
ಯುವಕನೊಬ್ಬ ನೈರ್ಮಲ್ಯ ಕಾರ್ಯಕರ್ತೆಯ ಮುಂದೆ ಪ್ಯಾಂಟ್ ಬಿಚ್ಚಿ ಅಸಭ್ಯವಾಗಿ ವರ್ತಿಸಿದ್ದಾನೆ. ಈ ವೇಳೆ ಮಹಿಳೆ ಯುವಕನಿಗೆ ಪೊರಕೆಯಿಂದ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ತಮಿಳುನಾಡಿನ ಚೆನ್ನೈನ ಅಡ್ಯಾರ್ ಸೇತುವೆಯ ಬಳಿ (Chennai sanitation worker) ನಡೆದಿದೆ. ಇದೀಗ ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಹಿಳೆ ಕಸ ಗುಡಿಸುತ್ತಿದ್ದ ವೇಳೆ ಬೈಕ್ನಲ್ಲಿ ಬಂದ ಯುವಕ ಆಕೆ ಮುಂದೆ ಪ್ಯಾಂಟ್ ಬಿಚ್ಚಿ ಅಸಭ್ಯವಾಗಿ ವರ್ತಿಸಿದ್ದಾನೆ. ಈ ವೇಳೆ ಮಹಿಳೆ ಯುವಕನಿಗೆ ಸರಿಯಾಗಿ ಪೊರಕೆಯಲ್ಲಿ ಗ್ರಹಚಾರ ಬಿಡಿಸಿದ್ದಾರೆ.
ವರದಿಗಳ ಪ್ರಕಾರ, ತಮಿಳುನಾಡಿನ ಚೆನ್ನೈನ ಅಡ್ಯಾರ್ ಸೇತುವೆಯ ಬಳಿ ಸೋಮವಾರ ಬೆಳಿಗ್ಗೆ 5 ಗಂಟೆ ಸುಮಾರಿಗೆ ನೈರ್ಮಲ್ಯ ಕಾರ್ಯಕರ್ತೆ ರಸ್ತೆ ಸ್ವಚ್ಛಗೊಳಿಸುತ್ತಿರುವಾಗ ಹೆಲ್ಮೆಟ್ ಧರಿಸಿದ ಯುವಕನೊಬ್ಬ ಬೈಕ್ನಲ್ಲಿ ಬಂದು ಆಕೆ ಮುಂದೆ ನಿಲ್ಲಿಸಿದ್ದಾನೆ. ಮಹಿಳೆ, ಸ್ವಲ್ಪ ಬೈಕ್ ತೆಗೆಯಿರಿ ಸ್ವಚ್ಛ ಮಾಡಬೇಕು ಎಂದು ಹೇಳಿದಾಗ, ಯುವಕ ವಿಚಿತ್ರ ರೀತಿಯಲ್ಲಿ ತಲೆ ಅಲ್ಲಾಡಿಸಿ, ಇದ್ದಕ್ಕಿದ್ದಂತೆ ತನ್ನ ಪ್ಯಾಂಟ್ ಜಿಪ್ ಬಿಚ್ಚಿ, ತನ್ನ ಗುಪ್ತಾಂಗ ತೋರಿಸಿದ್ದಾನೆ.
ಈ ಬಗ್ಗೆ ನೈರ್ಮಲ್ಯ ಕಾರ್ಯಕರ್ತೆ ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನಲ್ಲಿ ಮಹಿಳೆ ಹೀಗೆ ಹೇಳಿದ್ದಾರೆ. “ಯುವಕ ಕಾಲೇಜು ವಿದ್ಯಾರ್ಥಿಯಂತೆ ಕಾಣುತ್ತಿದ್ದ, ನಾನು ಕಸ ಗುಡಿಸುವ ವೇಳೆ ಅಡ್ಡ ಬಂದು ಬೈಕ್ ನಿಲ್ಲಿಸಿದ, ನಾನು ತುಂಟಾಟ ಮಾಡುವ ಹುಡುಗ ಎಂದು ಸುಮ್ಮನಾದೆ, ಆದರೆ ಅವನು ಜಿಪ್ ತೆರೆದಾಗ ನನಗೆ ಶಾಕ್ ಆಯಿತು. ನಾನು ತಕ್ಷಣ ಪೊರಕೆ ಎತ್ತಿಕೊಂಡು ಅವನನ್ನು ಹೊಡೆಯಲು ಪ್ರಾರಂಭಿಸಿದೆ. ಅವನು ಭಯಗೊಂಡು ಅಲ್ಲಿಂದ ಓಡಿ ಹೋಗಿದ್ದಾನೆ.” ಎಂದು ಹೇಳಿದ್ದಾರೆ. ಇನ್ನು ಈ ದೃಶ್ಯವೂ ಕಾರಿನ ಡ್ಯಾಶ್‌ಬೋರ್ಡ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮಹಿಳೆ ತನ್ನ ರಕ್ಷಣೆಗಾಗಿ ಧೈರ್ಯ ಮಾಡಿ, ಆ ಯುವಕನಿಗೆ ಸರಿಯಾಗಿ ಪಾಠ ಕಳಿಸಿದ್ದಾರೆ ಎಂದು ನೆಟ್ಟಿಗರು ಹೇಳಿದ್ದಾರೆ.
ಇದನ್ನೂ ಓದಿ: ಬಿಕಿನಿ ಧರಿಸಿ ಗಂಗಾ ನದಿಯಲ್ಲಿ ಪವಿತ್ರ ಸ್ನಾನ ಮಾಡಿದ ಮಹಿಳೆ, ವಿಡಿಯೋ ವೈರಲ್
ಇನ್ನು ಮಹಿಳೆ ಹೇಳಿರುವ ಪ್ರಕಾರ, ಈ ಹಿಂದೆಯೂ ನಮಗೆ ಇಂತಹ ಅನುಭವಗಳು ಆಗಿವೆ. ನಾವು ಬೀದಿಗಳಲ್ಲಿ ಒಬ್ಬಂಟಿಯಾಗಿ ಕೆಲಸ ಮಾಡುತ್ತೇವೆ. ಆಗಾ ಕೆಲವೊಂದು ವ್ಯಕ್ತಿ ನಮ್ಮ ಬಳಿ ಬಂದು ಹೀಗೆ ಕೆಟ್ಟದಾಗಿ ವರ್ತನೆ ಮಾಡುತ್ತಾರೆ. ನಮಗೆ ಭದ್ರತೆ ಬೇಕು, ಸರ್ಕಾರ ಈ ಬಗ್ಗೆ ಯೋಚನೆ ಮಾಡಬೇಕಿದೆ ಎಂದು ಮಹಿಳೆ ಹೇಳಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಆರೋಪಿಯನ್ನು ಗುರುತಿಸಲಾಗಿದೆ. ಹಾಗೂ ಆತನನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