ಹಾಕಿ ಆಟವಾಡುತ್ತಿದ್ದ ಯುವಕನೋರ್ವ ಕ್ರೀಡಾಂಗಣದಲ್ಲೇ ಕುಸಿದು ಬಿದ್ದು ಸಾವನಪ್ಪಿದ ಘಟನೆ ಕೊಡಗಿನಲ್ಲಿ ನಡೆದಿದೆ. ಇಲ್ಲಿನ ಮಡಿಕೇರಿ ತಾಲೂಕಿನ ಮೂರ್ನಾಡು ಗ್ರಾಮದಲ್ಲಿ ಕೊಡವ ಕುಟುಂಬಗಳ ಮಧ್ಯೆ ಹಾಕಿ ಪಂದ್ಯಾವಳಿ ನಡೆಯುತ್ತಿತ್ತು. ಈ ಪಂದ್ಯಾವಳಿಯಲ್ಲಿ 22 ವರ್ಷದ ತೊತ್ತಿಯಂಡ ಸೋಮಯ್ಯ ಎಂಬ ಯುವಕ ತಮ್ಮ ಕುಟುಂಬದ ಪರವಾಗಿ ಆಡುತ್ತಿದ್ದರು. ಪಂದ್ಯಾಟದ ಮಧ್ಯೆ ಇದ್ದಕ್ಕಿದ್ದಂತೆ ಸೋಮಯ್ಯ ಕುಸಿದು ಬಿದ್ದಿದ್ದಾರೆ.
ಮೈದಾನದಲ್ಲಿ ಕುಸಿದು ಬಿದ್ದ ಸೋಮಯ್ಯರನ್ನು ತಕ್ಷಣವೇ ಅವರನ್ನು ಮಡಿಕೇರಿ ಆಸ್ಪ್ರೆಗೆ ಕೊಂಡೊಯ್ಯಲಾಯಿತಾದರೂ ಸಾಗಿಸುವಷ್ಟರಲ್ಲೇ ಸಾವು ಸಂಭವಿಸಿದೆ. ವಿಠಲ್ ದೇವಯ್ಯ ಎಂಬುವವರ ಪುತ್ರ ಸೋಮಯ್ಯ ಸಾವು ಎಲ್ಲರನ್ನೂ ಅಘಾತಕ್ಕೀಡು ಮಾಡಿದೆ. ಹೃದಯ ಸ್ತಂಭನದಿಂದ ಸೋಮಯ್ಯ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಕೊಡಗಿನಲ್ಲಿ ಹಾಕಿಗೆ ತನ್ನದೇ ಆದ ಮಹತ್ವವಿದೆ. ಕೊಡವರ ಹಾಕಿಗೆ ದೊಡ್ಡ ಇತಿಹಾಸವಿದೆ. ಅಂತದ್ದರಲ್ಲಿ ಯುವ ಆಟಗಾರ ಕೇವಲ 22 ವರ್ಷದ ಯುವಕ ಮೈದಾನದಲ್ಲೇ ಉಸಿರು ಚೆಲ್ಲಿರುವುದು ಕೊಡಗಿನ ಹಾಕಿ ಆಟಗಾರರು, ಅಭಿಮಾನಿಗಳಿಗೆ ಸಾಕಷ್ಟು ನೋವು ತಂದಿದೆ.
ಹೃದಯಾಘಾತಕ್ಕೆ ಖ್ಯಾತರು ಬಲಿ
ಇತ್ತೀಚೆಗೆ ಹೃದಯಾಘಾತಕ್ಕೆ ಯುವಕರು ಬಲಿಯಾಗುತ್ತಿದ್ದಾರೆ. ಇದಕ್ಕೆ ಸೂಕ್ತ ಉದಾಹರಣೆ ಎಂಬಂತೆ, ಸರ್ಜಾ ಕುಟುಂಬದ ಕುಡಿ ಚಿರಂಜೀವಿ ಸರ್ಜಾ ಹೃದಯಾಘಾತಕ್ಕೆ ಬಲಿಯಾಗಿದ್ದರು. ನಂತರ ಹಿಂದಿ ಕಿರುತೆರೆಯ ಪ್ರಖ್ಯಾತ ನಟ ಸಿದ್ದಾರ್ಥ್ ಶುಕ್ಲಾ ಕೊನೆಯುಸಿರೆಳೆದಿದ್ದರು. ‘ಬಿಗ್ ಬಾಸ್ 13’ ಕಾರ್ಯಕ್ರಮದಲ್ಲಿ ವಿಜೇತರಾಗಿ ಹೊರಹೊಮ್ಮಿದ ಸಿದ್ದಾರ್ಥ್ ಶುಕ್ಲಾ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದರು. ಇದೆಲ್ಲಾ ಸಾಲದೆಂಬಂತೆ ಕರುನಾಡ ರಾಜರತ್ನ ಪವರ್ಸ್ಟಾರ್ ಪುನೀತ್ ರಾಜಕುಮಾರ್ ಸಹ ಹೃದಯಾಘಾತಕ್ಕೆ ಬಲಿಯಾಗಿ ಕರ್ನಾಟಕವನ್ನು ಶೋಕ ಸಾಗರದಲ್ಲಿ ಮುಳುಗಿಸಿದರು.