ಎರಡು ತಿಂಗಳ ಹಿಂದೆಯಷ್ಟೆ ಭಾರತದಲ್ಲಿ ಪ್ರಸಿದ್ಧ ಒನ್‌ಪ್ಲಸ್ (OnePlus) ಕಂಪನಿ ತನ್ನ ಬಹುನಿರೀಕ್ಷಿತ ಒನ್‌ಪ್ಲಸ್ ನಾರ್ಡ್ CE 2 5G ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿ ದೊಡ್ಟ ಮಟ್ಟದಲ್ಲಿ ಸದ್ದು ಮಾಡಿತ್ತು. ಇದೀಗ ಇದರ ಮುಂದುವರೆದ ಭಾಗವಾಗಿ ಒನ್‌ಪ್ಲಸ್ ನಾರ್ಡ್ ಸಿಇ 2 ಲೈಟ್ 5ಜಿ (OnePlus Nord CE 2 Lite 5G) ಫೋನ್ ಅನ್ನು ದೇಶದಲ್ಲಿ ಅನಾವರಣ ಮಾಡಿದೆ. ಆಕರ್ಷಕ ಡಿಸೈನ್, ಭರ್ಜರಿ ಫೀಚರ್ಗಳಿಂದ ತುಂಬಿರುವ ಈ ಸ್ಮಾರ್ಟ್‌ಫೋನ್ (Smartphone) ಸ್ನ್ಯಾಪ್‌ಡ್ರಾಗನ್ 695 SoC ಪ್ರೊಸೆಸರ್ ಬಲವನ್ನು ಪಡೆದುಕೊಂಡಿದೆ. 5,000mAh ಬ್ಯಾಟರಿ ಸಾಮರ್ಥ್ಯಕ್ಕೆ ಹೇಳಿ ಮಾಡಿಸಿರುವ 33W ಸೂಪರ್VOOC ವೇಗದ ಚಾರ್ಜಿಂಗ್ ಕೂಡ ನೀಡಲಾಗಿದೆ. ನಾರ್ಡ್ CE 2 ಗೆ ಹೋಲಿಸಿದರೆ ಇದರ ಬೆಲೆ ಕೂಡ ಕಡಿಮೆಯಾಗಿದೆ. ಹಾಗಾದ್ರೆ ಈ ಫೋನಿನ ವಿಶೇಷತೆ, ಬೆಲೆ ಬಗ್ಗೆ ತಿಳಿದುಕೊಳ್ಳೋಣ.
ಬೆಲೆ ಎಷ್ಟು?:
ಭಾರತದಲ್ಲಿ ಒನ್‌ಪ್ಲಸ್ ನಾರ್ಡ್ CE 2 ಲೈಟ್ 5G ಸ್ಮಾರ್ಟ್‌ಫೋನ್ ಒಟ್ಟು ಎರಡು ಸ್ಟೋರೆಜ್ ಆಯ್ಕೆಯಲ್ಲಿ ಖರೀದಿಗೆ ಸಿಗಲಿದೆ. ಇದರ 6GB RAM ಮತ್ತು 128GB ಸ್ಟೋರೇಜ್ ಬೇಸ್ ಮಾಡೆಲ್‌ಗೆ 19,999 ರೂ. ನಿಗದಿ ಮಾಡಲಾಗಿದೆ. ಅಂತೆಯೆ 8GB RAM ಮತ್ತು 128GB ಸ್ಟೋರೇಜ್ ರೂಪಾಂತರದ ಬೆಲೆ 21,999 ರೂ. ಆಗಿದೆ. ಈ ಸ್ಮಾರ್ಟ್‌ಫೋನ್ ಬ್ಲ್ಯಾಕ್ ಹಾಗೂ ಬ್ಲೂ ಬಣ್ಣ ಆಯ್ಕೆಗಳಲ್ಲಿ ಲಭ್ಯವಿರುತ್ತದೆ. ಈ ಸ್ಮಾರ್ಟ್‌ಫೋನ್ ಪ್ರಸಿದ್ಧ ಇ ಕಾಮರ್ಸ್ ತಾಣವಾದ ಅಮೆಜಾನ್ ಮತ್ತು ಕಂಪನಿಯ ಅಧಿಕೃತ ವೆಬ್‌ಸೈಟ್, ಚಿಲ್ಲರೆ ಅಂಗಡಿಗಳಲ್ಲಿ, ರಿಲಯನ್ಸ್ ಡಿಜಿಟಲ್ ಸ್ಟೋರ್ ಮೂಲಕ ಏಪ್ರಿಲ್ 30 ರಿಂದ ಮಾರಾಟ ಕಾಣಲಿದೆ.
