
ಬೆಂಗಳೂರು, ಜನವರಿ 30: ಉದ್ಯೋಗ (job) ಎಲ್ಲರಿಗೂ ಅತ್ಯವಶ್ಯಕ. ಆದರೆ ಈಗಿನ ಕಾಲದಲ್ಲಿ ಎಷ್ಟೇ ಓದಿಕೊಂಡಿದ್ದರೂ ಕೈ ತುಂಬಾ ಸಂಬಳ ಸಿಗುವ ಒಂದೊಳ್ಳೆ ಉದ್ಯೋಗ ಗಿಟ್ಟಿಸಿಕೊಳ್ಳುವುದು ಸುಲಭದ ಕೆಲಸ ಅಲ್ಲ. ತಾವು ಓದಿರುವುದಕ್ಕೆ ತಕ್ಕ ಉದ್ಯೋಗವಿಲ್ಲದೇ ಸಿಕ್ಕ ಕೆಲಸವನ್ನೇ ಅನಿವಾರ್ಯ ಕಾರಣಕ್ಕಾಗಿ ಮಾಡುವವರೇ ಹೆಚ್ಚು. ಕೆಲಸವಿಲ್ಲದೇ ಖಾಲಿ ಕುಳಿತು ಕೊಂಡಿದ್ದ ಈ ವ್ಯಕ್ತಿಯೊಬ್ಬರು ಇದೀಗ ಬೆಂಗಳೂರಿನಲ್ಲಿ (Bengaluru) ಕ್ಯಾಬ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದಾರೆ. ಈ ವ್ಯಕ್ತಿಯ ದಿನದ ಸಂಪಾದನೆ 4000 ರೂ ಅಂತೆ. ಸ್ವತಃ ಇವರೇ ತನ್ನ ತಿಂಗಳ ಗಳಿಕೆಯ ಬಗ್ಗೆ ರೆಡ್ಡಿಟ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ.
ಆರ್/ಬೆಂಗಳೂರು ಹೆಸರಿನ ರೆಡ್ಡಿಟ್ ಪೋಸ್ಟ್‌ನಲ್ಲಿ ದಿ ರಾಂಟ್ ಆಫ್ ಎ ರಿವರ್” ಎಂಬ ಶೀರ್ಷಿಕೆಯಲ್ಲಿ ತನ್ನ ಉದ್ಯೋಗದ ಅನುಭವವನ್ನು ಹಂಚಿಕೊಂಡಿದ್ದು, . ಈ ಪೋಸ್ಟ್‌ನಲ್ಲಿ, 1.5 ವರ್ಷಗಳ ಕಾಲ ನಿರುದ್ಯೋಗಿಯಾಗಿದ್ದೆ, ಬ್ಯುಸಿನೆಸ್ ಮಾಡಿ ನನ್ನ ಕೈಯನ್ನು ಸುಟ್ಟುಕೊಂಡೆ, ಸಾಲ ಹಾಗೂ ಕ್ರೆಡಿಟ್ ಕಾರ್ಡ್ ಸಾಲಗಳಿಗೆ ಸಿಲುಕಿದೆ. ಯಾವುದೇ ಪ್ರಯೋಜನವಾಗಲಿಲ್ಲ. ದಿನಕ್ಕೆ 1.5 ಸಾವಿರಕ್ಕೆ ಹಳದಿ ಬೋರ್ಡ್ ಕಾರನ್ನು ಬಾಡಿಗೆಗೆ ಪಡೆದು ಕಳೆದ ತಿಂಗಳು ಚಾಲನೆ ಮಾಡಲು ಪ್ರಾರಂಭಿಸಿದೆ ಎಂದು ಹೇಳಿದ್ದಾರೆ.
ಉಬರ್ ಹಾಗೂ ರ್ಯಾಪಿಡೊದಂತಹ ರೈಡ್-ಹೇಲಿಂಗ್ ಪ್ಲಾಟ್‌ಫಾರ್ಮ್‌ಗಳಲ್ಲಿ ಕೆಲಸ ಮಾಡುತ್ತೇನೆ. ಬೆಂಗಳೂರಿನಲ್ಲಿ ದಿನಕ್ಕೆ ಸುಮಾರು 16 ಗಂಟೆಗಳ ಕಾಲ ಕಾರು ಚಲಾಯಿಸುತ್ತೇನೆ. ನನ್ನ ದೈನಂದಿನ ಗಳಿಕೆ ಸುಮಾರು 4,000 ರೂ. ಅದರಲ್ಲಿ 1.5 ಸಾವಿರ ಕಾರು ಬಾಡಿಗೆಗೆ ಹೋಗುತ್ತದೆ, 1.2 ಸಾವಿರ ಸಿಎನ್‌ಜಿಗೆ ಮತ್ತು 200 ಆಹಾರಕ್ಕೆ ಖರ್ಚಾಗುತ್ತದೆ. ನನಗೆ ಉಳಿಯುವುದು ಒಂದು ಸಾವಿರ ರೂ ಮಾತ್ರ. ವಿಶೇಷವಾಗಿ ನಗರದಲ್ಲಿನ ಸಂಚಾರದಟ್ಟಣೆಯೊಂದಿಗೆ ಈ ಕೆಲಸ ನಿಜವಾಗಿಯೂ ಕಷ್ಟಕರವಾಗಿದೆ ಎಂದು ವಿವರಿಸಿದ್ದಾರೆ.
