ಪ್ರಣಯದೂರು ಪ್ಯಾರಿಸ್‌ನಲ್ಲಿ 33ನೇ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಚಾಲನೆ ದೊರೆತಿದೆ. ಈ ಬಾರಿಯ ಕ್ರೀಡಾಕೂಟದಲ್ಲಿ ಒಟ್ಟು 206 ದೇಶಗಳ 10 ಸಾವಿರಕ್ಕೂ ಅಧಿಕ ಕ್ರೀಡಾಪಟುಗಳು ಕಾಣಿಸಿಕೊಳ್ಳುತ್ತಿದ್ದಾರೆ. ಈ ಹತ್ತು ಸಾವಿರ ಕ್ರೀಡಾಳುಗಳಲ್ಲಿ ಭಾರತದಿಂದ 117 ಸ್ಪರ್ಧಿಗಳಿದ್ದಾರೆ. ಇವರಲ್ಲಿ ಬಹುತೇಕರು ಹೊಸಬರು ಎಂಬುದು ವಿಶೇಷ. ಅಂದರೆ 72 ಭಾರತೀಯರು ಇದೇ ಮೊದಲ ಬಾರಿಗೆ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುತ್ತಿದ್ದಾರೆ.
ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತೀಯರು ಒಟ್ಟು 69 ಸ್ಪರ್ಧೆಗಳಲ್ಲಿ ಕಣಕ್ಕಿಳಿಯಲಿದ್ದಾರೆ. ಈ ಸ್ಪರ್ಧೆಗಳಲ್ಲಿ 10 ಪದಕಗಳು ಸಿಗುವುದು ಬಹುತೇಕ ಖಚಿತ ಎನ್ನಬಹುದು. ಏಕೆಂದರೆ ಈ ಹಿಂದಿನ ಪ್ರದರ್ಶನವನ್ನು ಗಣನೆಗೆ ತೆಗೆದುಕೊಂಡರೆ, ಈ ಬಾರಿ ಕೂಡ ಇವರಿಂದ ಉತ್ತಮ ಪ್ರದರ್ಶನ ನಿರೀಕ್ಷಿಸಬಹುದು. ಆ ಸ್ಪರ್ಧಿಗಳು ಯಾರೆಂದರೆ...
1- ನೀರಜ್ ಚೋಪ್ರಾ (ಪುರುಷರ ಜಾವೆಲಿನ್ ಎಸೆತ): ನೀರಜ್ ಚೋಪ್ರಾ 2020ರ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದರು. ಹೀಗಾಗಿ ಈ ಬಾರಿ ಕೂಡ ಪುರುಷರ ಜಾವೆಲಿನ್ ಥ್ರೋನಲ್ಲಿ ನೀರಜ್ ಕಡೆಯಿಂದ ಪದಕ ನಿರೀಕ್ಷಿಸಬಹುದು.
2- ನಿಖಾತ್ ಝರೀನ್ (ಮಹಿಳಾ ಬಾಕ್ಸಿಂಗ್ - 50 ಕೆಜಿ): ಈ ಬಾರಿಯ ಮಹಿಳಾ ಬಾಕ್ಸಿಂಗ್ನಲ್ಲಿ ನಿಖಾತ್ ಝರೀನ್ ಅವರಿಂದ ಪದಕ ನಿರೀಕ್ಷಿಸಬಹುದು. ಏಕೆಂದರೆ 50 ಕೆ.ಜಿ ವಿಭಾಗದ ಮಹಿಳಾ ಬಾಕ್ಸಿಂಗ್ನಲ್ಲಿ ಅವರು ಹಾಲಿ ವಿಶ್ವ ಚಾಂಪಿಯನ್. ಹಾಗೆಯೇ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲೂ ಚಾಂಪಿಯನ್ ಪಟ್ಟ ಅಲಂಕರಿಸಿದ್ದಾರೆ. ಹೀಗಾಗಿ ನಿಖಾತ್ ಕಡೆಯಿಂದಲೂ ಒಂದು ಪದಕವನ್ನು ಎದುರು ನೋಡಬಹುದು.