ಏನು ವಿಶೇಷತೆ?:
ಒನ್‌ಪ್ಲಸ್ ನಾರ್ಡ್ CE 2 ಲೈಟ್ 5G ಸ್ಮಾರ್ಟ್‌ಫೋನ್ 1,080 x 2,412 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.59 ಇಂಚಿನ ಫುಲ್ ಹೆಚ್‌ಡಿ+ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇಯು 202ppi ಪಿಕ್ಸೆಲ್ ಸಾಂದ್ರತೆ, 120Hz ರಿಫ್ರೆಶ್ ರೇಟ್ ಅನ್ನು ಒಳಗೊಂಡಿದೆ. ವಿಶೇಷವಾಗಿ ಇದರಲ್ಲಿ ಗೇಮಿಂಗ್ಗಾಗಿ 240Hz ರೀಫ್ರೆಶ್ ರೇಟ್ ನೀಡಲಾಗಿದೆ. ಇದಕ್ಕೆ ತಕ್ಕಂತೆ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗ್ನ್ 695 SoC ಪ್ರೊಸೆಸರ್ ಪ್ರೊಸೆಸರ್ ಬಲವನ್ನು ಪಡೆದಿದೆ. ಆಂಡ್ರಾಯ್ಡ್ 12 ಓಎಸ್ನಿಂದ ಕಾರ್ಯನಿರ್ವಹಿಸುತ್ತದೆ.
ಆಕರ್ಷಕವಾದ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾ ಪಿಕ್ಸೆಲ್ ಸೆನ್ಸಾರ್, ಎರಡನೇ ಕ್ಯಾಮೆರಾ 2 ಮೆಗಾ ಪಿಕ್ಸೆಲ್ ಸೆನ್ಸಾರ್ ಹೊಂದಿದ್ದು, ಮೂರನೇ ಕ್ಯಾಮೆರಾ 2 ಮೆಗಾ ಪಿಕ್ಸೆಲ್ ಮ್ಯಾಕ್ರೋ ಕ್ಯಾಮೆರಾವನ್ನು ಕೂಡ ನೀಡಲಾಗಿದೆ. ಇದಲ್ಲದೆ 16 ಮೆಗಾ ಪಿಕ್ಸೆಲ್ ಸೆನ್ಸಾರ್ ಸೆಲ್ಫಿ ಕ್ಯಾಮೆರಾವನ್ನು ಅಳವಡಿಸಲಾಗಿದೆ.
ಇನ್ನು ಈ ಸ್ಮಾರ್ಟ್‌ಫೋನ್ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು ಯುಎಸ್‌ಬಿ ಟೈಪ್-ಸಿ ಮೂಲಕ 33W ಸೂಪರ್VOOC ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, ವೈಫೈ 6, ಬ್ಲೂಟೂತ್ 5.2, NFC, GPS ಮತ್ತು A-GPS ಸೇರಿವೆ. ಇದಲ್ಲದೆ ಅಕ್ಸಿಲೆರೊಮೀಟರ್, ಗೈರೊಸ್ಕೋಪ್, ಆಂಬಿಯೆಂಟ್ ಲೈಟ್ ಸೆನ್ಸರ್, ಪ್ರಾಕ್ಸಿಮಿಟಿ ಸೆನ್ಸಾರ್ ಸೇರಿದಂತೆ ಇತ್ತೀಚೆಗಿನ ಎಲ್ಲ ಹೊಸ ಆಯ್ಕೆಗಳು ಇದರಲ್ಲಿದೆ.
Galaxy M53 5G: 108MP ಕ್ಯಾಮೆರಾದ ಗ್ಯಾಲಕ್ಸಿ M53 5G ಸ್ಮಾರ್ಟ್‌ಫೋನ್ ಖರೀದಿಸಬಹುದೇ?: ಇಲ್ಲಿದೆ ಉತ್ತರ