ಸಂಜು ಸ್ಯಾಮ್ಸನ್ ಪ್ರಸ್ತುತವಾಗಿ ಭಾರತದ ಶ್ರೇಷ್ಠ ಯುವ ಬ್ಯಾಟ್ಸ್​ಮನ್: ಗಂಭೀರ್

|

Updated on: Sep 23, 2020 | 9:45 PM

ಕೇರಳವನ್ನು ಭೂಮಿಯ ಮೇಲಿನ ಸ್ವರ್ಗ ಅಂತ ಕರೆಯುತ್ತಾರೆ. ಅತ್ಯಂತ ರಮಣೀಯ ಸ್ಥಳಗಳ ಬೀಡಾಗಿರುವ ಈ ನಾಡು ಕ್ರೀಡೆಯಲ್ಲಿ ಯಾವಾಗಲೂ ಮುಂದು. ಅನೇಕ ಅಂತರರಾಷ್ಟ್ರೀಯ ಅಥ್ಲೀಟ್​ಗಳನ್ನು ದೇಶಕ್ಕೆ ನೀಡಿದೆ. ಹಾಗೆ ನೋಡಿದರೆ ಫುಟ್​ಬಾಲ್ ಇಲ್ಲಿನ ಅತ್ಯಂತ ಜನಪ್ರಿಯ ಆಟ. ಕ್ರಿಕೆಟ್ ವಿಷಯಕ್ಕೆ ಬಂದರೆ ಕೆಲವೇ ಕೆಲವು ಮಲೆಯಾಳಿಗಳು ಭಾರತವನ್ನು ಪ್ರತಿನಿಧಿಸಿದ್ದಾರೆ. ಅವರಲ್ಲಿ ಮೊದಲಿಗರೆಂದರೆ ವೇಗದ ಬೌಲರ್ ಟಿನು ಯೊಹಾನನ್, ನಂತರ ವಿವಾದಾತ್ಮಕ ವೇಗಿ ಎಸ್ ಶ್ರೀಶಾಂತ್, ಮತ್ತು 2015ರಲ್ಲಿ ಸಂಜು ಸ್ಯಾಮ್ಸ​ನ್. ಈ ನಡುವೆ ಬೆಸಿಲ್ ಥಂಪಿ ರಾಷ್ಟ್ರೀಯ […]

ಸಂಜು ಸ್ಯಾಮ್ಸನ್ ಪ್ರಸ್ತುತವಾಗಿ ಭಾರತದ ಶ್ರೇಷ್ಠ ಯುವ ಬ್ಯಾಟ್ಸ್​ಮನ್: ಗಂಭೀರ್
ಸಂಜು ಸ್ಯಾಮ್ಸನ್
Follow us on

ಕೇರಳವನ್ನು ಭೂಮಿಯ ಮೇಲಿನ ಸ್ವರ್ಗ ಅಂತ ಕರೆಯುತ್ತಾರೆ. ಅತ್ಯಂತ ರಮಣೀಯ ಸ್ಥಳಗಳ ಬೀಡಾಗಿರುವ ಈ ನಾಡು ಕ್ರೀಡೆಯಲ್ಲಿ ಯಾವಾಗಲೂ ಮುಂದು. ಅನೇಕ ಅಂತರರಾಷ್ಟ್ರೀಯ ಅಥ್ಲೀಟ್​ಗಳನ್ನು ದೇಶಕ್ಕೆ ನೀಡಿದೆ. ಹಾಗೆ ನೋಡಿದರೆ ಫುಟ್​ಬಾಲ್ ಇಲ್ಲಿನ ಅತ್ಯಂತ ಜನಪ್ರಿಯ ಆಟ. ಕ್ರಿಕೆಟ್ ವಿಷಯಕ್ಕೆ ಬಂದರೆ ಕೆಲವೇ ಕೆಲವು ಮಲೆಯಾಳಿಗಳು ಭಾರತವನ್ನು ಪ್ರತಿನಿಧಿಸಿದ್ದಾರೆ.

