ರೋಹಿತ್ ಶರ್ಮಾ ಸೀಮಿತ ಓವರ್‌ಗಳ ಪಂದ್ಯದಲ್ಲಿ ಭಾರತದ ರಾಷ್ಟ್ರೀಯ ಕ್ರಿಕೆಟ್ ತಂಡದ ಉಪನಾಯಕ. ದೇಶೀಯ ಕ್ರಿಕೆಟ್‌ನಲ್ಲಿ ಮುಂಬೈ ಪರ ಆಡುವ ರೋಹಿತ್, ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ನಾಯಕರಾಗಿದ್ದಾರೆ. 20 ವರ್ಷ ವಯಸ್ಸಿನವರಾಗಿದ್ದಾಗ ತಮ್ಮ ಅಂತರರಾಷ್ಟ್ರೀಯ ವೃತ್ತಿಜೀವನವನ್ನು ಪ್ರಾರಂಭಿಸಿದ ರೋಹಿತ್, 2007 ರ ಜೂನ್ 23 ರಂದು ಐರ್ಲೆಂಡ್ ವಿರುದ್ಧ ಏಕದಿನ ಅಂತಾರಾಷ್ಟ್ರೀಯ ಚೊಚ್ಚಲ ಪಂದ್ಯವನ್ನಾಡಿದರು. ಏಕದಿನ ಕ್ರಿಕೆಟ್ ಆವೃತ್ತಿಯಲ್ಲಿ ಮೂರು ಡಬಲ್-ಸೆಂಚುರಿಗಳನ್ನು ಹೊಂದಿರುವ ವಿಶ್ವದ ಏಕೈಕ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ರೋಹಿತ್ ಪಾತ್ರರಾಗಿದ್ದಾರೆ. ಅವರ ಟಿ 20 ವೃತ್ತಿಜೀವನವೂ ಅಷ್ಟೇ ಉತ್ತಮವಾಗಿದೆ. ಮಧ್ಯಮ ಕ್ರಮಾಂಕದಲ್ಲಿ ಸ್ಥಾನ ಪಡೆಯಲು ವಿಫಲವಾದ ನಂತರ ರೋಹಿತ್ ಶರ್ಮಾ ಓಪನರ್ ಆಗಿ ಟೆಸ್ಟ್ ಕ್ರಿಕೆಟ್‌ನಲ್ಲಿ ಅದ್ಭುತ ಪುನರಾಗಮನ ಮಾಡಿದ್ದಾರೆ.
ಟೀಂ ಇಂಡಿಯಾ ಪರ ರೋಹಿತ್
ಭಾರತಕ್ಕಾಗಿ 108 ಏಕದಿನ ಪಂದ್ಯಗಳನ್ನು ಆಡಿದ ನಂತರ ರೋಹಿತ್ ಶರ್ಮಾ ಅವರನ್ನು ರಾಷ್ಟ್ರೀಯ ಟೆಸ್ಟ್ ತಂಡಕ್ಕೆ ಆಯ್ಕೆ ಮಾಡಲಾಯಿತು. 2013 ರ ನವೆಂಬರ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಎರಡು ಟೆಸ್ಟ್ ಪಂದ್ಯಗಳಲ್ಲಿ ಬ್ಯಾಂಗ್-ಟು-ಬ್ಯಾಕ್ ಶತಕಗಳನ್ನು ಬಾರಿಸಿ ರೋಹಿತ್ ಶಾಶ್ವತ ಸ್ಥಾನ ಪಡೆದರು.
