ಉದ್ಯಮಿ ಆನಂದ್ ಮಹೀಂದ್ರ ಬ್ರಿಟನ್ನಿನ ರಾಜಕೀಯ ಸ್ಥಿತಿಯ ಮೇಲೆ ಮಾಡಿರುವ ಟ್ವೀಟ್ ಜನರಿಗೆ ಬಹಳ ಇಷ್ಟವಾಗುತ್ತಿದೆ!

ಅವರು ಪೋಸ್ಟ್ ಮಾಡಿರುವ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಜನ ಹೆಚ್ಚೆಚ್ಚು ಇಷ್ಟಪಡುತ್ತಿದ್ದಾರೆ ಮತ್ತು ಈಗಾಗಲೇ ಅದು 12,000 ಕ್ಕೂ ಹೆಚ್ಚು ಲೈಕ್ ಮತ್ತು ರೀಟ್ವೀಟ್​​ಗಳನ್ನು ಪಡೆದುಕೊಂಡಿದೆ.

ಉದ್ಯಮಿ ಆನಂದ್ ಮಹೀಂದ್ರ ಬ್ರಿಟನ್ನಿನ ರಾಜಕೀಯ ಸ್ಥಿತಿಯ ಮೇಲೆ ಮಾಡಿರುವ ಟ್ವೀಟ್ ಜನರಿಗೆ ಬಹಳ ಇಷ್ಟವಾಗುತ್ತಿದೆ!
ಆನಂದ್​ ಮಹೀಂದ್ರ
Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jul 13, 2022 | 12:16 PM

ಉದ್ಯಮಿ ಆನಂದ್ ಮಹೀಂದ್ರಾ (Anand Mahindra) ಅವರ ಟ್ವೀಟ್ ಗಳನ್ನು ಇಷ್ಟಪಡದವರು ಯಾರಿದ್ದಾರೆ ಮಾರಾಯ್ರೇ. ಅವರ ಟ್ವೀಟ್ ಗಳು ಬಹಳ ಕುತೂಹಲಭರಿತವಾಗಿರುತ್ತವೆ ಮತ್ತು ಗಮ್ಮತ್ತಿನಿಂದ ಕೂಡಿರುತ್ತವೆ. ಅವರ ಫಾಲೋಯರ್ಸ್ ಗೆ ಮನರಂಜನೆ ನೀಡಲು ಈ ಬಾರಿ ಅವರು ಯುನೈಟೆಡ್ ಕಿಂಗ್ಡಮ್ ನಲ್ಲಿ (United Kingdom) ಜಾರಿಯಲ್ಲಿರುವ ರಾಜಕೀಯ ಸ್ಥಿತಿಯನ್ನು ಆರಿಸಿಕೊಂಡು, ಅಲ್ಲಿನ ಪ್ರಧಾನ ಮಂತ್ರಿಗಳ ಅಧಿಕೃತ ನಿವಾಸವಾಗಿರುವ 10 ಡೌನಿಂಗ್ ಸ್ಟ್ರೀಟ್ ನ (Downing Street) ಒಂದು ಮೀಮ್ ಶೇರ್ ಮಾಡಿದ್ದಾರೆ. ಆನಂದ್ ಅವರು ಶೇರ್ ಮಾಡಿರುವ ಪಿಎಮ್ ನಿವಾಸದ ಮುಂಭಾಗವು ಮಾವಿನ ಎಲೆಗಳ ತೋರಣದಿಂದ ಶೃಂಗರಿಸಲ್ಪಟ್ಟಿದೆ ಮತ್ತು ಸ್ವಸ್ತಿಕಾದ ಚಿಹ್ನೆಗಳು ಅದರ ಮೇಲಿವೆ!

ತಮ್ಮ ಪೋಸ್ಟ್ ಗೆ ಅವರು ನೀಡಿರುವ ಶೀರ್ಷಿಕೆ ಕೂಡ ಅದ್ಭುತವಾಗಿದೆ. ‘10 ಡೌನಿಂಗ್ ಸ್ಟ್ರೀಟ್ನ ಭವಿಷ್ಯ? ಖ್ಯಾತ ಬ್ರಿಟಿಷ್ ಹಾಸ್ಯಕ್ಕೆ ದೇಶೀ ಹಾಸ್ಯದ ಲೇಪನ.’

ಅವರು ಪೋಸ್ಟ್ ಮಾಡಿರುವ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಜನ ಹೆಚ್ಚೆಚ್ಚು ಇಷ್ಟಪಡುತ್ತಿದ್ದಾರೆ ಮತ್ತು ಈಗಾಗಲೇ ಅದು 12,000 ಕ್ಕೂ ಹೆಚ್ಚು ಲೈಕ್ ಮತ್ತು ರೀಟ್ವೀಟ್ಗಳನ್ನು ಪಡೆದುಕೊಂಡಿದೆ.

ಕಾಮೆಂಟ್ ಬಾಕ್ಸ್ನಲ್ಲಿ ಒಬ್ಬರು, ‘ಕೆಲವು ಸಲ ಭಾರತೀಯನಾಗಿರುವುದು ಒಂದು ಸುಂದರ ಅನುಭೂತಿ,’ ಅಂತ ಬರೆದಿದ್ದಾರೆ.

ಮತ್ತೊಬ್ಬರು, ‘ಸರ್ ನಿಮ್ಮ ಟ್ವೀಟ್ ಗಳು ನಮ್ಮನ್ನು ಯಾವತ್ತೂ ನಿರಾಶೆಗೊಳಿಸುವುದಿಲ್ಲ,’ ಅಂತ ರಿಯಾಕ್ಟ್ ಮಾಡಿದ್ದಾರೆ.