ಅವರಲ್ಲಿ ಮೊದಲಿಗರೆಂದರೆ ವೇಗದ ಬೌಲರ್ ಟಿನು ಯೊಹಾನನ್, ನಂತರ ವಿವಾದಾತ್ಮಕ ವೇಗಿ ಎಸ್ ಶ್ರೀಶಾಂತ್, ಮತ್ತು 2015ರಲ್ಲಿ ಸಂಜು ಸ್ಯಾಮ್ಸ​ನ್. ಈ ನಡುವೆ ಬೆಸಿಲ್ ಥಂಪಿ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾದರಾದರೂ ಅಡುವ ಹನ್ನೊಂದರಲ್ಲಿ ಅವಕಾಶ ಪಡೆಯಲಿಲ್ಲ. ಆದರೀಗ ಪರಿಸ್ಥಿತಿ ಬದಲಾಗುವ ಲಕ್ಷಣಗಳು ಕಾಣುತ್ತಿವೆ.

ಹೌದು, ಸಂಜು ಸ್ಯಾಮ್ಸ​ನ್ ಕೇರಳದ ಎಲ್ಲ ಯುವ ಆಟಗಾರರಿಗೆ, ಶಾಲಾ ಬಾಲಕರಿಗೆ ಈಗಾಗಲೇ ಆರಾಧ್ಯ ದೈವವಾಗಿಬಿಟ್ಟಿದ್ದಾರೆ. ಹಾಲಿ ಮತ್ತು ಮಾಜಿ ಆಟಗಾರರು ಅಷ್ಟ್ಯಾಕೆ ರಾಜಕಾರಣಿಗಳು ಸಹ ಸಂಜು ಅವರಲ್ಲಿನ ಪ್ರತಿಭೆ ಕಂಡು ಬೆರಗಾಗಿದ್ದಾರೆ. ಮಂಗಳವಾರದಂದು ಅವರು ಚೆನೈ ಸೂಪರ್ ಕಿಂಗ್ಸ್ ಬೌಲರ್​ಗಳನ್ನು ದಂಡಿಸಿದ ಪರಿ ನೋಡಿ ಖ್ಯಾತ ಕಾಮೆಂಟೇಟರ್ ಹರ್ಷ ಭೋಗ್ಲೆ ಸ್ಯಾಮ್ಸನ್ ಅವರಾಡುವುದನ್ನು ದಿನಾಲೂ ನೋಡಲಿಚ್ಛಿಸುತ್ತೇನೆ ಅಂತ ಟ್ವೀಟ್ ಮಾಡಿದ್ದಾರೆ.

‘‘ಕೇವಲ 19 ಎಸೆತಗಳಲ್ಲಿ 50 ರನ್! ಅವರ ಪರಿಪೂರ್ಣ ಮತ್ತು ಸೊಗಸಾದ ಹೊಡೆತಗಳನ್ನು ವೀಕ್ಷಿಸುವುದೇ ಒಂದು ಸುಂದರ ಅನುಭವ. ಅವರು ಬ್ಯಾಟ್ ಮಾಡುವುದನ್ನು ನಾನು ದಿನವಿಡೀ ಮತ್ತು ಪ್ರತಿದಿನ ನೋಡಲಿಚ್ಛಿಸುತ್ತೇನೆ,’’ ಎಂದು ಭೋಗ್ಲೆ ಹೇಳಿದ್ದಾರೆ.

ಸಿಎಸ್​ಕೆ ಕ್ಯಾಪ್ಟನ್ ಎಮ್ ಎಸ್ ಧೋನಿ ರಾಜಸ್ತಾನ ರಾಯಲ್ಸ್ ವಿರುದ್ಧ ಆಡಿದ ಪಂದ್ಯದಲ್ಲಿ ತಡವಾಗಿ ಕ್ರೀಸಿಗೆ ಬಂದಿದ್ದನ್ನು ಬಲವಾಗಿ ಟೀಕಿಸಿರುವ ಕೆಕೆಆರ್ ಟೀಮಿನ ಮಾಜಿ ನಾಯಕ ಗೌತಮ್ ಗಂಭೀರ್, ಸ್ಯಾಮ್ಸನ್ ಬಗ್ಗೆ ಮಾತ್ರ ಭಾರಿ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