ಹಣಕಾಸಿನ ಹೊರತಾಗಿ, ಕಾಲು, ಮೊಣಕಾಲು ನೋವು ಹಾಗೂ ಸೀಮಿತ ನಿದ್ರೆ ಸೇರಿದಂತೆ ದೈಹಿಕ ಒತ್ತಡ ಅನುಭವಿಸಬೇಕು. ದಿನಕ್ಕೆ ಸುಮಾರು 6 ಗಂಟೆಗಳ ಕಾಲ ನಿದ್ರೆ ಅಷ್ಟೇ. ಕೆಲಸದ ಹೊರತಾಗಿ ಬೇರೆ ಯಾವುದಕ್ಕೂ ಸಮಯವಿಲ್ಲ. ಬೆಂಗಳೂರಿನಲ್ಲಿ ಲಕ್ಷಾಂತರ ಜನರು ಈ ಕ್ಯಾಬ್ ಚಾಲನೆಯನ್ನು ಹೇಗೆ ಮಾಡುತ್ತಿದ್ದಾರೆ ಎನ್ನುವುದೇ ನನಗೆ ಆಶ್ಚರ್ಯವಾಗುತ್ತದೆ. ಅಪ್ಲಿಕೇಶನ್‌ಗಳು ಸ್ವತಃ ರಾಕ್ಷಸದಂತೆ ಆಗಿದೆ. ಲಕ್ಷಾಂತರ ಜನರು ದಿನನಿತ್ಯದ ಜೀವನವನ್ನು ನಡೆಸಲು ಈ ರೀತಿ ಕೆಲಸ ಮಾಡಲು ಸಿದ್ಧರಾಗಿದ್ದಾರೆ, ಪ್ರತಿದಿನ ಕಠಿಣ ಪರಿಶ್ರಮದಿಂದ ಬದುಕುತ್ತಾರೆ, ಏನನ್ನೂ ಉಳಿಸಲು ಸಾಧ್ಯವಾಗುತ್ತಿಲ್ಲ, ಪ್ರತಿದಿನ ತಮ್ಮ ಆರೋಗ್ಯ ಮತ್ತು ಜೀವವನ್ನು ಪಣಕ್ಕಿಡುತ್ತಾರೆ ಎಂದು ವಾಸ್ತವ ಸ್ಥಿತಿಯ ಬಗ್ಗೆ ಹೇಳಿದ್ದಾರೆ.
ಫೋನ್‌ನ ನಿರಂತರ ಮೇಲ್ವಿಚಾರಣೆ, ಸಂಚಾರ ಒತ್ತಡ, ಸವಾರಿ ರದ್ದತಿಯ ಭಯ ಮತ್ತು ದೈನಂದಿನ ವಾಹನ ನಿರ್ವಹಣೆಯೂ ಒತ್ತಡವನ್ನು ಹೆಚ್ಚಿಸುತ್ತದೆ.
ಈ ಕಠಿಣ ಪರಿಶ್ರಮ ನನ್ನನ್ನು ಎಲ್ಲಿಗೂ ಕರೆದೊಯ್ಯುವುದಿಲ್ಲ, ಆದರೆ ಕೋಟ್ಯಂತರ ಭಾರತೀಯರಿಗೆ ಉದ್ಯೋಗ ನೀಡಿದೆ. ಅಗ್ಗದ ದುಡಿಮೆಯಿಂದಾಗಿ ಇತರರು ಈ ಸವಲತ್ತನ್ನು ಆನಂದಿಸಬಹುದು ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಇಂಜಿನಿಯರ್, ಡಾಕ್ಟರನ್ನೆಲ್ಲ ನೂಕಾಚೆ ದೂರ! ಮ್ಯಾಗಿ ಮಾಡಿ ದಿನಕ್ಕೆ 21,000 ರೂ. ಗಳಿಸಿದ ಯುವಕ
ಈ ಪೋಸ್ಟ್ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ, ನಿಮ್ಮ ಕಥೆಯನ್ನು ಹಂಚಿಕೊಂಡಿದ್ದಕ್ಕಾಗಿ ಧನ್ಯವಾದಗಳು. ಇದು ತುಂಬಾ ಕಠಿಣ ಎಂದು ನನಗೆ ತಿಳಿದಿರಲಿಲ್ಲ ಎಂದು ಹೇಳಿದ್ದಾರೆ. ಮತ್ತೊಬ್ಬರು, ನಿಮ್ಮ ದುಡಿಮೆಗೆ ತಕ್ಕ ಪ್ರತಿಫಲ ಸಿಗುತ್ತದೆ, ಕಾಯುವ ತಾಳ್ಮೆ ಇರಲಿ ಎಂದಿದ್ದಾರೆ. ಇನ್ನೊಬ್ಬರು, ನಿಮ್ಮ ಕಥೆ ಕೇಳಿದ್ರೆ ನಿಜಕ್ಕೂ ಬೇಸರವಾಗುತ್ತದೆ. ಆದರೆ ಕೈಯಲ್ಲೊಂದು ಉದ್ಯೋಗ ಇದೆಯೆಂದು ಖುಷಿ ಪಡಿ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:07 pm, Fri, 30 January 26