3- ಲೊವ್ಲಿನಾ ಬೊರ್ಗೊಹೈನ್ (ಮಹಿಳಾ ಬಾಕ್ಸಿಂಗ್ - 75 ಕೆಜಿ): ಟೊಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಕಂಚಿನ ಪದಕ ತಂದುಕೊಟ್ಟಿದ್ದ ಲೊವ್ಲಿನಾ ಕಡೆಯಿಂದಲೂ ಈ ಬಾರಿ ಪದಕ ನಿರೀಕ್ಷಿಸಬಹುದು. ಅದರಂತೆ ಮಹಿಳಾ ಬಾಕ್ಸಿಂಗ್ ವಿಭಾಗದಿಂದ ಈ ಬಾರಿ ಭಾರತಕ್ಕೆ ಎರಡು ಪದಕಗಳ ನಿರೀಕ್ಷೆಯಿದೆ.
4- ಸಾತ್ವಿಕ್ ಸಾಯಿರಾಜ್ ಮತ್ತು ಚಿರಾಗ್ ಶೆಟ್ಟಿ (ಬ್ಯಾಡ್ಮಿಂಟನ್ - ಪುರುಷರ ಡಬಲ್ಸ್): 2022ರಲ್ಲಿ ಐತಿಹಾಸಿಕ ಥಾಮಸ್ ಕಪ್ ಗೆದ್ದಿದ್ದ ಸಾತ್ವಿಕ್ ಸಾಯಿರಾಜ್ ಮತ್ತು ಚಿರಾಗ್ ಶೆಟ್ಟಿ ಈ ಬಾರಿ ಒಲಿಂಪಿಕ್ಸ್ ಪದಕ ಗೆಲ್ಲುವ ವಿಶ್ವಾಸದಲ್ಲಿದ್ದಾರೆ. ಏಕೆಂದರೆ ಈ ಜೋಡಿಯು ಈಗಾಗಲೇ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚು, ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನ ಗೆದ್ದುಕೊಂಡಿದ್ದಾರೆ. ಹೀಗಾಗಿ ಈ ಜೋಡಿಯಿಂದ ಬ್ಯಾಡ್ಮಿಂಟನ್‌ನಲ್ಲಿ ಪದಕವನ್ನು ಎದುರು ನೋಡಬಹುದು.
5- ಪಿವಿ ಸಿಂಧು (ಬ್ಯಾಡ್ಮಿಂಟನ್ - ಮಹಿಳಾ ಸಿಂಗಲ್ಸ್): ಒಲಿಂಪಿಕ್ಸ್ ಬ್ಯಾಡ್ಮಿಂಟನ್‌ನಲ್ಲಿ ಪಿವಿ ಸಿಂಧು ಭಾರತಕ್ಕೆ ಎರಡು ಪದಕಗಳನ್ನು ತಂದುಕೊಟ್ಟಿದ್ದಾರೆ. 2016 ರಲ್ಲಿ ರಿಯೊ ಬೆಳ್ಳಿ ಪದಕ ಗೆದ್ದಿದ್ದ ಸಿಂಧು, ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕಕ್ಕೆ ಮುತ್ತಿಟ್ಟಿದ್ದರು. ಹೀಗಾಗಿ ಈ ಬಾರಿ ಕೂಡ ಪಿವಿ ಸಿಂಧು ಕಡೆಯಿಂದ ಪದಕ ನಿರೀಕ್ಷಿಸಬಹುದು.
6- ಅಂತಿಮ್ ಪಂಘಲ್ (ಕುಸ್ತಿ - ಮಹಿಳೆಯರ 53 ಕೆಜಿ): ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ವಿಜೇತೆಯಾಗಿರುವ ಅಂತಿಮ್ ಪ್ಯಾರಿಸ್ ಒಲಿಂಪಿಕ್ಸ್ನಲ್ಲೂ ಕಣಕ್ಕಿಳಿಯುತ್ತಿದ್ದಾರೆ. ಹೀಗಾಗಿ ಮಹಿಳಾ ವಿಭಾಗದ ಕುಸ್ತಿಯಿಂದ ಒಂದು ಪದಕವನ್ನು ಎದುರು ನೋಡಬಹುದು.
