
ಉತ್ತರ ಪ್ರದೇಶ, ನ.20: ಎರಡನೇ ಮದುವೆಯಾಗಲು (Second marriage drama) ಮುಂದಾಗಿದ್ದ ಗಂಡನಿಗೆ ಮೊದಲ ಪತ್ನಿ ಸರಿಯಾಗಿ ಗ್ರಹಚಾರ ಬಿಡಿಸಿರುವ ಘಟನೆ ಉತ್ತರಪ್ರದೇಶದ ಬಸ್ತಿಯಲ್ಲಿ ನಡೆದಿದೆ. ಪತಿಯ ಎರಡನೇ ಮದುವೆಗೆ ಮೊದಲನೇ ಪತ್ನಿ ಪೊಲೀಸ್ ಜತೆಗೆ ಮಂಟಪಕ್ಕೆ ಎಂಟ್ರಿ ನೀಡಿದ್ದಾಳೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಬಸ್ತಿ ಜಿಲ್ಲೆಯ ಸುಮಾರು 30 ಕಿಲೋಮೀಟರ್ ದೂರದಲ್ಲಿರುವ ಪೈಕೌಲಿಯಾ ಪೊಲೀಸ್ ಠಾಣೆ ವ್ಯಾಪ್ತಿಯ ಪಿರೈಲಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಈ ಬಗ್ಗೆ ದೈನಿಕ್ ಭಾಸ್ಕರ್‌ನಲ್ಲಿ ವರದಿಯಾಗಿದೆ. ಗಣೇಶಪುರದ ವಾಲ್ಟರ್‌ಗಂಜ್‌ನ ವಿನಯ್ ಅಂಗದ್ ಶರ್ಮಾ ಎಂಬ ವ್ಯಕ್ತಿ ಪಿರೈಲಾದ ಎಂಬ ಊರಿನ ಯುವತಿಯನ್ನು ಮದುವೆಯಾಗಲು ಮುಂದಾಗಿದ್ದಾನೆ.
ಈ ವಿಚಾರ ತಿಳಿದು ಮೊದಲನೇ ಪತ್ನಿ ರೇಷ್ಮಾ ಮದುವೆ ಮಂಟಪಕ್ಕೆ ನುಗ್ಗಿ ಗಂಡನ ಮದುವೆಯನ್ನು ನಿಲ್ಲಿಸಿದ್ದಾಳೆ. ನ.17ರ ಸೋಮವಾರ ರಾತ್ರಿ ಅದ್ಧೂರಿಯಾಗಿ ಮದುವೆ ಮೆರವಣಿಗೆ ಹೊರಟು ಮಂಟಪಕ್ಕೆ ಬಂದಿದೆ. ರಾತ್ರಿ ಸುಮಾರು 11.30ರ ವೇಳೆಗೆ ವಿನಯ್ ನ ಮೊದಲ ಪತ್ನಿ ರೇಷ್ಮಾ ಮಂಟಪಕ್ಕೆ ಪೊಲೀಸರ ಜತೆಗೆ ಬಂದಿದ್ದಾಳೆ. ಈ ವೇಳೆ ಅಲ್ಲಿ ದೊಡ್ಡ ಹೈಡ್ರಾಮ ನಡೆದಿದೆ. ಈ ಬಗ್ಗೆ ಪೊಲೀಸರು ವಿಯನ್ನ್ನು ಪ್ರಶ್ನೆ ಮಾಡಿದ್ದಾರೆ. ಮೊದಲ ಪತ್ನಿ ಜೀವಂತ ಇರುವಾಗಲೇ ಇನ್ನೊಂದು ಮದುವೆ ಯಾಕೆ ಮಾಡಿಕೊಳ್ಳುತ್ತಿರುವೆ ಎಂದು ಕೇಳಿದ್ದಾರೆ. ವಿನಯ್ ಅಂಗದ್ ಶರ್ಮಾ ಮತ್ತು ನಾನು ಮದುವೆಯಾಗಿರಲು ಈ ಫೋಟೋ ಹಾಗೂ ಮದುವೆ ನೋಂದಣಿ ಪ್ರಮಾಣಪತ್ರ ಸಾಕ್ಷಿ ಎಂದು ರೇಷ್ಮಾ ಹೇಳಿದ್ದಾಳೆ.
