ಇದೇ ಮೊದಲ ಬಾರಿಗೆ ರಾಜ್ಯದಲ್ಲಿ ಸ್ಪೋರ್ಟ್ಸ್ ಫಾರ್ ಆಲ್ ಚಾಂಪಿಯನ್‌ಶಿಪ್ (SFA Championship) ನಡೆಯುತ್ತಿದ್ದು, ಬೆಂಗಳೂರಿನ ಕಂಠೀರವ ಸ್ಟೇಡಿಯಂ ಮತ್ತು ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ (Kanteerava stadium and Koramangala Indoor stadium, w) ಈ ಕ್ರೀಡಾಕೂಟ ನಡೆಯಲ್ಲಿದೆ. 2024 ರ ಜನವರಿಯಿಂದ ಆರಂಭವಾಗಲಿರುವ ಈ ಚಾಂಪಿಯನ್ಶಿಪ್ನಲ್ಲಿ ಬೆಂಗಳೂರಿನ ಶಾಲೆಗಳು 30 ಕ್ಕೂ ಅಧಿಕ ವಿವಿದ ಕ್ರೀಡೆಗಳಲ್ಲಿ ಸ್ಪರ್ಧಿಸಬಹುದಾಗಿದೆ. ನಗರದಲ್ಲಿ ಇದೇ ಮೊದಲ ಬಾರಿಗೆ ಈ ಈವೆಂಟ್ ಆಯೋಜನೆಗೊಳ್ಳುತ್ತಿದ್ದು, ಕ್ರೀಡಾ ವಿಭಾಗದಲ್ಲಿ ಯಾವ ಶಾಲೆ ಬಲಿಷ್ಠವಾಗಿದೆ ಹಾಗೂ ನಗರದ ಕ್ರೀಡಾ ಸಾಮರ್ಥ್ಯವನ್ನು ಕಂಡುಕೊಳ್ಳಲು ಇದು ಸಹಕಾರಿಯಾಗಲಿದೆ.
ಇನ್ನು ಈ ಚಾಂಪಿಯನ್ಶಿಪ್ನಲ್ಲಿ ಭಾಗವಹಿಸಬೇಕೆನ್ನುವ ಶಾಲೆಗಳು www.sfaplay.com ನಲ್ಲಿ ನೋಂದಾಯಿಸಿಕೊಳ್ಳಬಹುದಾಗಿದೆ. ಅಲ್ಲದೆ ಪ್ರತಿ ಶಾಲೆಯು 30 ಕ್ಕೂ ಹೆಚ್ಚು ಕ್ರೀಡೆಗಳಲ್ಲಿ ಸ್ಪರ್ಧಿಸಲು ತಮ್ಮ ಶಾಲೆಗಳಿಂದ ಅಥ್ಲೀಟ್‌ಗಳ ತಂಡವನ್ನು ಕಳುಹಿಸಬಹುದಾಗಿದೆ.
ಈ ಚಾಂಪಿಯನ್ಶಿಪ್ನಲ್ಲಿ ಪಾಲ್ಗೊಳ್ಳುವ ಯುವ ಅಥ್ಲೀಟ್‌ಗಳಿಗೆ ವೃತ್ತಿಪರ ಮೂಲಸೌಕರ್ಯ, ಸಲಕರಣೆಗಳು, ಪ್ರಮಾಣೀಕೃತ ಪಂದ್ಯದ ಅಧಿಕಾರಿಗಳು, ರೆಫರಿಗಳು, ಸಂಪೂರ್ಣ ಸುಸಜ್ಜಿತ ವೈದ್ಯಕೀಯ ಕೇಂದ್ರಗಳು, ಫಿಸಿಯೋಥೆರಪಿಸ್ಟ್‌ಗಳು, ಕ್ಲಿನಿಕ್‌ಗಳ ಸೌಲಭ್ಯವನ್ನು ಒದಗಿಸಲಾಗುತ್ತದೆ. ಇದರೊಂದಿಗೆ ಸ್ಪರ್ಧಿಗಳಿಗೆ ವಿಶೇಷ ಕಾರ್ಯಾಗಾರ, ತಮ್ಮ ಪ್ರದರ್ಶನದ ವಿಶ್ಲೇಷಣೆ ಮತ್ತು ಪಂದ್ಯದ ವೀಡಿಯೋಗ್ರಫಿಗಾಗಿ ಡಿಜಿಟಲ್ ಸಂಯೋಜಿತ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತದೆ.
ಮೊದಲ ಆವೃತ್ತಿಯ ಚಾಂಪಿಯನ್‌ಶಿಪ್ ಆಯೋಜನೆಯ ಬಗ್ಗೆ ಮಾತನಾಡಿದ ಸ್ಪೋರ್ಟ್ಸ್ ಫಾರ್ ಆಲ್ (ಎಸ್‌ಎಫ್‌ಎ) ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಜಾಸ್ ಜೋಶಿ, ‘ಚಿಕ್ಕ ವಯಸ್ಸಿನಲ್ಲೇ ಬಹು-ಕ್ರೀಡೆಗಳಲ್ಲಿ ಮಕ್ಕಳನ್ನು ತೊಡಗಿಸಿಕೊಳ್ಳುವಂತೆ ಮಾಡುವುದು ಅವರ ಬೆಳವಣಿಗೆಗೆ ಸಹಕಾರಿಯಾಗಲಿದೆ. ತನ್ನ ತ್ವರಿತ ಬೆಳವಣಿಗೆಯಿಂದ ವಿಶ್ವದ ಗಮನವನ್ನು ತನ್ನತ್ತ ಸೆಳೆದಿರುವ ಬೆಂಗಳೂರು ಭವಿಷ್ಯದ ಕ್ರೀಡಾ ಚಾಂಪಿಯನ್‌ಗಳನ್ನು ಸೃಷ್ಟಿಸುವ ಪ್ರಮುಖ ವೇದಿಕೆಯಾಗಿ ಹೊರಹೊಮ್ಮಿದೆ. ಅಲ್ಲದೆ ಅಕಾಡೆಮಿ ಮತ್ತು ತರಬೇತಿ ಕೇಂದ್ರಗಳನ್ನು ತೆರೆಯುವ ಮೂಲಕ ಪ್ರತಿಯೊಂದು ಕ್ರೀಡೆಯ ಬೆಳವಣಿಗೆಗೆ ಸಾಕ್ಷಿಯಾಗಿದೆ. ಇದುವೆ ನಾವು ಎಸ್‌ಎಫ್‌ಎ ಚಾಂಪಿಯನ್‌ಶಿಪ್‌ನ ಮೊದಲ ಆವೃತ್ತಿಯನ್ನು ಬೆಂಗಳೂರಿನಲ್ಲಿ ನಡೆಸಲು ಪ್ರೇರಿಪಿಸಿದೆ ಎಂದಿದ್ದಾರೆ.
