
ಶ್ರೀಲಂಕಾದ 23 ವರ್ಷದ ಯುವ ಜಾವೆಲಿನ್ ತಾರೆ ರುಮೇಶ್ ತರಂಗ ಪತಿರಾಗೆ ಬೆಲ್ಜಿಯಂನ ಬ್ರಸೆಲ್ಸ್‌ನಲ್ಲಿ ನಡೆದ ಪ್ರತಿಷ್ಠಿತ ಡೈಮಂಡ್ ಲೀಗ್ 2026ರ ಫೈನಲ್ ಪಂದ್ಯಾವಳಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಈ ಮೂಲಕ ಈ ಸಾಧನೆ ಮಾಡಿದ ಶ್ರೀಲಂಕಾದ ಮೊದಲ ಅಥ್ಲೀಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಬ್ರಸೆಲ್ಸ್‌ನ ಕಿಂಗ್ ಬೌಡೌಯಿನ್ ಕ್ರೀಡಾಂಗಣದಲ್ಲಿ ತೀವ್ರ ಚಳಿ ಹಾಗೂ ಕಠಿಣ ಹವಾಮಾನ ಪರಿಸ್ಥಿತಿ ಇತ್ತು. ಇದರಿಂದಾಗಿ ವಿಶ್ವದ ನಂಬರ್ 1 ಜಾವೆಲಿನ್ ಪಟು ಪತಿರಾಗೆ ಆರಂಭದಲ್ಲಿ ತಡಕಾಡಿದರು. ಅವರ ಮೊದಲ ಎರಡು ಎಸೆತಗಳು ಕೇವಲ 80.42 ಮೀ. ಮತ್ತು 79.73 ಮೀ. ದೂರ ಸಾಗಿದ್ದವು. ಆ ಸಮಯದಲ್ಲಿ ಪೋಲೆಂಡ್‌ನ ಡಾವಿಡ್ ವೆಗ್ನರ್ ಹಾಗೂ ಒಲಿಂಪಿಕ್ ಚಾಂಪಿಯನ್ ಕೇಶಾರ್ನ್ ವಾಲ್ಕಾಟ್ ಮುನ್ನಡೆ ಕಾಯ್ದುಕೊಂಡಿದ್ದರು.
ಆದರೆ, ಮೂರನೇ ಅವಕಾಶದಲ್ಲಿ ಲಯಕ್ಕೆ ಮರಳಿದ ರುಮೇಶ್ ಪತಿರಾಗೆ, 89.04 ಮೀಟರ್ ದೂರಕ್ಕೆ ಜಾವೆಲಿನ್ ಎಸೆಯುವ ಮೂಲಕ ಅಗ್ರಸ್ಥಾನಕ್ಕೇರಿದರು. ಈ ಅಮೋಘ ಪ್ರದರ್ಶನವನ್ನು ಹಿಂದಿಕ್ಕಲು ಇತರ ಸ್ಪರ್ಧಿಗಳಿಗೆ ಸಾಧ್ಯವಾಗಲಿಲ್ಲ. ಅದರಂತೆ 89.04 ಮೀಟರ್ ದೂರದೊಂದಿಗೆ ರುಮೇಶ್ ಪತಿರಾಗೆ ಡೈಮಂಡ್ ಲೀಗ್ನಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದಾರೆ.
ಭಾರತದ ಸ್ಟಾರ್ ಜಾವೆಲಿನ್ ತಾರೆ ನೀರಜ್ ಚೋಪ್ರಾ ಅವರು ಡೈಮಂಡ್ ಲೀಗ್ ಫೈನಲ್ ಪಂದ್ಯಾವಳಿಗೆ ಅರ್ಹತೆ ಪಡೆದಿದ್ದರೂ ಸಹ ಗಾಯದ ಕಾರಣದಿಂದಾಗಿ ಭಾಗವಹಿಸಲು ಸಾಧ್ಯವಾಗಲಿಲ್ಲ. ಈ ಸರಣಿಯ ದೋಹಾ ಮತ್ತು ಲೌಸೇನ್ ಡೈಮಂಡ್ ಲೀಗ್‌ಗಳಲ್ಲಿ ಉತ್ತಮ ಪ್ರದರ್ಶನ ನೀಡಿ, ಅಂಕಗಳ ಪಟ್ಟಿಯಲ್ಲಿ 6ನೇ ಸ್ಥಾನ ಪಡೆಯುವ ಮೂಲಕ ಬ್ರಸೆಲ್ಸ್ ಫೈನಲ್‌ಗೆ ಸುಲಭವಾಗಿ ಅರ್ಹತೆ ಗಿಟ್ಟಿಸಿಕೊಂಡಿದ್ದರು.