ಆದರೆ ವಿನಯ್, ನನಗೆ ಈಕೆ ಯಾರೆಂದು ಗೊತ್ತಿಲ್ಲ, ನಾನು ಇವಳನ್ನು ಈ ಮೊದಲು ಎಲ್ಲೂ ನೋಡಿಲ್ಲ. ನನಗೆ ಮದುವೆಯೇ ಆಗಿಲ್ಲ ಎಂದು ಹೇಳಿದ್ದಾನೆ. ಇನ್ನು ಈ ವೈರಲ್ ವಿಡಿಯೋದಲ್ಲಿ ಮದುವೆ ಮಂಟಪದಲ್ಲಾದ ಎಲ್ಲ ಘಟನೆಗಳು ನೋಡಬಹುದು. ವಿನಯ್ ನನ್ನನ್ನು ಮದುವೆಯಾಗಿದ್ದಾನೆ ಎಂದು ರೇಷ್ಮಾ ಫೋಟೋಗಳನ್ನು ತೋರಿಸುವುದನ್ನು ಈ ವಿಡಿಯೋದಲ್ಲಿ ನೋಡಬಹುದು. “ನನ್ನ ಬಳಿ ಕಾನೂನು ಪುರಾವೆ ಇದೆ. ನನ್ನನ್ನು ಮದುವೆಯಾದ ವ್ಯಕ್ತಿ, ಈಗ ಬೇರೆ ಮದುವೆಯಾಗುತ್ತಿದ್ದಾನೆ” ಎಂದು ಎಲ್ಲರ ಮುಂದೆ ರೇಷ್ಮಾ ಹೇಳಿದ್ದಾಳೆ. ರೇಷ್ಮಾ ವಿನಯ್ನ ಮುಖ ನೋಡಿಕೊಂಡು “ನೀನು ಬೇರೆ ಮದುವೆಯಾಗಲು ಹೇಗೆ ಸಾಧ್ಯ, ಯಾವ ಕಾರಣಕ್ಕೆ ಬೇರೆ ಮದುವೆ ಆಗುತ್ತಿದ್ದೀಯಾ? ನಮಗೆ ವಿಚ್ಛೇದನ ಕೂಡ ಆಗಿಲ್ಲ, ಇದಕ್ಕೆ ಉತ್ತರಿಸು” ಎಂದು ಹೇಳಿದ್ದಾಳೆ. ಇನ್ನು ಈ ಗಲಾಟೆಯನ್ನು ನೋಡಿ, ವಿನಯ್ನ್ನು ಮದುವೆಯಾಗಲು ಹೊರಟಿದ್ದ ವಧು ಮಂಟಪದಿಂದ ಎದ್ದು ಕೋಣೆಗೆ ಹೋಗಿದ್ದಾಳೆ. ವಧುವನ್ನು ಮನೆಯವರು ಸಮಾಧಾನ ಮಾಡಿ, ಮದುವೆಯನ್ನು ಮುರಿದಿದ್ದಾರೆ.
ಇದನ್ನೂ ಓದಿ: ವಿದೇಶಿ ಮಹಿಳೆ ಮುಂದೆ ಪ್ಯಾಂಟ್ ಬಿಚ್ಚಿ ಅಸಭ್ಯ ವರ್ತನೆ, ಆಮೇಲೇನಾಯ್ತು?
ವಿನಯ್ ಜೊತೆ ಒಂಬತ್ತು ವರ್ಷಗಳ ಸಂಬಂಧವಿತ್ತು ಎಂದು ರೇಷ್ಮಾ ಹೇಳಿರುವುದಾಗಿ ದೈನಿಕ್ ಭಾಸ್ಕರ್ ವರದಿ ಮಾಡಿದೆ. ಇಬ್ಬರು ಕೂಡ ಕಾಲೇಜಿನಿಂದ ಪರಿಚಯವಾಗಿದ್ದು, ಮಾರ್ಚ್ 30, 2022 ರಂದು ನ್ಯಾಯಾಲಯದಲ್ಲಿ ವಿವಾಹವಾಗಿ, ಡಿಸೆಂಬರ್ 8, 2022 ರಂದು ಕುಟುಂಬ ಸದಸ್ಯರ ಮುಂದೆ ಅದ್ಧೂರಿಯಾಗಿ ವಿವಾಹ ಮಾಡಿಕೊಂಡಿದ್ದಾರೆ. ಇನ್ನು ಇಬ್ಬರು ಕೋರ್ಟ್ ಮುಂದೆ ವಿಚ್ಛೇದನಕ್ಕೆ ಅರ್ಜಿ ಹಾಕಿದ್ದಾರೆ. ರೇಷ್ಮಾ ಆಭರಣಗಳೊಂದಿಗೆ ಓಡಿಹೋಗಿರುವುದಾಗಿ ಆರೋಪಿಸಿ ಕಾನೂನು ನೋಟಿಸ್ ವಿನಯ್ ಕಳಿಸಿದ್ದಾನೆ. ವಿಚ್ಛೇದನದ ಅರ್ಜಿ ವಿಚಾರಣೆ ನಡೆಯುತ್ತಿದ್ದು, ಈ ವೇಳೆ ಎರಡನೇ ಮದುವೆಯಾಗಲು ವಿನಯ್ ಹೊರಟಿದ್ದಾನೆ. ಇದೀಗ ಪೊಲೀಸರು ಮಧ್ಯಪ್ರವೇಶಿಸಿ ಪ್ರಕರಣದ ವಿಚಾರಣೆಯನ್ನು ನಡೆಸುತ್ತಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