ಭಾರತದ ಸ್ಟಾರ್ ಅಥ್ಲೀಟ್ ನೀರಜ್ ಚೋಪ್ರಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ತಮ್ಮ ಬಹುಕಾಲದ ಗೆಳೆತಿ ಹಿಮಾನಿ ಮೋರ್ ಅವರೊಂದಿಗೆ ಸಪ್ತಪದಿ ತುಳಿದಿರುವ ಶುಭ ಸುದ್ದಿಯನ್ನು ಖುದ್ದು ನೀರಜ್ ಚೋಪ್ರಾ ಸೋಷಿಯಲ್ ಮೀಡಿಯಾ ಮೂಲಕ ಬಹಿರಂಗಪಡಿಸಿದ್ದಾರೆ.
ನಿಮ್ಮೆಲ್ಲರ ಆಶೀರ್ವಾದದೊಂದಿಗೆ ಹೊಸ ಜೀವನಕ್ಕೆ ಕಾಲಿಟ್ಟಿದ್ದೇನೆ. ನಮ್ಮ ಈ ಕ್ಷಣಗಳಿಗೆ ಸಾಕ್ಷಿಯಾಗಿ ಆಶೀರ್ವದಿಸಿದ ಪ್ರತಿಯೊಬ್ಬರಿಗೂ ಕೃತಜ್ಞರಾಗಿರುತ್ತೇನೆ. ಪ್ರೀತಿಯೊಂದಿಗೆ ಸುಖವಾಗಿ ಬಾಳುವೆ ಎಂದು ನೀರಜ್ ಚೋಪ್ರಾ ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಹಂಚಿಕೊಳ್ಳುವ ಮೂಲಕ ಬರೆದುಕೊಂಡಿದ್ದಾರೆ.
ಈ ಫೋಟೋಗಳು ವೈರಲ್ ಆದ ಬೆನ್ನಲ್ಲೇ ಯಾರು ಹಿಮಾನಿ ಮೊರ್ ಎಂಬ ಹುಡುಕಾಟಗಳು ಶುರುವಾಗಿದೆ. ಈ ಪ್ರಶ್ನೆಗೆ ಉತ್ತರ ಟೆನಿಸ್ ತಾರೆ. ಹರಿಯಾಣದ ಸೋನಿಪತ್ ಮೂಲದವರಾದ ಹಿಮಾನಿ, ಈ ಹಿಂದೆ ರಾಷ್ಟ್ರೀಯ ಟೆನಿಸ್ ಟೂರ್ನಿಗಳಲ್ಲಿ ಕಾಣಿಸಿಕೊಂಡಿದ್ದರು.
ಆ ಬಳಿಕ ಉನ್ನತದ ವಿದ್ಯಾಭ್ಯಾಸಕ್ಕಾಗಿ ಅಮೆರಿಕಕ್ಕೆ ತೆರಳಿದ ಹಿಮಾನಿ ಲೂಯಿಸಿಯಾನ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಪಡೆದಿದ್ದರು. ಇದೀಗ ನ್ಯೂ ಹ್ಯಾಂಪ್‌ಶೈರ್‌ನಲ್ಲಿರುವ ಫ್ರಾಂಕ್ಲಿನ್ ಪಿಯರ್ಸ್ ವಿಶ್ವವಿದ್ಯಾಲಯದಲ್ಲಿ ಸ್ಪೋರ್ಟ್ಸ್ ಮ್ಯಾನೇಜ್ಮೆಂಟ್ನಲ್ಲಿ (ಮೇಜರ್) ಸ್ನಾತಕೋತ್ತರ ಪದವಿಯನ್ನು ಪಡೆಯುತ್ತಿದ್ದಾರೆ.
ಶಿಕ್ಷಣದ ಜೊತೆ ಟೆನಿಸ್ ಆಟದಲ್ಲೂ ಮುಂದುವರೆದಿರುವ 25 ವರ್ಷ ಹಿಮಾನಿ ಮೊರ್, 2017ರಲ್ಲಿ ತೈಪೆಯಲ್ಲಿ ನಡೆದ ವಿಶ್ವ ವಿಶ್ವವಿದ್ಯಾಲಯದ ಕ್ರೀಡಾಕೂಟದಲ್ಲಿ ದೆಹಲಿ ವಿಶ್ವ ವಿದ್ಯಾಲಯವನ್ನು ಪ್ರತಿನಿಧಿಸಿದ್ದರು. ಇದಕ್ಕೂ ಮುನ್ನ 2016 ರಲ್ಲಿ ಮಲೇಷ್ಯಾದಲ್ಲಿ ನಡೆದ ವಿಶ್ವ ಜೂನಿಯರ್ ಟೆನಿಸ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದರು. ಇದೀಗ ಹಿಮಾನಿ ಮೊರ್, ಗೋಲ್ಡನ್ ಬಾಯ್ ನೀರಜ್ ಚೋಪ್ರಾ ಅವರ ಕೈ ಹಿಡಿಯುವ ಮೂಲಕ ಸಪ್ತಪದಿ ತುಳಿದಿದ್ದಾರೆ.