ಬಾರಿ ಚಿನ್ನದ ಪದಕ ಗೆದ್ದ ಸಾಧನೆ ಮಾಡಿದರು. ಹಾಮಕಾಂಗ್​ನ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡರು.

 

ಕೃಷ್ಣ ಅವರು ಸಿಂಗಲ್ಸ್ ವಿಭಾಗದಲ್ಲಿ ಗ್ರೇಟ್ ಬ್ರಿಟನ್​​ನ ಕ್ರಿಸ್ಟನ್ ಕೋಂಬ್ಸ್​​ ಅವರನ್ನು ಸೋಲಿಸಿ ಫೈನಲ್​​​​ಗೆ ಪ್ರವೇಶಿಸಿದ್ದರು. ತನ್ನ ಸೆಮಿಫೈನಲ್ ಎದುರಾಳಿ ಗ್ರೇಟ್ ಬ್ರಿಟನ್‌ನ ಕ್ರಿಸ್ಟನ್ ಕೂಂಬ್ಸ್‌ನನ್ನು 21-10, 21-11 ಅಂತರದಿಂದ ಸೋಲಿಸಿ ವಿಶೇಷ ಸಾಧನೆ ಮಾಡಿದ್ದರು.

ಇದಕ್ಕೂ ಮುನ್ನ ಇಂದು ಮುಂಜಾನೆ ನಡೆದ ಪುರುಷರ ಬ್ಯಾಡ್ಮಿಂಟನ್ ಎಸ್ಎಲ್4 ವಿಭಾಗದ ರೋಚಕ ಫೈನಲ್ ಪಂದ್ಯದಲ್ಲಿ ಭಾರತದ, ಕನ್ನಡಿಗ ಸುಹಾಸ್ ಯತಿರಾಜ್ ಬೆಳ್ಳಿ ಪದಕ ಗೆದ್ದರು. ವಿಶ್ವದ ನಂಬರ್ ಒನ್ ಆಟಗಾರ ಫ್ರಾನ್ಸ್​ನ ಲೂಕಸ್ ಮಜೂರ್ ವಿರುದ್ಧ ವಿಶ್ವದ ನಂಬರ್ 3 ಆಟಗಾರ ಸುಹಾಸ್ 1-2 ಸೆಟ್​ಗಳ ಅಂತರದಲ್ಲಿ ಸೋಲುವ ಮೂಲಕ ಬೆಳ್ಳಿಗೆ ಕೊರಳೊಡ್ಡಿದರು. ಈ ಮೂಲಕ ಪ್ಯಾರಾಲಿಂಪಿಕ್ಸ್ ನಲ್ಲಿ ಪದಕ ಗೆದ್ದ ಮೊದಲ ಐಎಎಸ್ ಅಧಿಕಾರಿ ಎಂದ ಸಾಧನೆಯನ್ನು ಸುಹಾಸ್ ಮಾಡಿದರು.

 

ಈ ಮೂಲಕ ಒಟ್ಟಾರೆಯಾಗಿ ಟೋಕಿಯೊ ಪ್ಯಾರಾಲಿಂಪಿಕ್ಸ್ 2020ರ​ನಲ್ಲಿ ಭಾರತದ ಪದಕಗಳ ಸಂಖ್ಯೆ 19ಕ್ಕೆ ಏರಿಕೆಯಾಗಿದೆ. ಇದರಲ್ಲಿ ಚಿನ್ನ 5 ಗೆದ್ದಿದ್ದರೆ, ಬೆಳ್ಳಿ 8 ಮತ್ತು 6 ಕಂಚಿನ ಪದಕ ಭಾರತ ಬಾಜಿಕೊಂಡಿದೆ.

Published On - 9:47 am, Sun, 5 September 21