7- ರೋಹನ್ ಬೋಪಣ್ಣ ಮತ್ತು ಎನ್. ಶ್ರೀರಾಮ್ ಬಾಲಾಜಿ (ಟೆನಿಸ್ - ಪುರುಷರ ಡಬಲ್ಸ್): ಪ್ಯಾರಿಸ್ ಒಲಿಂಪಿಕ್ಸ್ನ ಟೆನ್ನಿಸ್ನಲ್ಲಿ ರೋಹನ್ ಬೋಪಣ್ಣ ಮತ್ತು ಎನ್. ಶ್ರೀರಾಮ್ ಬಾಲಾಜಿ ಜೊತೆಯಾಗಿ ಕಣಕ್ಕಿಳಿಯಲಿದ್ದಾರೆ. ಪುರುಷರ ಡಬಲ್ಸ್ ಸ್ಪರ್ಧೆಯಲ್ಲಿ ಕಾಣಿಸಿಕೊಳ್ಳಲಿರುವ ಈ ಜೋಡಿಯಿಂದ ಕೂಡ ಪದಕವನ್ನು ನಿರೀಕ್ಷಿಸಬಹುದು.
8- ಮೀರಾಬಾಯಿ ಚಾನು (ಮಹಿಳಾ ವೇಟ್‌ಲಿಫ್ಟಿಂಗ್ - 49 ಕೆಜಿ): 2020 ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದಿರುವ ವೇಟ್‌ಲಿಫ್ಟರ್ ಮೀರಾಬಾಯಿ ಚಾನು ಪ್ಯಾರಿಸ್‌ನಲ್ಲಿ ಮಹಿಳೆಯರ 49 ಕೆಜಿ ವಿಭಾಗದಲ್ಲಿ ಕಣಕ್ಕಿಳಿಯುತ್ತಿದ್ದಾರೆ. ಕಳೆದ ಬಾರಿ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದ ಚಾನು ಕಡೆಯಿಂದ ಈ ಬಾರಿ ಚಿನ್ನದ ಪದಕವನ್ನು ನಿರೀಕ್ಷಿಸಬಹುದು.
9- ಸಿಫ್ಟ್ ಕೌರ್ ಸಮ್ರಾ (ಶೂಟಿಂಗ್ - ಮಹಿಳೆಯರ 50 ಮೀ ರೈಫಲ್ 3): ಏಷ್ಯನ್ ಗೇಮ್ಸ್‌ನಲ್ಲಿ ಮಹಿಳೆಯರ 50 ಮೀಟರ್ ರೈಫಲ್ 3 ಪೊಸಿಷನ್ ಸ್ಪರ್ಧೆಯಲ್ಲಿ ಸಿಫ್ಟ್ ಕೌರ್ ಸಮ್ರಾ 469.6 ಪಾಯಿಂಟ್‌ಗಳ ಹೊಸ ವಿಶ್ವ ದಾಖಲೆಯನ್ನು ನಿರ್ಮಿಸಿದ್ದರು. ಅಲ್ಲದೆ 2023ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗೆದ್ದಿದ್ದ ಚೀನಾದ ಜಾಂಗ್ ಕಿಯೊಂಗ್ಯು ಅವರನ್ನು ಸೋಲಿಸಿದ್ದರು. ಹೀಗಾಗಿ ಸಿಫ್ಟ್ ಕೌರ್ ಸಮ್ರಾ ಕಡೆಯಿಂದಲೂ ಪದಕವನ್ನು ನಿರೀಕ್ಷಿಸಬಹುದು.
10- ಭಾರತೀಯ ಪುರುಷರ ಹಾಕಿ ತಂಡ: ಟೊಕಿಯೋ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಭಾರತೀಯ ಪುರುಷರ ಹಾಕಿ ತಂಡವು 41 ವರ್ಷಗಳ ಪದಕದ ಬರ ನೀಗಿಸಿದ್ದರು. ಇದೀಗ ಅದೇ ಉತ್ಸಾಹದಲ್ಲಿರುವ ಟೀಮ್ ಇಂಡಿಯಾ ಕಡೆಯಿಂದ ಬಂಗಾರದ ಪದಕವನ್ನು ಎದುರು ನೋಡಬಹುದು.
Published On - 3:15 pm, Thu, 25 July 24