ಮನೆಯಲ್ಲಿ ಸಾಕಲೆಂದೇ ಜನ ಅದೆಷ್ಟೋ ಲಕ್ಷ ಬೆಲೆ ಬಾಳುವ ನಾಯಿ ಮರಿಗಳನ್ನು (Dogs) ಖರೀದಿಸುತ್ತಾರೆ, ಕೆಲವರು ದತ್ತು ತೆಗೆದುಕೊಳ್ಳುತ್ತಾರೆ. ಅದರಲ್ಲಂತೂ ಕೆಲವು ನಾಯಿಗಳಿಗೆ ದುಬಾರಿ ಬೆಲೆಯ ಆಹಾರ ಕೊಡುವುದರಿಂದ ಹಿಡಿದು ಐಷಾರಾಮಿ (Luxury) ಬಟ್ಟೆ ತೊಡಿಸುವುದನ್ನೂ ನಾವು ನೋಡಿದ್ದೇವೆ. ಹೀಗಿರುವಾಗ ಚೀನಾದ (China) ಗ್ರಾಮೀಣ ಪ್ರದೇಶದ ಕುಟುಂಬವೊಂದು ದತ್ತು ತೆಗೆದುಕೊಂಡ ನಾಯಿಮರಿ ಎರಡು ವರ್ಷಗಳ ನಂತರ ಕರಡಿ (Black Bear) ಎಂದು ತಿಳಿದುಬಂದು ಕಂಗಾಲಾಗಿ ಹೋಗಿದೆ! ಇವರು ಎರಡು ವರ್ಷಗಳ ಕಾಲ ತಾವು ಸಾಮಾನ್ಯ ನಾಯಿ ಸಾಕುತ್ತಿದ್ದೇವೆ ಎಂದೇ ಭಾವಿಸಿದ್ದರು.
ಚೀನಾದ ಯುನ್ನಾನ್ ಪ್ರಾಂತ್ಯದ ಕುನ್ಮಿಂಗ್ ನಗರದ ಹೊರಗಿನ ದೂರದ ಹಳ್ಳಿಯ ಮಹಿಳೆ ಸು ಯುನ್, 2016 ರಲ್ಲಿ ಟಿಬೆಟಿಯನ್ ಮಾಸ್ಟಿಫ್ (Tibetan Mastiff) ನಾಯಿಮರಿಯನ್ನು ದತ್ತು ತೆಗೆದುಕೊಂಡರು. ಈ ಜಾತಿಯ ನಾಯಿಗಳು ದೈತ್ಯವಾಗಿ ಬೆಳೆಯುವ ಕಾರಣ ಈ ನಾಯಿ ಮರಿ ದೊಡ್ಡದಾಗಿದೆ ಮತ್ತು ಸಾಮಾನ್ಯ ನಾಯಿಮರಿಗಿಂತ ಹೆಚ್ಚು ಆಹಾರ ಸೇವಿಸುತ್ತಿದೆ ಎಂದು ಈ ಮಹಿಳೆ ಭಾವಿಸಿದ್ದರಂತೆ. ಇದರ ಆಹಾರ ಸೇವನೆ ಹೆಚ್ಚಾಗಿದ್ದರು, ತಮ್ಮ ಮನೆಯ ನಾಯಿಯಂತೆ ಎರಡು ವರ್ಷಗಳ ಕಾಲ ಸು ಯುನ್ ಸಾಕಿದ್ದರು.
ಎರಡು ವರ್ಷಗಳ ನಂತರ, ತಮ್ಮ ನಾಯಿ ಸುಮಾರು 113 ಕೆಜಿ ತೂಕವಿದ್ದು ದೈತ್ಯವಾಗಿದ್ದದ್ದನ್ನು ನೋಡಿ ಇವರಿಗೆ ಅನುಮಾನ ಶುರುವಾಯಿತು. ಅದು ಬೆಳೆದಂತೆ, ಅದರ ನಡವಳಿಕೆಯು ನಾಯಿಗೆ ಹೋಲದೆ ಇರುವುದನ್ನು ಕಂಡು ಮಹಿಳೆ ವೃತ್ತಿಪರರನ್ನು ಸಂಪರ್ಕಿಸಲು ನಿರ್ಧರಿಸಿದರು. ಆಗ ಆಕೆಗೆ ತಿಳಿದದ್ದು ಎರಡು ವರ್ಷಗಳಿಂದ ತಾನು ಸಾಕುತ್ತಿದ್ದದ್ದು ಟಿಬೆಟಿಯನ್ ಮಾಸ್ಟಿಫ್ ನಾಯಿಯಲ್ಲ, ಅದು ಏಷ್ಯಾಟಿಕ್ ಕಪ್ಪು ಕರಡಿ (Asiatic Black bear) ಎಂದು. “ಅವನು ಹೆಚ್ಚು ಬೆಳೆದಂತೆ, ಕರಡಿಯಂತೆ ಕಾಣುತ್ತಿದ್ದನು” ಎಂದು ಮಹಿಳೆ ಚೀನಾದ ಮಾಧ್ಯಮವೊಂದಕ್ಕೆ ಹೇಳಿದರು.
ಇದನ್ನೂ ಓದಿ: ಆರ್ಡರ್ ಮಾಡಿದ್ದು ವೆಜ್, ಫುಡ್ ಡೆಲಿವರಿ ಆಗಿದ್ದು ನಾನ್ ವೆಜ್
ಅದು ಅಪರೂಪದ ಕರಡಿ ಎಂದು ಖಚಿತಪಡಿಸಿಕೊಂಡ ನಂತರ ಸ್ಥಳೀಯ ಅರಣ್ಯ ಸಿಬ್ಬಂದಿ ಅದನ್ನು ಹಿಡಿಯಲು ಕಷ್ಟಪಡಬೇಕಾಯಿತು, ಅದಕ್ಕೆ ಮೊದಲು ಇಂಜೆಕ್ಷನ್ ಕೊಟ್ಟು ಮಲಗಿಸಿ ನಂತರ ಯುನ್ನಾನ್ ವನ್ಯಜೀವಿ ರಕ್ಷಣಾ ಕೇಂದ್ರಕ್ಕೆ (Yunnan Wildlife Rescue) ಕೊಂಡೊಯ್ಯಲಾಯಿತು.