13 ನವೆಂಬರ್ 2014 ರಂದು ಕೋಲ್ಕತ್ತಾದ ಈಡನ್ ಗಾರ್ಡನ್‌ನಲ್ಲಿ ರೋಹಿತ್ ಶರ್ಮಾ ಶ್ರೀಲಂಕಾ ವಿರುದ್ಧ 264 ರನ್ ಗಳಿಸಿದರು, ಇದು ಏಕದಿನ ಪಂದ್ಯಗಳಲ್ಲಿ ಅತಿ ಹೆಚ್ಚು ವೈಯಕ್ತಿಕ ಸ್ಕೋರ್ ಆಗಿದೆ. ಟಿ 20 ಕ್ರಿಕೆಟ್‌ನಲ್ಲಿ 100 (35 ಎಸೆತಗಳು) ರನ್ ಗಳಿಸಿದ ವೇಗದ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೂ ರೋಹಿತ್ ಪಾತ್ರರಾಗಿದ್ದಾರೆ. ಐಪಿಎಲ್ನಲ್ಲಿ ತಮ್ಮ ತಂಡವನ್ನು 5 ಬಾರಿ ಚಾಂಪಿಯನ್ ಆಗಿ ಮುನ್ನಡೆಸಿದ ಮೊದಲ ನಾಯಕ ಎಂಬ ಹೆಗ್ಗಳಿಕೆ ರೋಹಿತ್ ಪಾಲಾಗಿದೆ. ಜೊತೆಗೆ ನವೆಂಬರ್ 2018 ರಲ್ಲಿ ಟಿ 20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನಾಲ್ಕು ಶತಕಗಳನ್ನು ಗಳಿಸಿದ ಮೊದಲ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಐಪಿಎಲ್ನಲ್ಲಿ ರೋಹಿತ್ ಮಿಂಚಿಂಗ್
ಐಪಿಎಲ್‌ಗಳಲ್ಲಿ 5,200 ಕ್ಕೂ ಹೆಚ್ಚು ರನ್ ಗಳಿಸಿರುವ ಸಾಧನೆ ರೋಹಿತ್ ಹೆಸರಿನಲ್ಲಿದೆ. ಶರ್ಮಾ ಅವರನ್ನು ಆರಂಭದಲ್ಲಿ ಡೆಕ್ಕನ್ ಚಾರ್ಜರ್ಸ್ ಫ್ರ್ಯಾಂಚೈಸ್ ಕೊಂಡುಕೊಂಡಿತು. ನಂತರೆ 2009 ರ ಆವೃತ್ತಿಯಲ್ಲಿ ಡೆಕ್ಕನ್ ಚಾರ್ಜರ್ಸ್ ರೋಹಿತ್ನನ್ನು ತಮ್ಮ ತಂಡದ ಉಪನಾಯಕನಾಗಿ ನೇಮಿಸಿತು. 2011 ರಲ್ಲಿ ಮುಂಬೈ ಇಂಡಿಯನ್ಸ್ ಫ್ರಾಂಚೈಸ್ ರೋಹಿತ್ನನ್ನು ತನ್ನ ಬತ್ತಳಿಕೆಗೆ ಹಾಕಿಕೊಂಡಿತು. 2012 ರಲ್ಲಿ, ರೋಹಿತ್ ಶರ್ಮಾ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ 60 ಎಸೆತಗಳಲ್ಲಿ 109 ರನ್ ಗಳಿಸುವ ಮೂಲಕ ತಮ್ಮ ಮೊದಲ ಐಪಿಎಲ್ ಶತಕವನ್ನು ಗಳಿಸಿದರು. ಆ ಪಂದ್ಯದಲ್ಲಿ ರೋಹಿತ್ ಪಂದ್ಯಶ್ರೇಷ್ಠರಾಗಿ ಹೊರಹೊಮ್ಮಿದರು. 2013 ರಲ್ಲಿ, ಅವರು ಮುಂಬೈ ಇಂಡಿಯನ್ಸ್‌ನ ಖಾಯಂ ನಾಯಕನಾಗಿ ಬಡ್ತಿ ಪಡೆದರು. ಮತ್ತು ತಂಡವು ಅವರ ನಾಯಕತ್ವದಲ್ಲಿ ಆ ವರ್ಷ ಮೊದಲ ಬಾರಿಗೆ ಐಪಿಎಲ್ ಪ್ರಶಸ್ತಿಯನ್ನು ಗೆದ್ದುಕೊಂಡಿತು.
2015 ರಲ್ಲಿ ಫೈನಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮಣಿಸುವ ಮೂಲಕ ಮುಂಬೈ ಇಂಡಿಯನ್ಸ್ ತಂಡವನ್ನು ಮತ್ತೆ ಐಪಿಎಲ್ ಪ್ರಶಸ್ತಿ ಗೆಲ್ಲುವಂತೆ ಮಾಡಿದ ಹೆಗ್ಗಳಿಕೆ ರೋಹಿತ್ನದ್ದು. ಜೊತೆಗೆ ಫೈನಲ್‌ನಲ್ಲಿ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿಯನ್ನೂ ಗೆದ್ದರು. 2017 ರಲ್ಲಿ, ಮುಂಬೈ ಇಂಡಿಯನ್ಸ್ ಪಾಯಿಂಟ್ ಟೆಬಲ್ನಲ್ಲಿ ಮೊದಲ ಸ್ಥಾನ ಗಳಿಸಿತು. ಜೊತೆಗೆ ರೋಹಿತ್ ನಾಯಕತ್ವದಲ್ಲಿ ಫೈನಲ್ ಪಂದ್ಯವನ್ನು ಗೆದ್ದಿತು. ಮೂರು ಬಾರಿ ಐಪಿಎಲ್ ಗೆದ್ದ ತಂಡವನ್ನು ಮುನ್ನಡೆಸಿದ ಇಬ್ಬರು ಸ್ಕಿಪ್ಪರ್‌ಗಳಲ್ಲಿ ರೋಹಿತ್ ಕೂಡ ಒಬ್ಬರು.
