ಮೆಟಾ (Meta) ಒಡೆತನದ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸ್ಆ್ಯಪ್ 2022 ರಲ್ಲಿ ಸಾಕಷ್ಟು ಬೆಳವಣಿಗೆ ಕಂಡು ಅತಿ ಹೆಚ್ಚು ಫೀಚರ್ಗಳನ್ನು ಪರಿಚಯಿಸಿತ್ತು. ಇದಕ್ಕಾಗಿಯೇ ಇಂದು ವಿಶ್ವದಲ್ಲಿ ವಾಟ್ಸ್ಆ್ಯಪ್ ಬಳಸುವವರ ಸಂಖ್ಯೆ 2 ಬಿಲಿಯನ್ ದಾಟಿದೆ. ಭಾರತದಲ್ಲೇ ಸುಮಾರು 550 ಮಿಲಿಯನ್ ಜನರು ಉಪಯೋಗಿಸುತ್ತಿದ್ದಾರೆ. ವಾರಕ್ಕೆ ಒಂದು ಹೊಸ ಫೀಚರ್ಗಳ ಬಗ್ಗೆ ಘೋಷಣೆ ಮಾಡುವ ವಾಟ್ಸ್ಆ್ಯಪ್ 2023 ರಲ್ಲಿ ಕೂಡ ಅನೇಕ ವಿನೂತನ ಆಯ್ಕೆಗಳನ್ನು ಪರಿಚಯಿಸಲು ತಯಾರಿ ಮಾಡಿಕೊಂಡಿದೆ. ಇದರ ನಡುವೆ ವಾಟ್ಸ್ಆ್ಯಪ್ ಇತ್ತೀಚೆಗಷ್ಟೆ ದಿಢೀರ್ ಆಗಿ ತನ್ನ ಆಂಡ್ರಾಯ್ಡ್ (Android) ಮತ್ತು ಐಓಎಸ್ ಬಳಕೆದಾರರಿಗೆ ಹೊಸ ಆಯ್ಕೆಯೊಂದನ್ನು ಪರಿಚಯಿಸಿತು. ಅದೇನೆಂದರೆ ವಾಟ್ಸ್ಆ್ಯಪ್ನಲ್ಲಿ (WhatsApp) ನಿಮ್ಮ ನಂಬರ್ಗೆ ನೀವೇ ಮೆಸೇಜ್ ಮಾಡಬಹುದಾದ ಆಯ್ಕೆ. ಆದರೆ, ಈ ಫೀಚರ್ ಅನ್ನು ಕೆಲವರಿಗೆ ಬಳಸುವುದು ಹೇಗೆಂದು ತಿಳಿದಿಲ್ಲ. ಅಂಥವರಿಗೆ ಇಲ್ಲಿದೆ ಮಾಹಿತಿ.
ವಾಟ್ಸ್ಆ್ಯಪ್ನ ಈ ಹೊಸ ಮೆಸೇಜ್ ವಿಥ್ ಯುವರ್ಸೆಲ್ಫ್ ಎಂಬ ಫೀಚರ್ ಕಾಂಟೆಕ್ಟ್ ಲಿಸ್ಟ್ನಲ್ಲಿ ಕಾಣಲಿದೆ. ವಾಟ್ಸ್ಆ್ಯಪ್ ತೆರೆದು ನ್ಯೂ ಚಾಟ್ನಲ್ಲಿ ಕಾಂಟೆಕ್ಟ್ ಲಿಸ್ಟ್ ಓಪನ್ ಮಾಡಿದರೆ ಅಲ್ಲಿ ನಿಮಗೆ ನಿಮ್ಮ ನಂಬರ್ ಕಾಣಸಿಗುತ್ತದೆ. ಅದರ ಮೇಲೆ ಕ್ಲಿಕ್ ಮಾಡಿದರೆ ಚಾಟ್ ಬಾಕ್ಸ್ ಓಪನ್ ಆಗಲಿದ್ದು ನಿಮಗೆ ನೀವೇ ಮೆಸೇಜ್ ಕಳುಹಿಸಬಹುದು. ಈ ಚಾಟ್ ಬಾಕ್ಸ್ನಲ್ಲಿ ನಿಮಗೆ ಎಲ್ಲ ರೀತಿಯ ಆಯ್ಕೆ ಕಾಣಸಿಗುತ್ತದೆ. ಫೋಟೋ, ವಿಡಿಯೋ, ಡಾಕ್ಯುಮೆಂಟ್, ಆಡಿಯೋ ಎಲ್ಲ ರೀತಿಯ ಫೈಲ್ಗಳನ್ನು ಕಳುಹಿಸಬಹುದು. ಈ ಮೂಲಕ ಅಗತ್ಯ ದಾಖಲೆಗಳನ್ನು ಇಲ್ಲಿ ಸೇವ್ ಮಾಡಿಡಬಹುದು.
