
ಉದ್ಯೋಗ (job)ಎಲ್ಲರಿಗೂ ಅತ್ಯವಶ್ಯಕ. ಆದರೆ ಈಗಿನ ಸ್ಪರ್ಧಾತ್ಮಕ ಯುಗದಲ್ಲಿ ಎಷ್ಟೇ ಓದಿಕೊಂಡಿದ್ದರೂ ಉದ್ಯೋಗ ಸಿಗುವುದೇ ಕಷ್ಟ. ಹೀಗಾಗಿ ಎಷ್ಟೋ ಯುವಕರು ಓದಿದ್ದೆ ಬೇರೆ ಈಗ ಮಾಡುತ್ತಿರುವ ಕೆಲಸವೇ ಬೇರೆಯಾಗಿರುತ್ತವೆ. ಆದರೆ ಈ ಯುವಕನ ಕಥೆ ಬೇರೆಯದ್ದೇ ಇದೆ. ಇಂಜಿನಿಯರ್ ಪದವಿ ಪಡೆದು ತಿಂಗಳಿಗೆ 40,000 ರೂ ಸಂಬಳದ ಉದ್ಯೋಗವಿದ್ರೂ ಆಯ್ಕೆ ಮಾಡಿಕೊಂಡದ್ದು ರ‍್ಯಾಪಿಡೋ ಬೈಕ್ ಟ್ಯಾಕ್ಸಿ ಚಾಲಕ ವೃತ್ತಿ. ಜಾರ್ಖಂಡ್‌ನ ಯುವಕನೊಬ್ಬ ತನ್ನ ವೃತ್ತಿಯನ್ನೇ ಬದಲಿಸಿಕೊಂಡದ್ದಕ್ಕೆ ಮೂಲ ಕಾರಣವೇ ಈ ಆದಾಯ. ಹೌದು, ಮಹಿಳೆಯೊಬ್ಬರು ಈ ಚಾಲಕನ ಕಥೆಯನ್ನು ಹಂಚಿಕೊಂಡಿದ್ದು, ಸದ್ಯ ಇಂಟರ್ನೆಟ್ ನಲ್ಲಿ ಸದ್ದು ಮಾಡುತ್ತಿದೆ.
ನಿಂದ್ ಕೀ ರಾಣಿ (Neend_Ki_Rani) ಹೆಸರಿನ ಎಕ್ಸ್ ಖಾತೆಯಲ್ಲಿ ಮಹಿಳೆ ರಾಪಿಡೋ ಚಾಲಕನ ಜತೆಗೆ ನಡೆಸಿದ ಮಾತುಕತೆ ಬಗ್ಗೆ ವಿವರಿಸಿದ್ದಾಳೆ. ಈ ಮಹಿಳೆ 198 ರೂ ನೀಡಿ ರ‍್ಯಾಪಿಡೋ ಬೈಕ್ ರೈಡ್ ಅನ್ನು ಬುಕ್ ಮಾಡಿದ್ದಾರೆ. ರ‍್ಯಾಪಿಡೋ ಚಾಲಕನಿಗೆ ಒಟಿಪಿ ಹೇಳಿ ಈ ಪ್ರಯಾಣದ ವೇಳೆ ಮಹಿಳೆ ಚಾಲಕನ ಜತೆ ಮಾತಿಗಿಳಿದ್ದಾರೆ. ಇದೇ ವೇಳೆ ಮಹಿಳೆಗೆ ಈ ಯುವಕನು ಹಿಂದೆ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಎನ್ನುವ ಸಂಗತಿ ತಿಳಿದಿದೆ.
ಮಾತುಕತೆ ಮುಂದುವರೆಯುತ್ತಿದ್ದಂತೆ ಚಾಲಕನು ಈ ಮಹಿಳೆಯ ಬಳಿ ದಿನದ ಆದಾಯ 4,000 ರೂ ಬರುವುದಾಗಿ ತಿಳಿಸಿದ್ದಾನೆ. ಇದೇ ವೇಳೆ ತಿಂಗಳ ಆದಾಯದ ಬಗ್ಗೆ ಪ್ರಶ್ನೆ ಮಾಡಿದಾಗ 1 ಲಕ್ಷದಿಂದ 1.2 ಲಕ್ಷ ರೂ ಎಂದು ಕೇಳಿ ಮಹಿಳೆಗೆ ಶಾಕ್ ಆಗಿದೆ. ತನ್ನ ವೃತ್ತಿ ಬದಲಾಯಿಸಲು ಮುಖ್ಯ ಕಾರಣವೇ ಖರ್ಚು ವೆಚ್ಚಗಳಿಗೆ, ಕುಟುಂಬದ ನಿರ್ವಹಣೆಗೆ ಸಾಕಾಗದ ಆದಾಯ. ಆದರೆ ಇದೀಗ ತನ್ನ ಊರಿನಲ್ಲೇ ಉಳಿದು ಕುಟುಂಬದ ಅಗತ್ಯತೆಗಳನ್ನು ಪೂರೈಸುತ್ತಾ ಈ ಕೆಲಸ ಮಾಡೋದ್ರಲ್ಲಿ ತೃಪ್ತಿಯಿದೆ ಎನ್ನುವುದನ್ನು ಮಹಿಳೆಯ ಬಳಿ ಚಾಲಕ ತಿಳಿಸಿದ್ದಾನೆ.
ಇದನ್ನೂ ಓದಿ: ವಿದೇಶಿ ಜೀವನಕ್ಕೆ ಗುಡ್ ಬೈ, ಮಗುವಿನ ಚಿಕಿತ್ಸೆಗಾಗಿ ರಾಪಿಡೋ ಚಾಲಕನಾದ ತಂದೆ
ಈ ಪೋಸ್ಟ್ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ, ಕೆಲಸ ಯಾವುದಾದರೇನು ಪ್ರಾಮಾಣಿಕವಾಗಿ ದುಡಿಯೋದು ಮುಖ್ಯ ಎಂದಿದ್ದಾರೆ. ಇನ್ನೊಬ್ಬರು, ಈ ಚಾಲಕನ ಸಂಪಾದನೆ ನೋಡಿದ್ರೆ ಬೆಳಗ್ಗೆ 5 ಗಂಟೆಯಿಂದ ರಾತ್ರಿ 11 ಗಂಟೆಯವರೆಗೆ ದುಡೀತಾನೆ ಎಂದು ಕಾಣಿಸುತ್ತದೆ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರ, ದಿನಕ್ಕೆ 4,000 ರೂ ಸಂಪಾದಿಸಲು ಸಾಧ್ಯವಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