Viral Video : ಪುಟ್ಟಮಕ್ಕಳಿರುವಾಗ ನೀವೆಲ್ಲಾ ಸೀಟಿ ಹೊಡೆಯಲು ಅದೆಷ್ಟು ಥರದಲ್ಲಿ ಪ್ರಯತ್ನಿಸುತ್ತಿದ್ದಿರಿ ಅಲ್ಲವೆ? ಬೆರಳುಗಳನ್ನು ತುಟಿಗಳ ಮಧ್ಯೆ ಇಟ್ಟುಕೊಂಡೋ ಅಥವಾ ವಿವಿಧ ರೀತಿಯ ಎಲೆಗಳನ್ನು ಸುರುಳಿಸುತ್ತಿ ತುಟಿಗಳ ಮಧ್ಯೆ ಇಟ್ಟುಕೊಂಡೋ ಇತ್ಯಾದಿಯಾಗಿ. ಇನ್ನು ಅಪರೂಪಕ್ಕೆ ಜಾತ್ರೆಯಿಂದಲೋ, ಸಂತೆಯಿಂದಲೋ ಸೀಟಿ ಖರೀದಿಸಿದರಂತೂ ಮನೆಯಲ್ಲಿರುವವರ ಕಿವಿ ತೂತು ಬೀಳುವವರೆಗೂ, ನಿಮ್ಮ ಗಂಟಲು ನೋಯುವವರೆಗೂ ಊದೇ ಊದುತ್ತಿದ್ದಿರಿ. ಆದರೆ ಇಲ್ಲೊಂದು ಮಗುವಿಗೆ ಅದರ ಅಜ್ಜಿ ತುಟಿಯ ಮಧ್ಯೆ ಸೀಟಿ ಇಟ್ಟರೂ ಊದುವಲ್ಲಿ ವಿಫಲವಾಗುತ್ತಿದೆ. ಬದಲಾಗಿ ಗಂಟಲಿನಿಂದ ಸೀಟಿಯ ಧ್ವನಿಯನ್ನು ಅನುಕರಿಸುತ್ತಿದೆ. ಹೊಸ ಕಲಿಕೆ ಆರಂಭದಲ್ಲಿ ಹೀಗೇ ಅಲ್ಲವೆ? ಈ ಮುದ್ದಾದ ವಿಡಿಯೋ ನೆಟ್ಟಿಗರನ್ನು ಹಿಡಿದಿಟ್ಟಿದೆ.
ಗುಡ್ನ್ಯೂಸ್ ಮೂವ್ಮೆಂಟ್ ಇನ್ಸ್ಟಾಗ್ರಾಮ್ ಪುಟದಲ್ಲಿ ಈ ವಿಡಿಯೋ ನೋಡಬಹುದಾಗಿದೆ. ಪ್ರತೀಬಾರಿಯೂ ಸೀಟಿ ಊದುತ್ತಿದ್ದೇನೆ. ಆದರೆ ಈ ಅಜ್ಜಿ ಇಲ್ಲ ಇಲ್ಲ ಎಂದು ನಗುತ್ತಿರುವುದು ಏಕೆ? ಎಂದು ಗೊಂದಲಕ್ಕೆ ಬೀಳುತ್ತಿದೆ ಮಗು. ಆದರೂ ಪ್ರಯತ್ನಿಸುವುದನ್ನು ಬಿಡುತ್ತಿಲ್ಲ. ಪ್ರತೀಬಾರಿಯೂ ಅಷ್ಟೇ ಮುಗ್ಧತೆಯಿಂದ ಸೀಟಿಯ ಶಬ್ದವನ್ನು ಗಂಟಲಿನಿಂದ ಹೊರಡಿಸುತ್ತಿದೆ. ಈ ವಿಡಿಯೋ ಅನ್ನು ಸುಮಾರು 10 ಲಕ್ಷ ಜನ ವೀಕ್ಷಿಸಿದ್ದಾರೆ. 45,000ಕ್ಕಿಂತಲೂ ಹೆಚ್ಚು ಜನ ಇಷ್ಟಪಟ್ಟಿದ್ದಾರೆ. ನೆಟ್ಟಿಗರಿಗಂತೂ ಈ ಮಗುವಿನ ಮೇಲೆ ಮುದ್ದು ಉಕ್ಕಿ, ಶಭಾಷ್ ಮಗು, ನೀ ಮಾಡುತ್ತಿರುವುದೇ ಸರಿ ಎಂದು ಅಚ್ಛೆ ಮಾಡಿದ್ದಾರೆ.
‘ನಾನಂತೂ ಉರುಳಾಡಿ ನಗುತ್ತಿದ್ದೇನೆ, ಮಕ್ಕಳ ಮುಗ್ಧತೆಗೆ ಅವರೇ ಸಾಟಿ’ ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ. ‘ಈ ಮಗು ಮಾಡುತ್ತಿರುವುದೇ ಸರಿ. ಉಳಿದವರು ಸೀಟಿ ಊದುವ ಕ್ರಮವೇ ತಪ್ಪಿರಬಹುದು’ ಎಂದು ಮಗುವಿಗೆ ಬೆಂಬಲಿಸಿದ್ದಾರೆ ಇನ್ನೊಬ್ಬರು. ‘ಈ ಮಗು ಮಾಡುತ್ತಿರುವುದು ಪರ್ಫೆಕ್ಟ್ ಎಂದೇ ಭಾವಿಸುತ್ತೇನೆ’ ಎಂದಿದ್ದಾರೆ ಮತ್ತೊಬ್ಬರು.
ನೆನಪಿಸಿಕೊಳ್ಳಿ ನಿಮ್ಮ ಬಾಲ್ಯವನ್ನು ಒಮ್ಮೆ. ಈ ಮಗುವಿನಂತೆ ನೀವಿದ್ದಲ್ಲೇ ಒಮ್ಮೆ ಸೀಟಿಯ ಧ್ವನಿ ಹೊಮ್ಮಿಸಿ ನೋಡಿ. ನೆನಪಿರಲಿ, ನಂತರದ ಪರಿಣಾಮಗಳಿಗೆ ನೀವೇ ಜವಾಬ್ದಾರರು!
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 12:02 pm, Fri, 30 September 22