2018 ರಲ್ಲಿ, ಮುಂಬೈ ಇಂಡಿಯನ್ಸ್ ತಂಡವು ಗೆಲ್ಲಲೇಬೇಕಾದ ಪಂದ್ಯದಲ್ಲಿ ದೆಹಲಿ ಡೇರ್‌ಡೆವಿಲ್ಸ್ ವಿರುದ್ಧ ಸೋತ ನಂತರ ಪ್ಲೇಆಫ್‌ಗೆ ಅರ್ಹತೆ ಪಡೆಯಲು ಸಾಧ್ಯವಾಗಲಿಲ್ಲ. 2019 ರಲ್ಲಿ ಮುಂಬೈ ಇಂಡಿಯನ್ಸ್ ಭರ್ಜರಿ ಪುನರಾಗಮನ ಮಾಡಿ 4 ನೇ ಐಪಿಎಲ್ ಪ್ರಶಸ್ತಿಯನ್ನು ಗೆದ್ದುಕೊಂಡಿತು. ರೋಹಿತ್ ಶರ್ಮಾ ನೇತೃತ್ವದ ತಂಡವು ಫೈನಲ್‌ನಲ್ಲಿ ಎಂಎಸ್ ಧೋನಿಯ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸೋಲಿಸಿತು. 2020 ರಲ್ಲಿ, ಮುಂಬೈ ಇಂಡಿಯನ್ಸ್ ಮತ್ತೆ ಚಾಂಪಿಯನ್ ಪಟ್ಟ ಅಲಂಕರಿಸಿತು. ಫೈನಲ್‌ನಲ್ಲಿ ಎಂಐ, ದೆಹಲಿ ಕ್ಯಾಪಿಟಲ್ಸ್ ತಂಡವನ್ನು ಸೋಲಿಸಿ ತನ್ನ ದಾಖಲೆಯ ಐದನೇ ಪ್ರಶಸ್ತಿಯನ್ನು ಗೆದ್ದುಕೊಂಡಿತು.
ಐಪಿಎಲ್ನಲ್ಲಿ ರೋಹಿತ್ ಬ್ಯಾಟಿಂಗ್
ವರ್ಷ | ಪಂದ್ಯ | ರನ್ | ಅತ್ಯಧಿಕ ರನ್ | ಸರಾಸರಿ | ಶತಕ | ಅರ್ಧ ಶತಕ |
2020 | 12 | 332 | 80 | 27.66 | 0 | 3 |
2019 | 15 | 405 | 67 | 28.92 | 0 | 2 |
2018 | 14 | 286 | 94 | 23.83 | 0 | 2 |
2017 | 17 | 333 | 67 | 23.78 | 0 | 3 |
2016 | 14 | 489 | 85* | 44.45 | 0 | 5 |
2015 | 16 | 482 | 98* | 34.42 | 0 | 3 |
2014 | 15 | 390 | 59* | 30 | 0 | 3 |
2013 | 19 | 538 | 79* | 38.42 | 0 | 4 |
2012 | 17 | 433 | 109* | 30.92 | 1 | 3 |
2011 | 16 | 372 | 87 | 33.81 | 0 | 3 |
2010 | 16 | 404 | 73 | 28.85 | 0 | 3 |
2009 | 16 | 362 | 52 | 27.84 | 0 | 1 |
2008 | 13 | 404 | 76* | 36.72 | 0 | 4 |
ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ರೋಹಿತ್ ಸಾಧನೆ
ಆವೃತ್ತಿ | ಪಂದ್ಯ | ರನ್ | ಅತ್ಯಧಿಕ ರನ್ | ಸರಾಸರಿ | ಶತಕ | ದ್ವಿ ಶತಕ | ಅರ್ಧ ಶತಕ |
ಟೆಸ್ಟ್ | 38 | 2615 | 212 | 46.7 | 7 | 1 | 12 |
ಏಕದಿನ | 227 | 9205 | 264 | 48.96 | 29 | 3 | 43 |
T20 | 111 | 2864 | 118 | 32.18 | 4 | 0 | 22 |