ಪ್ರಸ್ತುತ ಡಿಜಿಟಲ್ ಯುಗದಲ್ಲಿ ಇಂಟರ್‌ನೆಟ್ ಸಮಸ್ಯೆಯನ್ನು ಎದುರಿಸದವರು ಯಾರು ಇಲ್ಲ ಅನ್ನಬಹುದು. ಅದರಲ್ಲೂ ಮೊಬೈಲ್ ನೆಟ್ವರ್ಕ್ ಸಿಗದೇ ಇಂಟರ್ನೆಟ್ಗಾಗಿ ಪರಿಪಾಟಲು ಪಟ್ಟವರೇ ಹೆಚ್ಚು. ಆದರೆ ಈ ಎಲ್ಲಾ ಸಮಸ್ಯೆಗಳಿಗೆ ಇತಿಶ್ರೀ ಹಾಡಲು ಮುಂದಾಗುತ್ತಿದೆ ವಿಶ್ವದ ಪ್ರಮುಖ ಕಂಪೆನಿಗಳು. ಹೌದು, ಇಂಟರ್‌ನೆಟ್ ಸಮಸ್ಯೆಗೆ ಮುಕ್ತಿ ನೀಡಲು ಸ್ಯಾಟಲೈಟ್ ಇಂಟರ್‌ನೆಟ್ ವ್ಯವಸ್ಥೆ ರೂಪಿಸಲು ಪ್ರಮುಖ ಕಂಪೆನಿಗಳು ಸಜ್ಜಾಗಿ ನಿಂತಿದೆ. ಇದರಲ್ಲಿ ಟಾಟಾ ಗ್ರೂಪ್ ಕೂಡ ಇರುವುದು ವಿಶೇಷ. ಈಗಾಗಲೇ ಭಾರತದಲ್ಲಿ ಸ್ಯಾಟಲೈಟ್ ಇಂಟರ್‌ನೆಟ್ ವ್ಯವಸ್ಥೆ ಕಲ್ಪಿಸಲು ಟಾಟಾ ಗ್ರೂಪ್ ನೆಲ್ಕಾ ಕಂಪೆನಿ ಕೆನಡಾದ ಟೆಲಿಸ್ಯಾಟ್ ಕಂಪೆನಿ ಜೊತೆ ಮಾತುಕತೆ ನಡೆಸಿದೆ. ಈ ಎರಡು ಕಂಪೆನಿಗಳು ಪಾಲುದಾರಿಕೆ ಮೂಲಕ ಭಾರತದಲ್ಲಿ ಸ್ಯಾಟ್ಲೈಟ್ ಇಂಟರ್‌ನೆಟ್ ವ್ಯವಸ್ಥೆ ಮಾಡುವ ವಿಶ್ವಾಸದಲ್ಲಿದೆ.
ಏನಿದು ಸ್ಯಾಟಲೈಟ್ ಇಂಟರ್‌ನೆಟ್ ವ್ಯವಸ್ಥೆ ಎಂಬ ಪ್ರಶ್ನೆ ನಿಮ್ಮಲ್ಲೂ ಮೂಡಿರಬಹುದು. ಸಿಂಪಲ್ ಆಗಿ ಹೇಳಬೇಕೆಂದರೆ ಸ್ಯಾಟ್ಲೈಟ್ ಅಥವಾ ಉಪಗ್ರಹಗಳ ಮೂಲಕ ಇಂಟರ್‌ನೆಟ್ ನೀಡುವುದು. ಅಂದರೆ ಇಲ್ಲಿ ನಿಮಗೆ ಯಾವುದೇ ಮೊಬೈಲ್ ನೆಟ್ವರ್ಕ್ ಅವಶ್ಯಕತೆ ಇರುವುದಿಲ್ಲ. ಅಥವಾ ಇಂಟರ್‌ನೆಟ್ ಸಿಗುವ ಜಾಗದಲ್ಲೇ ಇರಬೇಕೆಂದಿಲ್ಲ. ಸ್ಯಾಟ್ಲೈಟ್ ಕಕ್ಷೆಯ ಅನುಸಾರ ನಿಮಗೆ ಮೂಲೆ ಮೂಲೆಯಲ್ಲೂ ಒಂದೇ ವೇಗದಲ್ಲಿ ಇಂಟರ್‌ನೆಟ್ ಸಿಗಲಿದೆ. ಇನ್ನೂ ಸರಳವಾಗಿ ಹೇಳಬೇಕೆಂದರೆ ನೀವು ಆಕಾಶದ ಕೆಳಗಿದ್ದರೆ ಸಾಕು ಇಂಟರ್‌ನೆಟ್ ಸಿಗುತ್ತದೆ. ಅದು ವಿಮಾನದಲ್ಲಿ ಆಗಿರಬಹುದು ಅಥವಾ ಯಾವುದೇ ದೂರ ಕಡಲಿನಲ್ಲಿ ಹಡಗಿನಲ್ಲಿ ಆಗಿರಬಹುದು. ಇಲ್ಲ ಬೆಟ್ಟ ಗುಡ್ಡಗಳ ನಡುವೆ ಆಗಿರಬಹುದು. ಎಲ್ಲಾ ಕಡೆಯು ಸ್ಯಾಟ್ಲೈಟ್ ಮೂಲಕ ಇಂಟರ್‌ನೆಟ್ ಸಿಗಲಿದೆ.
