Amazon India: ಭಾರತದ ಕಾನೂನು ಮೀರಿದ ಅಮೆಜಾನ್​ ಬಗ್ಗೆ ವರದಿ ನೋಡಿದ ನಂತರವೂ ಸಮರ್ಥಿಸಿದ್ದ US ಅಧಿಕಾರಿಗಳು

ಅಮೆರಿಕ ಮೂಲದ ಅಮೆಜಾನ್ ಇ-ಕಾಮರ್ಸ್ ಕಂಪೆನಿಯು ಭಾರತದ ಕಾನೂನು ಮೀರುತ್ತಿದೆ ಎಂಬ ಬಗ್ಗೆ ರಾಯಿಟರ್ಸ್ ಸುದ್ದಿ ಪ್ರಕಟಿಸಿತ್ತು. ಆ ನಂತರ ಕೂಡ ಅಮೆರಿಕದ ಅಧಿಕಾರಿಗಳು ಆ ಕಂಪೆನಿಯ ಬೆಂಬಲಕ್ಕೆ ನಿಂತಿದ್ದವು

Amazon India: ಭಾರತದ ಕಾನೂನು ಮೀರಿದ ಅಮೆಜಾನ್​ ಬಗ್ಗೆ ವರದಿ ನೋಡಿದ ನಂತರವೂ ಸಮರ್ಥಿಸಿದ್ದ US ಅಧಿಕಾರಿಗಳು
ಸಾಂದರ್ಭಿಕ ಚಿತ್ರ

Updated on: May 21, 2021 | 7:01 PM

ಭಾರತದಲ್ಲಿ ಅಮೆಜಾನ್ ಅನುಸರಿಸುತ್ತಿರುವ ಉದ್ಯಮ ನಡೆಸುವ ಪದ್ಧತಿಯನ್ನು ಅಮೆರಿಕದ ಅಧಿಕಾರಿಗಳು ಸಮರ್ಥಿಸಿಕೊಂಡಿರುವ ಬಗ್ಗೆ ಮಾಧ್ಯಮ ಸಂಸ್ಥೆಯೊಂದು ವರದಿ ಮಾಡಿದೆ. ಕೆಲವು ಮಾರಾಟಗಾರರು ಭಾರತದಲ್ಲಿ ಸ್ಥಳೀಯ ಕಾನೂನು ಮೀರಿದ್ದಾರೆ ಎಂದು ಫೆಬ್ರವರಿಯಲ್ಲಿ ರಾಯಿಟರ್ಸ್ ವರದಿ ಮಾಡಿತ್ತು. ವಿದೇಶಿ ಇ- ಕಾಮರ್ಸ್ ಕಂಪೆನಿಯಾದ ಅಮೆಜಾನ್ ಎಲ್ಲ ಮಾರಾಟಗಾರರನ್ನು ಸಮಾನವಾಗಿ ನೋಡಬೇಕು ಎಂದು ಈ ಬಗ್ಗೆ ದಾಖಲಾತಿಗಳನ್ನು ಸಂಗ್ರಹಿಸಿದ್ದ ಸುದ್ದಿ ಸಂಸ್ಥೆ ವರದಿ ಮಾಡಿತ್ತು. ಆದರೆ ಯುನೈಟೆಡ್ ಸ್ಟೇಟ್ಸ್ ಟ್ರೇಡ್ ರೆಪ್ರಸೆಂಟೇಟಿವ್ (USTR)ನ ಅಮೆರಿಕದ ಮಾಹಿತಿ ಸ್ವಾತಂತ್ರ್ಯ ಕಾಯ್ದೆ ಅಡಿ ಪಡೆಯಲಾದ ಇಮೇಲ್​ ಪ್ರಕಾರ, ಅಧ್ಯಕ್ಷ ಜೋ ಬೈಡನ್​ ಸರ್ಕಾರದಲ್ಲಿ ಪ್ರಮುಖ ರಾಯಭಾರಿ ಹುದ್ದೆಯಲ್ಲಿರುವ ಜಾನ್ ಕೆರಿಗೆ ಅಧಿಕಾರಿಗಳು ವರದಿ ಸಿದ್ಧಪಡಿಸಿದ್ದು, ಫೆಬ್ರವರಿ 18ರ ದಿನಾಂಕವನ್ನು ಆ ಇಮೇಲ್ ಹೊಂದಿದೆ. ಅದರಲ್ಲಿರುವಂತೆ, ಭಾರತದಲ್ಲಿ ನಿಗಾ ಸಂಸ್ಥೆಗಳು ಇಂಥ ಹಲವು ಆರೋಪಗಳು ಇರುವ ಬಗ್ಗೆ ಅಮೆರಿಕದ ಇ-ಕಾಮರ್ಸ್ ಕಂಪೆನಿಗಳ ವಿರುದ್ಧ ಪರಿಶೀಲಿಸಿವೆ. ಆದರೆ ಯಾವುದೇ ತಪ್ಪು ಕಂಡುಬಂದಿಲ್ಲ ಎನ್ನಲಾಗಿದೆ.