ಆದರೆ, ತರಬೇತಿಯ ಸಮಯದಲ್ಲಿ ಅವರ ಕಾಲಿನ ಹಿಮ್ಮಡಿಗೆ ಗಾಯವಾಗಿದ್ದರಿಂದ ಅವರು ಕಡೆಯ ಕ್ಷಣದಲ್ಲಿ ಪಂದ್ಯಾವಳಿಯಿಂದ ಹಿಂದೆ ಸರಿಯಬೇಕಾಯಿತು. ಈ ಗಾಯದ ತೀವ್ರತೆಯಿಂದಾಗಿ ನೀರಜ್ ಚೋಪ್ರಾ ಅವರ 2026ರ ಇಡೀ ಕ್ರೀಡಾ ಸೀಸನ್ ಮುಕ್ತಾಯಗೊಂಡಿದ್ದು, ಮುಂಬರುವ ಜಪಾನ್‌ನ ನಾಗೋಯಾದಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲೂ ಅವರು ಭಾಗವಹಿಸುತ್ತಿಲ್ಲ.
16ನೇ ವಯಸ್ಸಿನಲ್ಲಿ ಶ್ರೀಲಂಕಾದ ಭರವಸೆಯ ಜೂನಿಯರ್ ಕ್ರಿಕೆಟ್ ವೇಗದ ಬೌಲರ್ ಆಗಿದ್ದ ರುಮೇಶ್ ತರಂಗ ಪತಿರಾಗೆ, ಗಂಟೆಗೆ 134 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡುತ್ತಿದ್ದರು. ಆದರೆ ಅವರ ಕೋಚ್ ಟೋನಿ ಪ್ರಸನ್ನ ಅವರಲ್ಲಿದ್ದ ಜಾವೆಲಿನ್ ಎಸೆಯುವ ಕೌಶಲ್ಯವನ್ನು ಗುರುತಿಸಿ ಈ ಕ್ರೀಡೆಗೆ ತರಬೇತಿ ನೀಡಿದರು. ಕ್ರಿಕೆಟ್ ಪಿಚ್‌ನಲ್ಲಿ ವೇಗವಾಗಿ ಚೆಂಡೆಸೆಯುತ್ತಿದ್ದ ಅದೇ ತೋಳುಗಳು ಇಂದು ಜಾಗತಿಕ ಮಟ್ಟದಲ್ಲಿ ಜಾವೆಲಿನ್ ಚಿನ್ನದ ಪದಕಗಳನ್ನು ಗೆಲ್ಲುತ್ತಿರುವುದು ವಿಶೇಷ.
ಇದನ್ನೂ ಓದಿ: ಇವತ್ತು ಸಂಡೇನಾ? ಪಾಕಿಗಳ ಕಾಲೆಳೆದ ಇರ್ಫಾನ್ ಪಠಾಣ್
“ಶ್ರೀಲಂಕಾದಂತಹ ಸಣ್ಣ ದೇಶದಿಂದ ಬಂದು ಇಷ್ಟು ದೊಡ್ಡ ಜಾಗತಿಕ ವೇದಿಕೆಯಲ್ಲಿ ಚಾಂಪಿಯನ್ ಆಗಿರುವುದು ನನಗೆ ನಿಜಕ್ಕೂ ಅಪಾರ ಸಂತೋಷ ತಂದಿದೆ” ಎಂದು ರುಮೇಶ್ ತರಂಗ ಪತಿರಾಗೆ ಪಂದ್ಯದ ನಂತರ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಈ ಐತಿಹಾಸಿಕ ಜಯದೊಂದಿಗೆ ಅವರು ಮುಂಬರುವ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲೂ ಚಿನ್ನದ ಪದಕ ಗೆಲ್ಲುವ ನೆಚ್ಚಿನ ಸ್ಪರ್ಧಿಯಾಗಿ ಹೊರಹೊಮ್ಮಿದ್ದಾರೆ.