ಜಂಟಲ್ಮ್ಯಾನ್ ಗೇಮ್ ಕ್ರಿಕೆಟ್ನಲ್ಲಿ 360 ಡಿಗ್ರಿ ಬ್ಯಾಟ್ಸ್‌ಮನ್ ಎಂದೂ ಕರೆಯಲ್ಪಡುವ ಎಬಿ ಡಿವಿಲಿಯರ್ಸ್ (AB de Villiers) , ತನ್ನ ವಿಭಿನ್ನ ಶೈಲಿಯ ಬ್ಯಾಟಿಂಗ್ನಿಂದಾಗಿ ಪ್ರಪಂಚದಾದ್ಯಂತ ತನ್ನದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಒಮ್ಮೆ ಡಿವಿಲಿಯರ್ಸ್ ಕ್ರೀಸ್ ಕಚ್ಚಿ ನಿಂತರೆಂದರೆ ಎದುರಾಳಿ ತಂಡದ ಬೌಲರ್ ಕಥೆ ಅಲ್ಲಿಗೆ ಮುಗಿಯಿತು ಎಂಬುದು ಸತ್ಯವಾದ ಮಾತು. ಆರ್ಸಿಬಿ (Royal Challengers Bangalore) ತಂಡ ಸಂಕಷ್ಟದಲ್ಲಿದ್ದಾಗಲೆಲ್ಲ ಏಕಾಂಗಿ ನಿಂತು ಹೋರಾಡಿ ತಂಡವನ್ನು ಗೆಲುವಿನ ದಡ ಸೇರಿಸುವ ಈ ಸವ್ಯಸಾಚಿ, ಆರ್ಸಿಬಿಯ ಪ್ರಮುಖ ಬ್ಯಾಟಿಂಗ್ ಅಸ್ತ್ರವಾಗಿದ್ದಾರೆ.
2015 ರ ಐಪಿಎಲ್ ಆವೃತ್ತಿಯಲ್ಲಿ ಡಿವಿಲಿಯರ್ಸ್, ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ ಭರ್ಜರಿ ಶತಕ ಮತ್ತು 2016 ರಲ್ಲಿ ಗುಜರಾತ್ ಲಯನ್ಸ್ ವಿರುದ್ಧ ಬೆಂಗಳೂರಿನಲ್ಲಿ ಮತ್ತೊಂದು ಶತಕ ಬಾರಿಸಿ ಮಿಂಚಿದ್ದಾರೆ. ವಿರಾಟ್ ಕೊಹ್ಲಿ ಅವರೊಂದಿಗೆ ಎಬಿ ಆರ್ಸಿಬಿಗೆ ಐದು ಬಾರಿ 100+ ರನ್ಗಳ ಪಾಲುದಾರಿಕೆಯನ್ನು ಮತ್ತು ಎರಡು ಬಾರಿ 200+ ರನ್ಗಳ ಜೊತೆಯಾಟವನ್ನು ಆಡಿದ್ದಾರೆ.
ವಿಕೆಟ್ ಕೀಪಿಂಗ್ ಕೂಡ ಮಾಡುತ್ತಾರೆ
ಇಂಡಿಯನ್ ಪ್ರೀಮಿಯರ್ ಲೀಗ್‍ನ ಮೊದಲ ಮೂರು ಆವೃತ್ತಿಗಳಲ್ಲಿ ಡೆಲ್ಲಿ ಡೇರ್ಡೆವಿಲ್ಸ್ ಪರವಾಗಿ ಆಡಿದ್ದರು. ಆದರೆ ನಂತರ ನಡೆದ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸೇರಿಕೊಂಡರು. ಇವರು ಬಲಗೈ ಮಧ್ಯಮ ಕ್ರಮಾಂಕದ ಆಟಗಾರನಾಗಿದ್ದು ಕೆಲವೊಮ್ಮೆ ಅಗ್ರಕ್ರಮಾಂಕದಲ್ಲೂ ಆಡುತ್ತಾರೆ. ಮೊದಮೊದಲು ಕ್ಷೇತ್ರ ರಕ್ಷಣೆ ಮಾಡುತ್ತಿದ್ದ ಎಬಿಡಿ ಕೆಲವೊಮ್ಮೆ ವಿಕೆಟ್ ಕೀಪಿಂಗ್ ಕೂಡ ಮಾಡುತ್ತಾರೆ.
ಕೊನೆಯ 10 ಓವರ್‌ಗಳಲ್ಲಿ ಎಬಿ ಅಪಾಯಕಾರಿ
ಐಪಿಎಲ್ 2021 ರಲ್ಲಿ ಎಬಿ ಡಿವಿಲಿಯರ್ಸ್ ಅವರ ಅಬ್ಬರವನ್ನು ಕಣ್ತುಂಬಿಸಿಕೊಳ್ಳಲು ಲಕ್ಷಾಂತರ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಅದರಲ್ಲೂ 10 ನೇ ಓವರ್ ನಂತರ ಬ್ಯಾಟಿಂಗ್ ಮಾಡಲು ಬಂದಾಗ ಡಿವಿಲಿಯರ್ಸ್ ಆಟವನ್ನು ನೋಡುವುದೆ ಚೆಂದ. ಕೊನೆಯ 10 ಓವರ್‌ಗಳಲ್ಲಿ ಎದುರಾಳಿ ತಂಡದ ಬೌಲರ್ಗಳನ್ನು ಮನಸೋಇಚ್ಚೆ ದಂಡಿಸುವ ಡಿವಿಲಿಯರ್ಸ್ ರನ್ ಮಳೆಯನ್ನೇ ಹರಿಸುತ್ತಾರೆ.