‘‘ಸಂಜು ಸ್ಯಾಮ್ಸನ್ ಪ್ರಸ್ತುತವಾಗಿ ಭಾರತದ ಅತ್ಯುತ್ತಮ ವಿಕೆಟ್​ಕೀಪರ್ಬ್ಯಾಟ್ಸ್​ಮನ್ ಮಾತ್ರ ಅಲ್ಲ, ಭಾರತದ ಶ್ರೇಷ್ಠ ಯುವ ಬ್ಯಾಟ್ಸ್​ಮನ್​ ಕೂಡ ಆಗಿದ್ದಾರೆ. ಯಾರಾದರೂ ಈ ವಿಷಯದ ಬಗ್ಗೆ ಚರ್ಚಿಸಲು ಇಚ್ಛಿಸಿದಲ್ಲಿ ನಾನು ತಯಾರಿದ್ದೇನೆ’’ ಎಂದು ಗಂಭೀರ್ ಟ್ವೀಟ್ ಮಾಡಿದ್ದಾರೆ.

ಗಂಭೀರ್ ಅವರ ಟ್ವೀಟ್​ಗೆ ಪ್ರತಿಕ್ರಿಯಿಸಿರುವ ಹಿರಿಯ ಕಾಂಗ್ರೆಸ್ ನಾಯಕ ಶಶಿ ತರೂರ್, ನಾನು ಚರ್ಚೆಗೆ ಸಿದ್ಧನಿಲ್ಲ ಅಂತ ಹೇಳಿದ್ದಾರೆ.

‘‘ನಿಮ್ಮೊಂದಿಗೆ ವಾದಿಸಲು ನಾನು ಸಿದ್ಧನಿಲ್ಲ ಗೌತಮ್ ಗಂಭೀರ್! 14 ವರ್ಷದ ಬಾಲಕನಾಗಿದ್ದಾಗಿನಿಂದ ನಾನು ಸಂಜುನನ್ನು ಬಲ್ಲೆ. ಭವಿಷ್ಯದ ಎಮ್​ ಎಸ್ ಧೋನಿ ನೀನೇ ಅಂತ ಅವನಿಗೆ ಹೇಳಿದ್ದೆ. ಅವನಲ್ಲಿ ಆ ಸಾಮರ್ಥ್ಯವಿದೆ ಮತ್ತು ಅವನ ಆತ್ಮವಿಶ್ವಾಸ ದಿನೇದಿನೆ ಹೆಚ್ಚುತ್ತಿದೆ. ಅವನಿಗೆ ಈಗ ಬೇಕಿರುವುದು ಅವಕಾಶಗಳು ಮಾತ್ರ,’’ ಅಂತ ತರೂರ್ ಟ್ವೀಟ್ ಮಾಡಿದ್ದಾರೆ.

ಬ್ಯಾಟಿಂಗ್ ಲೆಜೆಂಡ್ ಸಚಿನ್ ತೆಂಡೂಲ್ಕರ್ ಸಹ ಟ್ವೀಟ್ ಮಾಡಿ, ‘‘ಅವರು ಬಾರಿಸಿದ ಹೊಡೆತಗಳು ಸ್ಲಾಗ್ ಆಗಿರಲಿಲ್ಲ, ಅವು ಪಕ್ಕಾ ಕ್ರಿಕೆಟಿಂಗ್ ಮತ್ತು ಕಳಂಕರಹಿತ ಅಗಿದ್ದವು,’’ ಎಂದಿದ್ದಾರೆ.

ಖುದ್ದು ಕ್ರಿಕೆಟ್ ದೇವರೇ ಹಾಗೆ ಹೇಳಿರಬೇಕಾದರೆ ಸ್ಯಾಮ್ಸನ್ ಪ್ರತಿಭೆ ಎಂಥದೆನ್ನುವುದನ್ನು ಅರ್ಥಮಾಡಿಕೊಳ್ಳಬಹುದು.