Paris Olympics 2024: ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಭಾರತಕ್ಕೆ ಮೊದಲ ಸೋಲು

|

Updated on: Jul 27, 2024 | 2:17 PM

Paris Olympics 2024: ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಭಾರತದ 117 ಕ್ರೀಡಾಪಟುಗಳು ಕಾಣಿಸಿಕೊಂಡಿದ್ದಾರೆ. ಈ ಕ್ರೀಡಾಳುಗಳು ಒಟ್ಟು 69 ಸ್ಪರ್ಧೆಗಳಲ್ಲಿ ಕಣಕ್ಕಿಳಿಯಲಿದ್ದಾರೆ. ಅದರಂತೆ ಶನಿವಾರ ನಡೆದ ಶೂಟಿಂಗ್ ಸ್ಪರ್ಧೆಯಲ್ಲಿ ಭಾರತೀಯರಿಂದ ನೀರಸ ಪ್ರದರ್ಶನ ಮೂಡಿಬಂದಿದೆ. ಇದಾಗ್ಯೂ ರೋಯಿಂಗ್​ನಲ್ಲಿ ಮುಂದಿನ ಹಂತಕ್ಕೇರುವಲ್ಲಿ ಬಲರಾಜ್ ಪನ್ವಾರ್ ಯಶಸ್ವಿಯಾಗಿದ್ದಾರೆ.

Paris Olympics 2024: ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಭಾರತಕ್ಕೆ ಮೊದಲ ಸೋಲು
Paris Olympics 2024
Follow us on

ಫ್ರಾನ್ಸ್​ ರಾಜಧಾನಿ ಪ್ಯಾರಿಸ್​ನಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್ ಕ್ರೀಡಾಕೂಟದ ಮೊದಲ ದಿನವೇ ಭಾರತೀಯ ಸ್ಪರ್ಧಿಗಳಿಂದ ನೀರಸ ಪ್ರದರ್ಶನ ಮೂಡಿಬಂದಿದೆ. ಶನಿವಾರ ನಡೆದ 10 ಮೀಟರ್ ಏರ್ ರೈಫಲ್ ಶೂಟಿಂಗ್​ ಸ್ಪರ್ಧೆಯಲ್ಲಿ ಭಾರತದ ನಾಲ್ವರು ಶೂಟರ್​ಗಳು ಭಾಗವಹಿಸಿದ್ದರು. ಆದರೆ ಮಿಶ್ರ ಏರ್​ ರೈಫಲ್​ ವಿಭಾಗದಲ್ಲಿ ಪದಕದ ಸುತ್ತಿಗೆ ಪ್ರವೇಶಿಸುವಲ್ಲಿ ಭಾರತೀಯ ಶೂಟರ್​ಗಳು ವಿಫಲರಾಗಿದ್ದಾರೆ.

  • 10 ಮೀಟರ್ ಏರ್ ರೈಫಲ್ (ಮಿಶ್ರ) ಅರ್ಹತಾ ಸುತ್ತಿನಲ್ಲಿ ಸಂದೀಪ್ ಸಿಂಗ್, ಅರ್ಜುನ್ ಬಬೌತಾ, ರಮಿತಾ ಜಿಂದಾಲ್ ಮತ್ತು ಎಲವೆನಿಲ್ ವಲರಿವನ್ ಸ್ಪರ್ಧಿಸಿದ್ದರು.
  • 10 ಮೀಟರ್ ಏರ್ ರೈಫಲ್ (ಮಿಶ್ರ) ಸ್ಪರ್ಧೆಯಲ್ಲಿ ರಮಿತಾ ಮತ್ತು ಅರ್ಜುನ್ 6ನೇ ಸ್ಥಾನ ಪಡೆದರೆ, ಎಲವೆನಿಲ್ ಮತ್ತು ಸಂದೀಪ್ 12ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.
  • 10 ಮೀಟರ್ ಏರ್ ರೈಫಲ್ (ಮಿಶ್ರ) ಶೂಟಿಂಗ್ ಸ್ಪರ್ಧೆಯಲ್ಲಿ ಟಾಪ್-4 ತಂಡಗಳು ಮಾತ್ರ ಪದಕ ಸುತ್ತಿಗೆ ಅರ್ಹತೆ ಪಡೆಯುತ್ತವೆ. ಇದರೊಂದಿಗೆ ಪ್ಯಾರಿಸ್ ಒಲಿಂಪಿಕ್ಸ್​ನ 10 ಮೀಟರ್ ಏರ್ ರೈಫಲ್ (ಮಿಶ್ರ) ಸ್ಪರ್ಧೆಯಲ್ಲಿ ಭಾರತ ಪದಕ ಗೆಲ್ಲುವ ಕನಸು ಕಮರಿದೆ.
  • ಚೀನಾ ಮತ್ತು ಕೊರಿಯಾ ದೇಶಗಳು 10 ಮೀಟರ್ ಏರ್ ರೈಫಲ್ (ಮಿಶ್ರ) ಶೂಟಿಂಗ್​ ಸ್ಪರ್ಧೆಯಲ್ಲಿ ಚಿನ್ನದ ಪದಕ ಸುತ್ತಿನಲ್ಲಿವೆ. ಹಾಗೆಯೇ ಕಜಕಿಸ್ತಾನ್ ಮತ್ತು ಜರ್ಮನಿ ಕಂಚಿನ ಪದಕ ಸುತ್ತಿನಲ್ಲಿವೆ.