ಅಂದಹಾಗೆ ಈಗ ಹವಾಮಾನ ಬದಲಾವಣೆ ನೀತಿಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ ಬೈಡನ್​ರ ರಾಯಭಾರಿ ಆದ ಕೆರಿ. ಭಾರತದ ಸಚಿವರಾದ ಪಿಯೂಷ್ ಗೋಯೆಲ್ ಜತೆಗೆ ಅವರು ಮಾತುಕತೆ ನಡೆಸಲು ಸಮಯ ನಿಗದಿ ಆಗಿತ್ತು. ಎಲ್ಲಿ ಸುದ್ದಿ ಸಂಸ್ಥೆ ಮಾಡಿದ ವರದಿಯ ಬಗ್ಗೆ ಗೋಯೆಲ್ ಧ್ವನಿ ಎತ್ತುತ್ತಾರೋ ಎಂಬ ಆತಂಕ ಅಮೆರಿಕಾಗೆ ಇತ್ತು. ಯಾವುದಕ್ಕೂ ಈ ಲೇಖನದ ಬಗ್ಗೆ ಇರಲಿ ಅಂತ ಒಂದು ವರದಿಯನ್ನು ಸಿದ್ಧಪಡಿಸಿಕೊಂಡಿದ್ದದ್ದು ಇಮೇಲ್​ನಿಂದ ಗೊತ್ತಾಗುತ್ತದೆ. ಮಾತುಕತೆಯ ಮಧ್ಯದಲ್ಲಿ ಈ ವಿಷಯವನ್ನು ಗೋಯೆಲ್ ಪ್ರಸ್ತಾವ ಮಾಡುವ ಸಾಧ್ಯತೆ ಬಗ್ಗೆ ಅಮೆರಿಕದ ರಾಯಭಾರ ಅಧಿಕಾರಿಯಾಗಿ ದೆಹಲಿಯಲ್ಲಿ ಇರುವ ಥಾಮಸ್ ಕಾರ್ನೆಗಿ ಅವರು USTRಗೆ ಇಮೇಲ್ ಮಾಡಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಕೆರಿ- ಗೋಯೆಲ್ ಕರೆಯ ನಂತರ ಏನಾಯಿತು?
ಮತ್ತೊಬ್ಬ ಅಮೆರಿಕ ರಾಯಭಾರ ಅಧಿಕಾರಿ ಫಿಲಿಪ್ ಎಂ. ಇಂಗೆನೆರಿ ಕೂಡ USTRಗೆ ಫೆಬ್ರವರಿ 18ರಂದು ಇಮೇಲ್​ನಲ್ಲಿ ಈ ಬಗ್ಗೆ ತಿಳಿಸಿದ್ದು. ಅಮೆಜಾನ್ ಇಂಡಿಯಾವು ಸರ್ಕಾರದ ಜತೆಗೆ ನಡೆಸಿರುವ ವ್ಯವಹಾರದ ಬಗ್ಗೆ ಕೆರಿ ಸಿದ್ಧಪಡಿಸಿದ ವರದಿ ಪರಿಶೀಲಿಸಲಾಗಿದೆ. ಅದು ಸತ್ಯ ಮತ್ತು ನಿಖರವಾಗಿದೆ ಎಂದಿದ್ದಾರೆ. ಆದರೆ ಕೆರಿ- ಗೋಯೆಲ್ ಕರೆಯ ನಂತರ ಏನಾಯಿತು ಎಂಬ ಬಗ್ಗೆ ಇ-ಮೇಲ್​ನಿಂದ ಯಾವುದೇ ವಿವರಣೆ ಸಿಕ್ಕಿಲ್ಲ. ನವದೆಹಲಿಯಲ್ಲಿನ ಅಮೆರಿಕ ರಾಯಭಾರ ಕಚೇರಿಯು ವಾಷಿಂಗ್ಟನ್​ನಲ್ಲಿ ಇರುವ ಅಮೆರಿಕ ರಾಜ್ಯ ಇಲಾಖೆಗೆ ಪ್ರಶ್ನೆಯನ್ನು ದಾಟಿಸಿದೆ. ಅಮೆರಿಕ ಇ-ಕಾಮರ್ಸ್ ಕಂಪೆನಿಗಳು ಭಾರತದಲ್ಲಿ ಅನುಸರಿಸುತ್ತಿರುವ ಪದ್ಧತಿಯನ್ನು ಭಾರತ ಸ್ಪರ್ಧಾ ಆಯೋಗ (CCI) ಈ ಹಿಂದೆ ಇದ್ದ ಸ್ವಾತಂತ್ರ್ಯ, ಪಾರದರ್ಶಕತೆ ಮತ್ತು ವೃತ್ತಿಪರತೆಯೊಂದಿಗೆ ಪರಿಶೀಲಿಸುತ್ತದೆ ಎಂದು ಹೇಳಿದೆ.

