ಈ ವಿಡಿಯೋನಲ್ಲಿ ಶಂಕಿತರ (suspects) ಕಾರೊಂದನ್ನು ಪೊಲೀಸರು ಹಿಂಬಾಲಿಸುತ್ತಿದ್ದಾರೆ. ಶಂಕಿತರು ಶರವೇಗದಲ್ಲಿ ಕಾರನ್ನು ಓಡಿಸುತ್ತಿದ್ದರೆ ಪೊಲೀಸರು ಕೂಡ ಅಷ್ಟೇ ವೇಗದಲ್ಲಿ ಅದನ್ನು ಚೇಸ್ (chase) ಮಾಡುತ್ತಿದ್ದಾರೆ. ಚೇಸ್ ಹೀಗೆ ಕೊನೆಗೊಳ್ಳುತ್ತದೆ; ಶಂಕಿತರ ಕಾರು ಎದುರಿನಿಂದ ಬರುತ್ತಿದ್ದ ಕಾರೊಂದಕ್ಕೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸುವ ಪ್ರಯತ್ನದಲ್ಲಿ ತಲೆಕೆಳಗಾಗಿ (turtle) ಬಿದ್ದು 6-7 ಪಲ್ಟಿಗಳನ್ನು ಹೊಡೆದು ತಟಸ್ಥ ಸ್ಥಿತಿಗೆ ಬರುತ್ತದೆ. ವೇಗವಾಗಿ ಬರುವ ಪೊಲೀಸರ ಕಾರುಗಳು ಉರುಳಿಬಿದ್ದ ಕಾರಿನ ಸುತ್ತುವರಿದು ಬಿಡುತ್ತವೆ. ಕಾರಲ್ಲಿದ್ದ ಶಂಕಿತರ ಸ್ಥಿತಿ ಏನಾಗಿರಬಹುದು ಅಂದುಕೊಳ್ಳುತ್ತಿದ್ದೀರಾ? ಅವರಿಗೇನೂ ಆಗಿಲ್ಲ ಮಾರಾಯ್ರೇ. ನೀವೇ ನೋಡಿ, ಕಾರಿಂದ ಹೊರಬಂದು ಓಡುವ ಪ್ರಯತ್ನ ಮಾಡುತ್ತಾರೆ. ಅಪಘಾತ ನಡೆದ ಸ್ಥಳದಲ್ಲಿರುವ ಮನೆಯ ಮುಂದೆ ಅಳವಡಿಸಿರುವ ಸಿಸಿಟಿವಿ ಕೆಮೆರಾನಲ್ಲಿ ಈ ಭಯಾನಕ ದೃಶ್ಯ ಸೆರೆಯಾಗಿದೆ.
ಒಂದು ಮನೆಯ ಮಾಲೀಕ ಸದರಿ ವಿಡಿಯೋವನ್ನು ರೆಡ್ಡಿಟ್ ಸೋಶಿಯಲ್ ಮಿಡಿಯಾನಲ್ಲಿ ಪೋಸ್ಟ್ ಮಾಡಿದಾಕ್ಷಣ ಅದು ವೈರಲ್ ಆಗಿದೆ ಮತ್ತು ಕೆಲವೇ ನಿಮಿಷಗಳಲ್ಲಿ 67,000 ಸಾವಿರ ಜನ ಅದನ್ನು ನೋಡಿದ್ದಾರೆ.
36-ಸೆಕೆಂಡುಗಳ ಈ ವಿಡಿಯೋ, ಕೆಮೆರಾ ಫ್ರೇಮಿನ ಅಂಚಿನಲ್ಲಿ ಕಪ್ಪು ಬಣ್ಣದ ಕಾರೊಂದು ವೇಗವಾಗಿ ಕೆಮೆರಾ ಇರುವ ಮನೆಯತ್ತ ಧಾವಿಸುತ್ತಿರುವುದು ಕಾಣುವುದರೊಂದಿಗೆ ಅರಂಭವಾಗುತ್ತದೆ. ಎದರುಗಡೆಯಿಂದ ಬರುತ್ತಿರುವ ಕಾರಿಗೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸುವ ಪ್ರಯತ್ನದಲ್ಲಿ ಕಪ್ಪು ಕಾರಿನ ಚಾಲಕ ನಿಯಂತ್ರಣ ಕಳೆದುಕೊಳ್ಳುತ್ತಾನೆ. ಆಗ ಈ ಸೆಡಾನ್ ಪಕ್ಕಕ್ಕೆ ವಾಲಿ ತಲೆ ಕೆಳಗಾಗಿ ಜಾರುತ್ತಾ ಬಂದು ಸರಿಯಾಗಿ ಈ ಕೆಮೆರಾ ಆಳವಡಿಸಿರುವ ಮನೆಮುಂದೆ ನಿಲ್ಲುತ್ತದೆ.
ಆಘಾತಕ್ಕೊಳಗಾಗುವ ಮನೆ ಮಾಲೀಕ ಕಾರಲ್ಲಿದ್ದವರಿಗೆ ನೆರವಾಗಲು ಮನೆಯಿಂದ ಹೊರಗೋಡಿ ಬರುತ್ತಾನೆ. ಅದರೆ ಪೊಲೀಸರ ಕಾರುಗಳನ್ನು ಕಂಡಾಕ್ಷಣ ಮನೆಯೊಳಗೆ ವಾಪಸ್ಸು ಓಡುತ್ತಾನೆ.
