
ಪ್ರತಿನಿತ್ಯ ನಮ್ಮ ಮಾತನ್ನು ಕೇಳುತ್ತಾ, ಮನೆಯ ಪಾಲಕನಾಗಿ ಇಡೀ ದಿನ ಕರ್ತವ್ಯಕ್ಕೆ ಬದ್ಧವಾಗಿ ಕೆಲಸ ಮಾಡುವ ಪ್ರಾಣಿ ನಾಯಿ. ನೀಯತ್ತಿಗೆ ಹೆಸರಾಗಿ ಮೋಟು ಬಾಲ ಅಲ್ಲಾಡಿಸುತ್ತಾ, ಬೌ.. ಬೌ ಎನ್ನುವ ಒಂದೇ ಭಾಷೆಯಲ್ಲಿ ಎಲ್ಲವನ್ನೂ ಅರ್ಥೈಸುತ್ತಾ ಮನೆಯ ಕಾವಲಾಗಿ ನಿಲ್ಲುತ್ತದೆ. ನಾವು ಹೇಳಿದಂತೆ ಕೇಳುವ ನಾಯಿ ಮರಿಯು ಯೋಗಾಸನ ಮಾಡುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋ ನೋಡುತ್ತಿದ್ದಂತೆಯೇ ನಿಮಗೂ ಆಶ್ಚರ್ಯವಾಗುತ್ತದೆ.
‘ಈ ನಾಯಿ ನಿಗವಾಗಿಯೂ ಯೋಗ ಮಾಡುತ್ತಿದೆ..’ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ ಬಳಿಕ ಸುಮಾರು 2.6 ಮಿಲಿಯನ್ ವೀಕ್ಷಣೆಗಳು ಬಂದಿವೆ. ವಿಡಿಯೋದಲ್ಲಿ ನೀವು ನೋಡುವಂತೆ ನಾಯಿ ನೆಲದ ಮೇಲೆ ಮ್ಯಾಟ್ ಹಾಸುತ್ತದೆ. ನಂತರ ನೇರವಾಗಿ ಮಲಗಿಕೊಳ್ಳುತ್ತದೆ. ನಿಧಾನವಾಗಿ ಬಲಗಾಲನ್ನು ಮೇಲಕ್ಕೆ ಎತ್ತುತ್ತದೆ, ಪಕ್ಕದಲ್ಲಿರುವ ಯುವತಿಯೋರ್ವಳು ಯೋಗ ಮಾಡಿದಂತೆಯೇ ನಕಲಿಸುತ್ತದೆ. ಹೇಳಿಕೊಟ್ಟಂತೆಯೇ ತಪ್ಪಿಲ್ಲದೇ ಶ್ರದ್ಧೆಯಿಂದ ನಾಯಿ ಯೋಗ ಮಾಡುವುದನ್ನು ನೋಡಿದರೆ ನಿಜವಾಗಿಯೂ ಆಶ್ಚರ್ಯವೆನಿಸುತ್ತದೆ.
ಈ ಹಿಂದೆ ನಾಯಿ ಮರಿಗಳು ಪ್ರಾರ್ಥನೆ ಮಾಡಿ ಆಹಾರ ಸೇವಿಸುವ ವಿಡಿಯೋವೊಂದು ವೈರಲ್ ಆಗಿತ್ತು
ಊಟಕ್ಕೆ ಕುಳಿತಾಗ ಪ್ರಾರ್ಥನೆ ಮಾಡಿ ನಂತರ ಊಟ ಮಾಡುವ ಸಂಪ್ರದಾಯವಿದೆ. ಅದೇ ರೀತಿ ಮನೆಯ ಒಡತಿ ಊಟ ಪ್ರಾರಂಭಿಸುವ ಮೊದಲು ಪ್ರಾರ್ಥನೆ ಮಾಡುತ್ತಾಳೆ. ಆಕೆಯ ಅಕ್ಕ-ಪಕ್ಕದಲ್ಲಿ ಕೂತ ನಾಯಿ ಮರಿಗಳೂ ಕೂಡಾ ಪ್ರಾರ್ಥಿಸಿ ನಂತರ ಊಟ ಸವಿಯುತ್ತವೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ವಿಡಿಯೋವನ್ನು ವೈಶಾಲಿ ಮಾಥುರ್ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದರು. ‘ಹೃದಯ ಪೂರ್ವಕವಾಗಿ ಹಂಚಿಕೊಳ್ಳುತ್ತಿರುವ ವಿಡಿಯೋ ಇದು- ನನ್ನ ಸ್ನೇಹಿತೆ, ತಾನು ಸಾಕಿದ ನಾಯಿ ಮರಿಗಳಿಗೆ ಊಟ ಮಾಡುವ ಮುಂಚೆ ಪ್ರಾರ್ಥನೆ ಹೇಳಿಕೊಡುವ ದೃಶ್ಯ ಹೃದಯ ತಟ್ಟಿದೆ. ಸ್ನೇಹಿತೆ ಅಕ್ಕಪಕ್ಕದಲ್ಲಿ ಕುಳಿತ ಇಬ್ಬರೂ ಒಳ್ಳೆಯ ಹುಡುಗರು’ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋ ಹಂಚಿಕೊಳ್ಳಲಾಗಿತ್ತು.
ಇದನ್ನೂ ಓದಿ: ಪ್ರಾರ್ಥನೆ ಮಾಡಿದ ಬಳಿಕವೇ ಆಹಾರ ಸೇವಿಸುವ ನಾಯಿಮರಿಗಳು; ವಿಡಿಯೋ ವೈರಲ್