ಸಣ್ಣ ಗುಂಪಿನ ಮಾರಾಟಗಾರರಿಗೆ ಆದ್ಯತೆ
ಅಂದ ಹಾಗೆ, ಈ ಕುರಿತು ಮಾಧ್ಯಮ ಸಂಸ್ಥೆಗಳು ಕೆರಿಯ ವಕ್ತಾರರು ಹಾಗೂ ಗೋಯೆಲ್ ಎರಡೂ ಕಡೆ ಸಂಪರ್ಕಿಸಿದ್ದು, ಯಾವುದೇ ಪ್ರತಿಕ್ರಿಯೆ ದೊರೆತಿಲ್ಲ. ಈ ವರ್ಷದ ಫೆಬ್ರವರಿಯಲ್ಲಿ ಅಮೆಜಾನ್​ನ ಆಂತರಿಕ ದಾಖಲಾತಿಯ ಆಧಾರದಲ್ಲಿ ರಾಯಿಟರ್ಸ್ ಸುದ್ದಿಯೊಂದನ್ನು ಪ್ರಕಟಿಸಿತ್ತು. ಅದರ ಪ್ರಕಾರ, ಅಮೆರಿಕ ಮೂಲದ ಅಮೆಜಾನ್​ನಿಂದ ವರ್ಷಗಳ ಕಾಲ ಭಾರತದಲ್ಲಿನ ಪ್ಲಾಟ್​ಫಾರ್ಮ್​ನಲ್ಲಿ ವರ್ಷಗಳ ಕಾಲದಿಂದ ಸಣ್ಣ ಗುಂಪಿನ ಮಾರಾಟಗಾರರಿಗೆ ಆದ್ಯತೆ ನೀಡಲಾಗುತ್ತಿದೆ. ಭಾರತದ ಸಣ್ಣ ವರ್ತಕರ ಹಿತ ರಕ್ಷಿಸಲು ಕಠಿಣವಾದ ವಿದೇಶಿ ಹೂಡಿಕೆ ನೀತಿ ತಂದರೂ ಹೀಗೆ ಮಾಡಲಾಗುತ್ತಿದೆ ಎಂಬ ದೂರಿತ್ತು.

