ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-18 ರ ಮೆಗಾ ಹರಾಜಿಗಾಗಿ ಸಿದ್ಧತೆಗಳು ಶುರುವಾಗಿದೆ. ಈ ಸಿದ್ಧತೆಗಳ ಬೆನ್ನಲ್ಲೇ ಐಪಿಎಲ್ ಮೆಗಾ ಹರಾಜಿನ ನಿಯಮದಲ್ಲಿ ಕೆಲ ಬದಲಾವಣೆಗಳನ್ನು ಮಾಡುವಂತೆ ಫ್ರಾಂಚೈಸಿಗಳು ಮನವಿ ಮಾಡಿದ್ದಾರೆ. ಇಲ್ಲಿ ಬಹುತೇಕ ಫ್ರಾಂಚೈಸಿಗಳು ಮೂರು ಮಾರ್ಪಾಡುಗಳನ್ನು ಮಾಡುವಂತೆ ಆಗ್ರಹಿಸಿದ್ದಾರೆ. ಆ ನಿಯಮಗಳಾವುವು ಎಂದು ನೋಡುವುದಾದರೆ...
5 ವರ್ಷಕ್ಕೆ ಮೆಗಾ ಹರಾಜು: ಐಪಿಎಲ್ ಮೆಗಾ ಹರಾಜನ್ನು ಐದು ವರ್ಷಗಳಿಗೆ ಒಮ್ಮೆ ನಡೆಸುವಂತೆ ಬಹುತೇಕ ಫ್ರಾಂಚೈಸಿಗಳು ಮನವಿ ಮಾಡಿದ್ದಾರೆ. ಈ ಹಿಂದೆ ಪ್ರತಿ ಮೂರು ವರ್ಷಗಳಿಗೊಮ್ಮೆ ಮೆಗಾ ಹರಾಜು ಆಯೋಜಿಸಲಾಗುತ್ತಿತ್ತು. ಈ ನಿಯಮವನ್ನು ಬದಲಿಸಿ 5 ವರ್ಷಗಳಿಗೆ ಮೆಗಾ ಹರಾಜು ನಡೆಸಲು ಆಗ್ರಹಿಸಿದ್ದಾರೆ. ಅಂದರೆ ಈ ಬಾರಿ ಮೆಗಾ ಹರಾಜು ನಡೆದರೆ, ಮುಂದಿನ ಮೆಗಾ ಹರಾಜು 2029 ರಲ್ಲಿ ನಡೆಯಲಿದೆ. ಇದರ ನಡುವೆ ಮಿನಿ ಹರಾಜು ಮಾತ್ರ ನಡೆಯಲಿದೆ.
ರಿಟೈನ್ ಆಟಗಾರರ ಸಂಖ್ಯೆ: ಮೆಗಾ ಹರಾಜಿಗೂ ಮುನ್ನ 4 ರಿಂದ 6 ಆಟಗಾರರನ್ನು ರಿಟೈನ್ ಮಾಡಿಕೊಳ್ಳಲು ಅವಕಾಶ ನೀಡುವಂತೆ ಕೆಲ ಫ್ರಾಂಚೈಸಿಗಳು ಮನವಿ ಮಾಡಿದೆ. ಈ ಹಿಂದಿನ ಮೆಗಾ ಹರಾಜಿಗೂ ಮುನ್ನ ಗರಿಷ್ಠ 4 ಆಟಗಾರರನ್ನು ರಿಟೈನ್ ಮಾಡಿಕೊಳ್ಳಲು ಅವಕಾಶವಿತ್ತು. ಆದರೆ ಈ ಬಾರಿ ಅದನ್ನು 4 ರಿಂದ 6 ಕ್ಕೆ ಏರಿಸಲು ಕೆಲ ಫ್ರಾಂಚೈಸಿಗಳು ವಿನಂತಿಸಿದೆ.
ಆರ್ಟಿಎಂ ಆಯ್ಕೆ: ಮೆಗಾ ಹರಾಜಿಗೂ ಮುನ್ನ 8 ಆಟಗಾರರ ಮೇಲೆ ಆರ್ಟಿಎಂ ಬಳಸಿಕೊಳ್ಳಲು ಅವಕಾಶ ನೀಡುವಂತೆ ಕೆಲ ಫ್ರಾಂಚೈಸಿಗಳು ಆಗ್ರಹಿಸಿದೆ. ಆರ್ಟಿಎಂ ಎಂದರೆ ರೈಟ್ ಟು ಮ್ಯಾಚ್ ಆಯ್ಕೆ. ಅಂದರೆ ತಮಗೆ ಬೇಕಾದ ಆಟಗಾರರನ್ನು ಆರ್ಟಿಎಂ ಆಯ್ಕೆ ಬಳಸಿ ಹರಾಜಿಗೆ ಬಿಡುಗಡೆ ಮಾಡುವುದು. ಹೀಗೆ ಹರಾಜಿಗೆ ಬಿಡುಗಡೆ ಮಾಡಿದ ಆಟಗಾರರನ್ನು ಇತರೆ ತಂಡ ಖರೀದಿಸಿದರೂ, ಆ ಮೊತ್ತವನ್ನು ತಾವೇ ಪಾವತಿಸುತ್ತೇವೆ ಎಂದು ತಿಳಿಸಿ ಬಿಡುಗಡೆ ಮಾಡಿದ ತಂಡವೇ ಮತ್ತೆ ಖರೀದಿಸುವುದು. ಕೆಕೆಆರ್ ಸೇರಿದಂತೆ ಕೆಲ ಫ್ರಾಂಚೈಸಿ ರಿಟೈನ್ ಆಯ್ಕೆ ನೀಡುವುದರ ಬದಲು ಆರ್ಟಿಎಂ ಆಯ್ಕೆ ನೀಡುವಂತೆ ಮನವಿ ಮಾಡಿದ್ದಾರೆ.
ಇದೀಗ ಐಪಿಎಲ್ ಫ್ರಾಂಚೈಸಿಗಳು ಈ ಮೂರು ಬೇಡಿಕೆಗಳನ್ನು ಬಿಸಿಸಿಐ ಮುಂದಿಟ್ಟಿದೆ. ಈ ಬಗ್ಗೆ ಚರ್ಚಿಸಲು ಈ ತಿಂಗಳಾಂತ್ಯದಲ್ಲಿ ಐಪಿಎಲ್ ಮಾಲೀಕರೊಂದಿಗೆ ಸಭೆ ಕರೆಯಲಾಗಿದ್ದು, ಈ ಸಭೆಯ ಬಳಿಕ ಮೆಗಾ ಹರಾಜಿನ ಅಂತಿಮ ರೂಪುರೇಷೆಗಳು ಹೊರಬೀಳಲಿದೆ.
Published On - 8:31 am, Thu, 25 July 24