ಈ ಸ್ಪರ್ಧೆಯಲ್ಲಿ 3 ರಿಂದ 18 ವರ್ಷ ವಯಸ್ಸಿನ ಶಾಲಾ ವಿದ್ಯಾರ್ಥಿಗಳು ತಮಗಿಷ್ಟದ ಕ್ರೀಡೆಯಲ್ಲಿ ಭಾಗವಹಿಸಬಹುದಾಗಿದೆ. ಚಾಂಪಿಯನ್‌ಶಿಪ್ ಆರಂಭಕ್ಕೆ ಉಳಿದಿರುವ 4 ತಿಂಗಳ ಸಮಯದಲ್ಲಿ ನಗರದ 2 ಲಕ್ಷ ಕ್ರೀಡಾಪಟುಗಳನ್ನು ಸ್ಪರ್ಧೆಯಲ್ಲಿ ಭಾಗವಹಿಸುವಂತೆ ಮಾಡುವುದು ಆಯೋಜಕರ ಗುರಿಯಾಗಿದೆ.
ಇನ್ನು ಸ್ಪೋರ್ಟ್ಸ್ ಫಾರ್ ಆಲ್ ಸಂಸ್ಥೆಯ ಬಗ್ಗೆ ಹೇಳಬೇಕೆಂದರೆ.. ಇದು ಭಾರತದ ಬಹು-ಕ್ರೀಡಾ ತಳಮಟ್ಟದ ಸ್ಪರ್ಧೆಯ ವೇದಿಕೆಯಾಗಿದೆ. ಸ್ಪೂರ್ತಿದಾಯಕ ಮತ್ತು ಸಂತೋಷದಾಯಕ ಕ್ರೀಡಾ ಅನುಭವಗಳ ಮೂಲಕ ಯುವಕರನ್ನು ಕ್ರೀಡೆಗಳತ್ತ ವಾಲುವಂತೆ ಮಾಡುವುದು ಸಂಸ್ಥೆಯ ಉದ್ದೇಶವಾಗಿದೆ. 2015 ರಲ್ಲಿ ಮೊದಲ ಬಾರಿಗೆ ಈ ಸಂಸ್ಥೆ ಸ್ಪೋರ್ಟ್ಸ್ ಫಾರ್ ಆಲ್ ಚಾಂಪಿಯನ್‌ಶಿಪ್ ಆರಂಭಿಸಿತ್ತು. ಅಂದಿನಿಂದ ಈ ಕ್ರೀಡಾಕೂಟ ಮುಂಬೈ, ಪುಣೆ, ಹೈದರಾಬಾದ್ ಮತ್ತು ಉತ್ತರಾಖಂಡ ಸೇರಿದಂತೆ ದೇಶದ ವಿವಿದ ನಗರಗಳಲ್ಲಿ ನಡೆದಿದೆ. ಇಲ್ಲಿಯವರೆಗೆ 12 ಚಾಂಪಿಯನ್‌ಶಿಪ್‌ಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದು, ಇದರಲ್ಲಿ 28 ಕ್ರೀಡಾ ವಿಭಾಗಗಳಲ್ಲಿ 200,000 ಕ್ರೀಡಾಪಟುಗಳು ಮತ್ತು 4000 ಕ್ಕೂ ಹೆಚ್ಚು ಶಾಲೆಗಳು ಭಾಗವಹಿಸಿವೆ.
ಇನ್ನು 2023 ರಲ್ಲಿ, ಮುಂಬೈ, ದೆಹಲಿ, ಹೈದರಾಬಾದ್, ಬೆಂಗಳೂರು, ಅಹಮದಾಬಾದ್, ಇಂದೋರ್, ಜೈಪುರ, ಡೆಹ್ರಾಡೂನ್, ಪುಣೆ ಮತ್ತು ನಾಗ್ಪುರ ನಗರಗಳು ಸೇರಿದಂತೆ ಒಟ್ಟು 10 ಸ್ಥಳಗಳಲ್ಲಿ ಈ ಚಾಂಪಿಯನ್‌ಶಿಪ್ ನಡೆಸಲು ತೀರ್ಮಾನಿಸಲಾಗಿದ್ದು, 2 ಲಕ್ಷ ಕ್ರೀಡಾಪಟುಗಳು ಈ ಚಾಂಪಿಯನ್ಶಿಪ್ನಲ್ಲಿ ಭಾಗವಹಿಸುವ ನಿರೀಕ್ಷೆ ಇದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:17 pm, Wed, 20 September 23