ಆ ಲೇಖನ ಬಂದ ಮೇಲೆ ವಾರಗಟ್ಟಲೆ ಭಾರತದಲ್ಲಿ ವಿವಾದದ ಕಿಚ್ಚು ಹೊತ್ತಿಸಿತು. ಅಮೆಜಾನ್​ನ ಭಾರತದಲ್ಲಿ ನಿಷೇಧಿಸಬೇಕು ಎಂಬ ಬೇಡಿಕೆ ಬಂತು. ಭಾರತದಲ್ಲಿನ ಅಮೆಜಾನ್​ ನಡೆಸುತ್ತಿರುವ ವ್ಯವಹಾರದ ಬಗ್ಗೆ ಮಾಹಿತಿ ನೀಡುವಂತೆ ಜಾರಿ ನಿರ್ದೇಶನಾಲಯ ಕೇಳಿತು. ಸಿಸಿಐನಿಂದ ಅಮೆಜಾನ್​ ಮೇಲೆ ನಂಬಿಕೆ ದ್ರೋಹದ ಕಾನೂನು ಹೇರಲಾಯಿತು. ಅಂದಹಾಗೆ ಭಾರತವು ಇ-ಕಾಮರ್ಸ್ ವಿದೇಶಿ ಹೂಡಿಕೆಗೆ ಕಠಿಣ ನಿಯಮಗಳನ್ನು ಹಾಕಿರುವುದು ವಾಷಿಂಗ್ಟನ್ ಮತ್ತು ನವದೆಹಲಿ ಮಧ್ಯೆ ತಿಕ್ಕಾಟಕ್ಕೂ ಕಾರಣವಾಗಿದೆ. ಭಾರತದಲ್ಲಿ ಉದಾಹರಣೆಗೆ ಹೇಳುವುದಾದರೆ ಅಮೆಜಾನ್, ವಾಲ್​ಮಾರ್ಟ್ ಇಂಥವು ಕಾರ್ಯ ನಿರ್ವಹಿಸುತ್ತಿದೆ. 2020ರ ಜನವರಿಯಲ್ಲಿ ಸಿಸಿಐನಿಂದ ಅಮೆಜಾನ್ ವಿರುದ್ಧ ತನಿಖೆಗೆ ಚಾಲನೆ ಸಿಕ್ಕಿತು. ಆದರೆ ಕಂಪೆನಿಯು ಕೋರ್ಟ್ ಮೆಟ್ಟಿಲೇರಿದ್ದರಿಂದ ಹಾಗೇ ನಿಂತಿದೆ. ಆನ್​ಲೈನ್ ಮಾರಾಟಗಾರರ ಸಮೂಹವು ನಂಬಿಕೆದ್ರೋಹದ ಪ್ರತ್ಯೇಕವಾದ ದೂರನ್ನು ಅಮೆಜಾನ್ ವಿರುದ್ಧ ಸಲ್ಲಿಸಿದ್ದು, ಸದ್ಯಕ್ಕೆ ಸಿಸಿಐನಿಂದ ಆ ಪ್ರಕರಣ ಬಾಕಿ ಉಳಿದಿದೆ.

ಅಮೆಜಾನ್​ನಿಂದ ಭಾರತದಲ್ಲಿ 550 ಕೋಟಿ ಅಮೆರಿಕನ್ ಡಾಲರ್​ಗೂ ಹೆಚ್ಚು ಮೊತ್ತ ಹೂಡಿಕೆ ಮಾಡಲಾಗಿದೆ. 1 ಲಕ್ಷ ಭಾರತೀಯರನ್ನು ನೇಮಿಸಿಕೊಂಡಿದೆ. 4 ಲಕ್ಷ ಮಾರಾಟಗಾರರಿಗೆ ಮಾರ್ಕೆಟ್​ನಲ್ಲಿ ಬೆಂಬಲಿಸುತ್ತದೆ.

ಇದನ್ನೂ ಓದಿ: ಅಮೆಜಾನ್​ನ ಡೆಲಿವರಿ ಸಿಬ್ಬಂದಿಯಿಂದ ದೇಶದಾದ್ಯಂತ ಒಂದು ದಿನದ ಮುಷ್ಕರಕ್ಕೆ ಸಿದ್ಧತೆ

(Amazon company defended by America top officals after news report about local law violation in India by e- commerce giant)

Published On - 6:54 pm, Fri, 21 May 21