ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಅಧ್ಯಕ್ಷ ಸೌರವ್ ಗಂಗೂಲಿ ಅವರು ರಿಷಬ್ ಪಂತ್ ಮತ್ತು ವೃದ್ಧಿಮಾನ ಸಹಾ, ಪ್ರಸ್ತುತವಾಗಿ ಭಾರತದಲ್ಲಿ ಸದ್ಯಕ್ಕೆ ಲಭ್ಯರಿರುವ ಅತ್ಯುತ್ತಮ ವಿಕೆಟ್ಕೀಪರ್ ಬ್ಯಾಟ್ಸ್ಮನ್ಗಳೆಂದು ಹೇಳುವ ಮೂಲಕ ಗೊಂದಲ ಸೃಷ್ಟಿಸಿದ್ದಾರೆ.
ಮಹೇಂದ್ರಸಿಂಗ್ ಧೋನಿ ಅವರ ನಿವೃತ್ತಿಯ ನಂತರ ಭಾರತ ಕೆಲವು ವಿಕೆಟ್ಕೀಪರ್ ಬ್ಯಾಟ್ಸ್ಮನ್ಗಳನ್ನು ಪ್ರಯೋಗಿಸಿದೆ. ಪಂತ್ ಮತ್ತು ಸಹಾ ಅವರಲ್ಲದೆ, ಕೆಎಲ್ ರಾಹುಲ್, ಸಂಜು ಸ್ಯಾಮ್ಸನ್ ಅವರನ್ನು ಈ ಸ್ಪೆಷಲಿಸ್ಟ್ ಸ್ಥಾನಕ್ಕೆ ಬಳಸಿಕೊಂಡಿದೆ. ಸಹಾ ಟೆಸ್ಟ್ ಕ್ರಿಕೆಟ್ನಲ್ಲಿ ಅತ್ಯುತ್ತಮ ಪ್ರದರ್ಶನಗಳನ್ನು ನೀಡಿ ಸ್ಥಾನವನ್ನು ಭದ್ರಪಡಿಸಿಕೊಂಡರು. ಅವರು ಗಾಯಗೊಂಡಾಗ ಅವಕಾಶ ಗಿಟ್ಟಿಸಿದ ಯುವ ಆಟಗಾರ ಪಂತ್ ಕೆಲವು ಉತ್ಕೃಷ್ಟ ಬ್ಯಾಟಿಂಗ್ ಪ್ರದರ್ಶನಗಳ ಮೂಲಕ ಗಮನ ಸೆಳೆಯುವುದರ ಜೊತೆಗೆ ಸಹಾ ಮರಳಿ ಬರುವುದಕ್ಕೆ ದೊಡ್ಡ ಥ್ರೆಟ್ ಎನಿಸಿದರು. ಆದರೆ ಬ್ಯಾಟಿಂಗ್ನಲ್ಲಿ ಅವರಿಂದ ಪ್ರದರ್ಶನಗಳು ಅಸ್ಥಿರಗೊಳ್ಳಲಾರಂಭಿಸಿದ ನಂತರ ಸಹಾಗೆ ಪುನಃ ಅವಕಾಶ ಸಿಕ್ಕಿತು.
ಈಗ ಪಂತ್ ಮತ್ತು ಸಹಾ ಇಬ್ಬರಿಗೂ ಆಸ್ಟ್ರೇಲಿಯಾ ಪ್ರವಾಸದಲ್ಲಿ ಕೇವಲ ಟೆಸ್ಟ್ ಸ್ಕ್ಯಾಡ್ನಲ್ಲಿ ಮಾತ್ರ ಅವಕಾಶ ಕಲ್ಪಿಸಲಾಗಿದೆ.
ಪಂತ್ ಮತ್ತು ಸಹಾ ಭಾರತದ ಅತ್ಯುತ್ತಮ ವಿಕೆಟ್ ಕೀಪರ್ಗಳಾದರೆ ಅವರಿಗೆ ಸೀಮಿತ ಓವರ್ಗಳ ಕ್ರಿಕೆಟ್ನಲ್ಲಿ ಯಾಕೆ ಅಡಿಸುತ್ತಿಲ್ಲ ಎಂಬ ಪ್ರಶ್ನೆಗೆ ಗಂಗೂಲಿ ಅವರಲ್ಲಿ ಸ್ಪಷ್ಟವಾದ ಉತ್ತರವಿಲ್ಲ. ಇಂದು ಪಿಟಿಐನೊಂದಿಗೆ ಮಾತಾಡಿದ ಭಾರತದ ಮಾಜಿ ನಾಯಕ ಗಂಗೂಲಿ, ಪಂತ್ ಅವರು ಐಪಿಎಲ್ನಲ್ಲಿ ನೀಡಿದ ಕಳಪೆ ಪ್ರದರ್ಶನಗಳ ಬಗ್ಗೆಯೂ ಸಮಂಜಸ ಉತ್ತರ ನೀಡಲಿಲ್ಲ.
‘‘ಅವನ ಬ್ಯಾಟಿಂಗ್ ಬಗ್ಗೆ ಯೋಚನೆ ಬೇಡ, ಅವನ ಮತ್ತೆ ಬ್ಯಾಟ್ ಮೊದಲಿನಂತೆ ಬೀಸಲಾರಂಭಿಸುತ್ತದೆ. ಅವನಿನ್ನೂ ಯುವಕ ಮತ್ತು ಪ್ರಚಂಡ ಪ್ರತಿಭಾವಂತ. ಅವನಿಗೆ ಬೇಕಿರುವುದು ನಮ್ಮ ಮಾರ್ಗದರ್ಶನ, ಅವನ ಫಾರ್ಮ್ ಸುಧಾರಿಸಲಿದೆ,’’ ಎಂದು ಗಂಗೂಲಿ ಹೇಳಿದರು.
ಆದರೆ, ಪಂತ್ ಅವರನ್ನು ಸೀಮಿತ ಪಂದ್ಯಗಳಿಗೆ ಡ್ರಾಪ್ ಮಾಡಿರುವುದರಿಂದ ಮತ್ತು ಸಹಾ ಅವರಿಗಿಂತ ಉತ್ತಮ ವಿಕೆಟ್ಕೀಪರ್ ಆಗಿರುವುದರಿಂದ ಪಂತ್ಗೆ ಟೆಸ್ಟ್ಗಳಲ್ಲಿ ಆಡುವ ಅವಕಾಶ ಸಿಗುತ್ತದೆಯೇ ಎಂದು ಕೇಳಿದಾಗ ಗಂಗೂಲಿ ಡಿಪ್ಲೊಮ್ಯಾಟಿಕ್ ಉತ್ತರ ನೀಡಲು ಪ್ರಯತ್ನಿಸಿದರು.
‘‘ಇಬ್ಬರನ್ನೂ ಖಂಡಿತವಾಗಿಯೂ ಆಡಿಸಲಾಗದು, ಯಾರು ಉತ್ತಮ ಫಾರ್ಮ್ನಲ್ಲಿದ್ದಾರೋ ಅವರು ಆಡುವ ಇಲೆವೆನ್ನಲ್ಲಿ ಸ್ಥಾನ ಗಿಟ್ಟಿಸುತ್ತಾರೆ,’’ ಅಂತ ಗಂಗೂಲಿ ಹೇಳಿದರು.
Published On - 7:47 pm, Wed, 25 November 20