WhatsApp: ಈ ಆಂಡ್ರಾಯ್ಡ್-ಐಫೋನ್ಗಳಲ್ಲಿ ವಾಟ್ಸ್ಆ್ಯಪ್ ಬಂದ್
ಇನ್ನು ಸದ್ಯದಲ್ಲೇ ವಾಟ್ಸ್ಆ್ಯಪ್ ಸ್ಟೇಟಸ್ನಲ್ಲಿ ವಾಯ್ಸ್ ಮೆಸೇಜ್ ಅನ್ನು ಹಂಚಿಕೊಳ್ಳಬಹುದಂತೆ. ವಾಯ್ಸ್ ನೋಟ್ ಅನ್ನು ಸ್ಟೇಟಸ್ನಲ್ಲಿ ಹಂಚಿಕೊಳ್ಳಬಹುದಾದ ಆಯ್ಕೆ ಮೊದಲಿಗೆ ಐಒಎಸ್ ಬಳಕೆದಾರರಿಗೆ ಸಿಗಲಿದೆ. ಈವರೆಗೆ ಸ್ಟೇಟಸ್ನಲ್ಲಿ ವಿಡಿಯೋ, ಫೋಟೋ, ಲಿಂಕ್ ಮತ್ತು ಬರಹಗಳನ್ನು ಮಾತ್ರ ಹಂಚಿಕೊಳ್ಳಬಹುದು. ವಾಯ್ಸ್ ನೋಟ್ ಎಂಬ ಹೊಸ ಫೀಚರ್ ಬಂದರೆ ಬಳಕೆದಾರರು ಸ್ಟೇಟಸ್ನಲ್ಲಿ ವಾಯ್ಸ್ ನೋಟ್ ಅಥವಾ ವಾಯ್ಸ್ ಕ್ಲಿಪ್ಗಳನ್ನು ಶೇರ್ ಮಾಡಬಹುದಾಗಿದೆ. 30 ಸೆಕೆಂಡ್ಗಳ ಕಾಲ ಇದು ಇರಲಿದೆ. ಇದಕ್ಕಾಗಿ ಬರಹಗಳನ್ನು ಹಂಚಿಕೊಳ್ಳಬಹುದಾದ ಜಾಗದಲ್ಲಿ ಮೈಕ್ರೊ ಫೋನ್ ಆಯ್ಕೆಯನ್ನು ಕೂಡ ನೀಡಲಾಗಿದೆ. ಇಲ್ಲಿ ಮೈಕ್ರೊ ಫೋನ್ ಮೇಲೆ ಕ್ಲಿಕ್ ಮಾಡುವ ಮೂಲಕ ವಾಯ್ಸ್ ಸ್ಟೇಟಸ್ ಶೇರ್ ಮಾಡಬಹುದು. ಇದು ಎಂಡ್-ಟು-ಎಂಡ್ ಎನ್ಕ್ರಿಪ್ಟೆಡ್ ಆಗಿದೆ. ಸದ್ಯಕ್ಕೆ ಈ ಆಯ್ಕೆ ಐಒಎಸ್ ಬೇಟಾ ಬಳಕೆದಾರರಿಗೆ ಲಭ್ಯವಾಗುತ್ತಿದೆ.
ವಾಟ್ಸ್ಆ್ಯಪ್ ಇದೀಗ ಬಳಕೆದಾರರು ಪ್ರಮುಖ ಐದು ಚಾಟ್‌ಗಳನ್ನು ಪಿನ್ ಮಾಡುವಂತಹ ಆಯ್ಕೆ ನೀಡಲು ಮುಂದಾಗಿದೆ. ಈ ಫೀಚರ್ ಮೂಲಕ ನೀವು ದಿನನಿತ್ಯ ಹೆಚ್ಚಿನ ಸಂಖ್ಯೆಯಲ್ಲಿ ಚಾಟ್ ಮಾಡುವ ಪ್ರಮುಖ ಐದು ಚಾಟ್‌ಗಳನ್ನು ಪಿನ್ ಮಾಡಬಹುದಾಗಿದೆ. ಈ ಚಾಟ್‌ಗಳು ನಿಮ್ಮ ವಾಟ್ಸ್ಆ್ಯಪ್ ಚಾಟ್‌ನ ಮೇಲ್ಭಾಗದಲ್ಲಿ ಗೋಚರಿಸುತ್ತದೆ. ಸದ್ಯದಲ್ಲೇ ಈ ಆಯ್ಕೆ ಆಂಡ್ರಾಯ್ಡ್, ಐಒಎಸ್ ಮತ್ತು ವೆಬ್ ಬಳಕೆದಾರರಿಗೆ ಸಿಗಲಿದೆಯಂತೆ. ಸದ್ಯ ಈ ಹೊಸ ಫೀಚರ್ಸ್ ಬಗ್ಗೆ ವಾಬೇಟಾಇನ್ಫೋ ವೆಬ್‌ಸೈಟ್ ವರದಿ ಮಾಡಿದೆ. ಪ್ರಸ್ತುತ, ವಾಟ್ಸ್ಆ್ಯಪ್ ಬಳಕೆದಾರರು ತಮ್ಮ ಚಾಟ್ ವಿಂಡೋದ ಮೇಲೆ ಕೇವಲ ಮೂರು ಚಾಟ್‌ಗಳನ್ನು ಮಾತ್ರ ಪಿನ್ ಮಾಡಬಹುದು. ಆದರೆ ಹೊಸ ಆಯ್ಕೆಯಲ್ಲಿ ನೀವು ಐದು ಚಾಟ್‌ಗಳನ್ನು ಪಿನ್ ಮಾಡುವುದಕ್ಕೆ ಅವಕಾಶ ಸಿಗಲಿದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