ಭಾರತೀಯ ಶೂಟರ್​ಗಳು ಪಡೆದ ಅಂಕಗಳು:

  • ➡️ರಮಿತಾ ಮತ್ತು ಅರ್ಜುನ್- 6ನೇ ಸ್ಥಾನ (628.7 ಅಂಕಗಳು)
  • ➡️ಎಲವೆನಿಲ್ ಮತ್ತು ಸಂದೀಪ್- 12ನೇ ಸ್ಥಾನ (626.3 ಅಂಕಗಳು)

ಒಂದು ಅಂಕದಿಂದ ಕೈ ತಪ್ಪಿದ ಅವಕಾಶ:

ಶೂಟಿಂಗ್​ನಲ್ಲಿ ಕಂಚಿನ ಪದಕದ ಸ್ಪರ್ಧೆಗೆ ಅರ್ಹತೆ ಪಡೆಯಲು ಭಾರತೀಯರು ಕೇವಲ 1 ಅಂಕದಿಂದ ವಿಫಲರಾಗಿದ್ದಾರೆ. ಅಂದರೆ 4ನೇ ಸ್ಥಾನ ಪಡೆದಿರುವ ಜರ್ಮನಿಯು ಶೂಟರ್​ಗಳು ಒಟ್ಟು 629.7 ಅಂಕಗಳನ್ನು ಕಲೆಹಾಕಿ ಅರ್ಹತೆ ಪಡೆದುಕೊಂಡಿದ್ದಾರೆ. ಇದೇ ವೇಳೆ 6ನೇ ಸ್ಥಾನ ಪಡೆದ ರಮಿತಾ ಮತ್ತು ಅರ್ಜುನ್ 628.7 ಅಂಕಗಳನ್ನು ಕಲೆಹಾಕಿದ್ದರು ಎಂಬುದು ಇಲ್ಲಿ ಉಲ್ಲೇಖಾರ್ಹ.

ಇದನ್ನೂ ಓದಿ: Paris Olympics 2024: ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಭಾರತಕ್ಕೆ ಪದಕ ಗೆದ್ದುಕೊಡಬಲ್ಲ 10 ಸ್ಪರ್ಧಿಗಳು

ರೋಯಿಂಗ್​ನಲ್ಲಿ ಮಿಂಚಿಂಗ್:

ಪುರುಷರ ಸಿಂಗಲ್ ಸ್ಕಲ್ಸ್ ಹೀಟ್ಸ್ ರೋಯಿಂಗ್ ಸ್ಪರ್ಧೆಯಲ್ಲಿ ಭಾರತದ ಬಲರಾಜ್ ಪನ್ವಾರ್ ಉತ್ತಮ ಪ್ರದರ್ಶನ ನೀಡಿದ್ದಾರೆ.  ಒಟ್ಟು 3 ನಿಮಿಷ 31 ಸೆಕೆಂಡುಗಳು ಮತ್ತು 24 ಮಿಲಿ ಸೆಕೆಂಡುಗಳಲ್ಲಿ ಗುರಿ ತಲುಪುವ ಮೂಲಕ ಬಲರಾಜ್ ನಾಲ್ಕನೇ ಸ್ಥಾನ ಪಡೆದುಕೊಂಡಿದ್ದಾರೆ. ಈ ಮೂಲಕ ನಾಳೆ ನಡೆಯಲಿರುವ ರೆಪೆಚೇಜ್ ಸುತ್ತಿಗೆ ಅರ್ಹತೆ ಪಡೆದುಕೊಂಡಿದ್ದಾರೆ.

 

 

Published On - 2:13 pm, Sat, 27 July 24