ಮೂರನೇಯವರೊಬ್ಬರು, ‘ಮುಖ್ಯದ್ವಾರದ ಚೌಕಟ್ಟಿನ ಮೇಲ್ಭಾಗದಲ್ಲಿ ನಿಂಬೆಹಣ್ಣು ಮತ್ತು ಮೆಣಸಿನಕಾಯಿ ಮಿಸ್ಸಿಂಗ್ ಆಗಿವೆ,’ ಅಂತ ಬರೆದಿದ್ದಾರೆ.

ಹಿಂದೆ ಯುಕೆಯ ಚಾನ್ಸ್ಲರ್ ಆಗಿ ಕೆಲಸ ಮಾಡಿರುವ ಭಾರತೀಯ ಮೂಲದ ರಿಷಿ ಸುನಾಕ್ ಅವರು ಅಧಿಕೃತವಾಗಿ ತಾವು ಮುಂದಿನ ಯುಕೆ ಪ್ರಧಾನ ಮಂತ್ರಿ ರೇಸ್ನಲ್ಲಿರುವುದಾಗಿ ಘೋಷಿಸಿಕೊಂಡ ಬಳಿಕ ಮಹಿಂದ್ರ ಈ ಟ್ವೀಟ್ ಮಾಡಿದ್ದಾರೆ. ಕನ್ಸರ್ವೇಟಿವ್ ಪಾರ್ಟಿಯ ನಾಯಕ ಮತ್ತು ಬ್ರಿಟಿಷ್ ಪ್ರಧಾನಿಯಾಗಿದ್ದ ಬೊರಿಸ್ ಜಾನ್ಸನ್ ಅವರ ರಾಜೀನಾಮೆ ಬಳಿಕ ತೆರವಾಗಿರುವ ಸ್ಥಾನಕ್ಕೆ ಶಾರ್ಟ್ಲಿಸ್ಟ್ ಆಗಿರುವ 8 ಅಭ್ಯರ್ಥಿಗಳ ಪೈಕಿ ಸುನಾಕ್ ಅವರ ಹೆಸರು ಸಹ ಇದೆ. ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಮಂಗಳವಾರ ಸಾಯಂಕಾಲ ಕೊನೆಗೊಂಡಿದೆ.

ದಿ ಟೆಲಿಗ್ರಾಫ್ ಪತ್ರಿಕೆಗೆ ನೀಡಿರುವ ಸಂದರ್ಶನವೊಂದರಲ್ಲಿ ಸುನಾಕ್ ಅವರು ತಾನೊಂದು ವೇಳೆ ಬ್ರಿಟನ್ನಿನ ಪ್ರಧಾನ ಮಂತ್ರಿಯಾದರೆ, ಆರ್ಥಿಕತೆಯನ್ನು ಕನ್ಸರ್ವೇಟಿವ್ ಪಾರ್ಟಿಯ ಹಿಂದಿನ ನಾಯಕಿ ಮತ್ತು ಪ್ರಧಾನಿಯಾಗಿದ್ದ ಮಾರ್ಗರೆಟ್ ಥ್ಯಾಚರ್ ಅವರ ಹಾಗೆ ನಿರ್ವಹಿಸುವುದಾಗಿ ಹೇಳಿದ್ದಾರೆ.

‘ನಾವು ಜವಾಬ್ದಾರಿಯುತವಾಗಿ ತೆರಿಗೆಗಳಲ್ಲಿ ಕಡಿತ ಮಾಡುತ್ತೇವೆ, ನನ್ನ ಆರ್ಥಿಕ ನೀತಿ ಅದೇ ಆಗಿರಲಿದೆ. ಅದನ್ನು ಥ್ಯಾಚರಿಮ್ ಕಾಮನ್ ಸೆನ್ಸ್ ಎಂದು ಬಣ್ಣಿಸುತ್ತೇನೆ. ಅವರು ಕೂಡ ಇದನ್ನೇ ಮಾಡುತ್ತಿದ್ದರು ಎಂಬ ವಿಶ್ವಾಸ ನನ್ನದು,’ ಎಂದು ಸುನಾಕ್ ಪತ್ರಿಕೆಗೆ ಹೇಳಿದ್ದಾರೆ.

ಹಗರಣ-ಭರಿತ ಜಾನ್ಸನ್ ಆಡಳಿತ ವಿರುದ್ಧ ಮೊದಲಿಗೆ ಬಂಡೆದ್ದವರೇ ಸುನಾಕ್ ಹಾಗೂ ಮತ್ತೊಬ್ಬ ಸಚಿವರು. ಅವರಿಬ್ಬರು ತಮ್ಮ ಹುದ್ದೆಗಳಿಗೆ ರಾಜಿನಾಮೆ ಸಲ್ಲಿಸಿದ ಬಳಿಕ ರಾಜೀನಾಮೆಗಳ ಮಾಹಾಪೂರವೇ ಹರಿದು, ಜಾನ್ಸನ್ ಕನ್ಸರ್ವೇಟಿವ್ ಪಕ್ಷದ ನಾಯಕನ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವಂಥ ಸ್ಥಿತಿ ಉಂಟಾಯಿತು.

ಇದನ್ನೂ ಓದಿ:  ಬ್ರಿಟನ್ ಹಣಕಾಸು ಖಾತೆ ಸಚಿವ ರಿಷಿ ಸುನಾಕ್ ಮತ್ತು ಆರೋಗ್ಯ ಸಚಿವ ಸಜ್ಜಿದ್ ಜಾವೇದ್ ರಾಜೀನಾಮೆ