ಇದೀಗ ಇಂತಹದೊಂದು ಯೋಜನೆಯನ್ನು ಭಾರತದಲ್ಲಿ ಪರಿಚಯಿಸಲು ಟೆಲಿಸ್ಯಾಟ್ ಕಂಪೆನಿಯೊಂದಿಗೆ ಟಾಟಾ ನೆಲ್ಕಾ ಮಾತುಕತೆ ನಡೆಸುತ್ತಿದೆ. ಈ ಒಪ್ಪಂದವು ಯಶಸ್ವಿಯಾದರೆ ಭಾರತದಲ್ಲಿ ಸ್ಯಾಟ್ಲೈಟ್ ಮೂಲಕ ಬ್ರಾಡ್ಬ್ಯಾಂಡ್ ಸೇವೆ ಆರಂಭವಾಗಲಿದೆ. ಅದು ಕೂಡ ಕಡಿಮೆ ದರದಲ್ಲಿ ಬ್ರಾಡ್ಬ್ಯಾಂಡ್ ಸೇವೆ ಸಿಗಲಿದೆ ಎಂದು ಹೇಳಲಾಗಿದೆ.
ಇನ್ನು ಟೆಕ್ ದೈತ್ಯ ಎಲಾನ್ ಮಸ್ಕ್ ಅವರ ಟೆಸ್ಲಾ ಕಂಪೆನಿ ಕೂಡ ಇಂತಹದ್ದೇ ಪ್ರಯತ್ನಕ್ಕೆ ಕೈಹಾಕಿದೆ. ಈಗಾಗಲೇ ಅದರ ಪ್ರಯೋಗಿಕ ಪರೀಕ್ಷೆಗಳು ಪೂರ್ಣಗೊಂಡಿವೆ. ಅದರಂತೆ ಮಸ್ಕ್ ಅವರ ಸ್ಟಾರ್ ಲಿಂಕ್ ಸ್ಯಾಟ್ಲೈಟ್ ಇಂಟರ್‌ನೆಟ್ ಸೇವೆ 2022 ರ ವೇಳೆಗೆ ಸಿಗಲಿದೆ. ಹಾಗೆಯೇ ಅಮೆಜಾನ್ ಕಂಪೆನಿ ಕೂಡ ಉಪಗ್ರಹ ಇಂಟರ್‌ನೆಟ್ ಸೇವೆ ಒದಗಿಸಲು ಮುಂದಾಗಿದ್ದು, ಅದರಂತೆ ಅಮೆಜಾನ್ ಬ್ರಾಡ್ಬ್ಯಾಂಡ್ ಸೇವೆ ಕೂಡ ಶೀಘ್ರದಲ್ಲೇ ಆರಂಭವಾಗಲಿದೆ ಎಂದು ವರದಿಯಾಗಿದೆ.
ವಿಶ್ವದಲ್ಲೇ ಅತೀ ಹೆಚ್ಚು ಇಂಟರ್‌ನೆಟ್ ಬಳಕೆದಾರರನ್ನು ಹೊಂದಿರುವ ಭಾರತದಲ್ಲಿ ಸ್ಯಾಟ್ಲೈಟ್ ಬ್ರಾಡ್ಬ್ಯಾಂಡ್ ಸೇವೆಯು ಹೊಸ ಕ್ರಾಂತಿ ಹುಟ್ಟುಹಾಕಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಹಾಗೆಯೇ ಈಗಾಗಲೇ ಟೆಲಿಕಾಂ ಕಂಪೆನಿಗಳಾದ ಏರ್ಟೆಲ್, ಜಿಯೋ ಕೂಡ ತಮ್ಮ ಬಳಕೆದಾರರಿಗೆ ಯಾವುದೇ ಅಡೆತಡೆ ಇಲ್ಲದೆ ಇಂತಹದೊಂದು ಸೇವೆ ನೀಡಲು ಕೂಡ ಉತ್ಸುಕವಾಗಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಭಾರತದಲ್ಲಿ ಸ್ಯಾಟ್ಲೈಟ್ ಬ್ರಾಡ್ಬ್ಯಾಂಡ್ ಇಂಟರ್‌ನೆಟ್ ಹೊಸ ಸಂಚಲನ ಸೃಷ್ಟಿಸುವುದರಲ್ಲಿ ಅನುಮಾನವೇ ಇಲ್ಲ ಎನ್ನಬಹುದು.
ಇದನ್ನೂ ಓದಿ: Health Tips : ಇದು ನಿಮಗೆ ಗೊತ್ತೇ? ಬೆಳ್ಳುಳ್ಳಿ ಸಿಪ್ಪೆಯಿಂದ ಸಿಗುತ್ತೆ ಹಲವು ಪ್ರಯೋಜನಗಳು
ಇದನ್ನೂ ಓದಿ: Toyota Cars: ಜೋಳ ನೀಡಿ ಟೊಯೋಟಾ ಕಾರು ಖರೀದಿಸುವ ಅವಕಾಶ
(Tata group to enter sat broadband market with Telesat)