ಇದಕ್ಕೆ ಸಾಕ್ಷಿಯೆಂಬಂತೆ ಕಳೆದ ಆವೃತ್ತಿಯ ಅಂಕಿ ಅಂಶವನ್ನೇ ಗಮನಿಸಿದರೆ, ಕಳೆದ ಆವೃತ್ತಿಯಲ್ಲಿ 10 ಓವರ್ಗಳ ನಂತರ ಒಟ್ಟು 9 ಇನ್ನಿಂಗ್ಸ್ನಲ್ಲಿ ಬ್ಯಾಟಿಂಗ್ಗೆ ಬಂದಿರುವ ಡಿವಿಲಿಯರ್ಸ್ 187. 42 ಸ್ಟ್ರೈಕ್ ರೆಟ್ನಲ್ಲಿ ಬರೋಬ್ಬರಿ 298 ರನ್ ಗಳಿಸಿದ್ದಾರೆ. ಇದರಲ್ಲಿ ಅಮೋಘ 4 ಅರ್ಧಶತಕ ಸಹ ಸೇರಿವೆ. ಕೊನೆಯ 10 ಓವರ್ನಲ್ಲಿ 59.6 ರ ಸರಾಸರಿಯಲ್ಲಿ ರನ್ ಗಳಿಸಿರುವ ಡಿವಿಲಿಯರ್ಸ್, ಎದುರಾಳಿಗಳಿಗೆ ತುಂಬಾ ಅಪಾಯಕಾರಿಯಾಗುತ್ತಾರೆ.
ಹಾಗೆಯೇ ಮೊದಲ 10 ಓವರ್‌ಗಳಲ್ಲಿ ಬ್ಯಾಟಿಂಗ್ ಮಾಡಲು ಬಂದ ಸಮಯದಲ್ಲಿ ಡಿವಿಲಿಯರ್ಸ್, 5 ಇನ್ನಿಂಗ್ಸ್‌ಗಳಲ್ಲಿ ಕೇವಲ 156 ರನ್ ಗಳಿಸಿದ್ದಾರೆ. 122.83 ಸ್ಟ್ರೈಕ್ ರೇಟ್‌ನೊಂದಿಗೆ 1 ಅರ್ಧಶತಕವನ್ನು ಗಳಿಸಿರುವ ಡಿವಿಲಿಯರ್ಸ್ ಅವರ ಸರಾಸರಿ 31.2 ಆಗಿದೆ. ಹೀಗಾಗಿ ಡಿವಿಲಿಯರ್ಸ್ ಕೊನೆಯ 10 ಓವರ್ಗಳಲ್ಲೇ ಬ್ಯಾಟಿಂಗ್ಗೆ ಬರುವುದು ಸೂಕ್ತವೆನಿಸುತ್ತದೆ.
ಐಪಿಎಲ್ನಲ್ಲಿ ಡಿವಿಲಿಯರ್ಸ್
ವರ್ಷ | ಪಂದ್ಯ | ರನ್ | ಅತ್ಯಧಿಕ ರನ್ | ಸರಾಸರಿ | ಶತಕ | ಅರ್ಧ ಶತಕ |
2020 | 15 | 454 | 73* | 45.4 | 0 | 5 |
2019 | 13 | 442 | 82* | 44.2 | 0 | 5 |
2018 | 12 | 480 | 90* | 53.33 | 0 | 6 |
2017 | 9 | 216 | 89* | 27 | 0 | 1 |
2016 | 16 | 687 | 129* | 52.84 | 1 | 6 |
2015 | 16 | 513 | 133* | 46.63 | 1 | 2 |
2014 | 14 | 395 | 89* | 35.9 | 0 | 3 |
2013 | 14 | 360 | 64 | 36 | 0 | 2 |
2012 | 16 | 319 | 64* | 39.87 | 0 | 3 |
2011 | 16 | 312 | 65 | 34.66 | 0 | 2 |
2010 | 7 | 111 | 45 | 15.85 | 0 | 0 |
2009 | 15 | 465 | 105* | 51.66 | 1 | 3 |
2008 | 6 | 95 | 26* | 19 | 0 | 0 |
ಅಂತರರಾಷ್ಟ್ರೀಯ ಪಂದ್ಯದಲ್ಲಿ ಡಿವಿಲಿಯರ್ಸ್ ಪ್ರದರ್ಶನ
ಆವೃತ್ತಿ | ಪಂದ್ಯ | ರನ್ | ಅತ್ಯಧಿಕ ರನ್ | ಸರಾಸರಿ | ಶತಕ | ದ್ವಿ ಶತಕ | ಅರ್ಧ ಶತಕ |
ಟೆಸ್ಟ್ | 114 | 8765 | 278 | 50.66 | 22 | 2 | 25 |
ಏಕದಿನ | 228 | 9577 | 176 | 53.5 | 25 | 0 | 62 |
T20 | 78 | 1672 | 79 | 26.12 | 0 | 0 | 28 |
Published On - 3:46 pm, Fri, 9 April 21