ನೆಲಕ್ಕುರುಳಿದ ಕಾರಿನಿಂದ ಇಬ್ಬರು ನುಜ್ಜುಗುಜ್ಜಾಗಿರುವ ವಿಡ್ ಶೀಲ್ಡ್ ತಳ್ಳಿ ಹೊರಬಂದು ಓಡಲು ಪ್ರಯತ್ನಿಸುತ್ತಾರೆ. ವಿಡಿಯೋನಲ್ಲಿ ಸೆರೆಯಾಗಿರುವ ಹಾಗೆ ಪೊಲೀಸರು ಕೂಡಲೇ ಒಬ್ಬನನ್ನು ಹಿಡಿಯುವುದು ಮತ್ತೊಬ್ಬನನ್ನು ಚೇಸ್ ಮಾಡುವುದು ಕಾಣಿಸುತ್ತದೆ. ಬೇರೆ ಪೊಲೀಸ್ ವಾಹನಗಳು ಕೂಡ ಅಲ್ಲಿಗೆ ಬರುತ್ತವೆ. ಶಂಕಿತರನ್ನು ಹಿಡಿಯಲು ಒಬ್ಬ ಪೊಲೀಸ್ ನಾಯಿಯನ್ನು ಎಳೆದುಕೊಂಡು ಬರುತ್ತಿರುವುದು ಸಹ ಕಾಣಿಸುತ್ತ್ತದೆ.
ವಿಡಿಯೊ ನೋಡಿದ ರೆಡ್ಡಿಟ್ ಬಳಕೆದಾರರು ಅಘಾತಕ್ಕೊಳಗಾಗಿ ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ.
‘ಈ ವಿಡಿಯೋ ಆಘಾತಕಾರಿಯಾಗಿದೆ, ಶಂಕಿತರು ವಿಂಡ್ ಶೀಲ್ಡ್ ಒಡೆದು ಹೊರ ಬರೋದು, ಪೊಲೀಸ್ ಕಾರ್ಯಪ್ರವೃತ್ತಗೊಳ್ಳಲು ಇಷ್ಟಪಡದ ನಾಯಿಯನ್ನು ಎಳೆದು ತರುವುದು ಸೋಜಿಗವೆನಿಸುತ್ತದೆ’ ಅಂತ ಒಬ್ಬ ಬಳಕೆದಾರ ಬರೆದುಕೊಂಡಿದ್ದಾನೆ.
‘ಈ ವಿಡಿಯೋನಲ್ಲಿರುವ ವಿವರಗಳನ್ನು ಗ್ರಹಿಸಲು ನಾನು 5 ಬಾರಿ ಅದನ್ನು ನೋಡಿದೆ,’ ಅಂತ ಇನ್ನೊಬ್ಬ ಬರೆದಿದ್ದಾನೆ.
ವಿಡಿಯೊವನ್ನು ಪೋಸ್ಟ್ ಮಾಡಿದ ವ್ಯಕ್ತಿ ತನ್ನ ಭಾಗದ ಕಥೆಯನ್ನು ಸಹ ವಿವರಿಸಿದ್ದಾನೆ. ‘ನಾನು ಕೆಲಸದಿಂದ ಮನೆಗೆ ಬಂದಿದ್ದೆ. ಬಾಗಿಲನ್ನು ತೆಗೆದು ಒಳಹೋಗುವಾಗ ಅಪಘಾತದ ಆರಂಭಿಕ ಸದ್ದು ಕೇಳಿ ಸಹಾಯ ಮಾಡುವ ಉದ್ದೇಶದಿಂದ ಓಡಿದೆ. ಪೊಲೀಸರು ತಮ್ಮ ಪಿಸ್ಟಲ್ಗಳ ಜೊತೆ ಕಾರುಗಳಿಂದ ಹೊರಗೆ ಧಾವಿಸುತ್ತಿರುವುದು ಕಂಡು ಮನೆಯೊಳಗೆ ವಾಪಸ್ಸು ಹೋದೆ! ನಾನು ಅಂದುಕೊಳ್ಳುವಂತೆ ಪೊಲೀಸರು ಟ್ರಂಕ್‌ನಲ್ಲಿ ಹ್ಯಾಂಡ್ ಗನ್ ಮತ್ತು ರೈಫಲ್ ಬಹುಶಃ ಇನ್ನೂ ಕೆಲವು ಗನ್‌ಗಳನ್ನು ಇಟ್ಟುಕೊಂಡಿದ್ದರು’ ಅಂತ ಹೇಳಿದ್ದಾನೆ
ಅಂದಹಾಗೆ ಇದು ನಡೆದಿದ್ದೆಲ್ಲಿ, ಯಾವ ದೇಶ, ಯಾವ ಊರು ಅನ್ನೋದು ಮಾತ್ರ ಗೊತ್ತಾಗಿಲ್ಲ ಮಾರಾಯ್ರೇ.
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.