
Leopard : ಬಹಳ ಆಘಾತಕಾರಿ ವಿಡಿಯೋ ಇದು. ಈ ವ್ಯಕ್ತಿ ಈ ಚಿರತೆಯ ಬಾಲ ಹಿಡಿದೆಳೆಯುತ್ತಲೇ ಇದ್ದಾನೆ. ಇದನ್ನು ಅವನ ಸುತ್ತಮುತ್ತಲಿನವರು ವಿಡಿಯೋ ಮಾಡುವುದರಲ್ಲಿ ನಿರತರಾಗಿದ್ದಾರೆ. ಐಎಫ್ಎಸ್ ಅಧಿಕಾರಿ ಪರ್ವೀನ್ ಕಸ್ವಾನ್ ಟ್ವಿಟರ್ನಲ್ಲಿ ಹಂಚಿಕೊಂಡ 20 ಸೆಕೆಂಡುಗಳ ಈ ವಿಡಿಯೋ ಹಿಂಸಾತ್ಮಕವಾಗಿದೆ. ಚಿರತೆಯ ಹಿಂಗಾಲುಗಳನ್ನು ಮತ್ತು ಬಾಲವನ್ನು ಹಿಡಿದು ಎಳೆಯುತ್ತಿರುವ ಈ ದೃಶ್ಯವನ್ನು ಅರಗಿಸಿಕೊಳ್ಳುವುದು ಕಷ್ಟವೇ. ಕೊನೆಗೆ ಈ ಚಿರತೆ ಸಾವನ್ನಪ್ಪಿದೆ ಎಂದು ವಿಡಿಯೋದ ಮೇಲಿರುವ ಒಕ್ಕಣೆ ಹೇಳುತ್ತದೆ. ಈ ಕೃತ್ಯವನ್ನು ಕಸ್ವಾನ್ ಖಂಡಿಸಿದ್ದು, ‘ವನ್ಯಜೀವಿಗಳನ್ನು ನಿಭಾಯಿಸುವ ರೀತಿ ಇದಲ್ಲ. ಯಾವತ್ತೂ ಇವುಗಳನ್ನು ಹೀಗೆ ನಡೆಸಿಕೊಳ್ಳಬಾರದು. ಅವೂ ನಮ್ಮಂತೆ ಜೀವಿಗಳು. ಈ ವಿಡಿಯೋ ಚಿತ್ರೀಕರಿಸಿದ ಸ್ಥಳವನ್ನು ಕಂಡು ಹಿಡಿಯಲಾಗಿಲ್ಲ’ ಎಂದು ತಮ್ಮ ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ.
ಈ ವ್ಯಕ್ತಿಯ ವರ್ತನೆಯನ್ನು ಕಂಡು ನೆಟ್ಟಿಗರು ದಿಗ್ಭ್ರಮೆಗೆ ಒಳಗಾಗಿದ್ದಾರೆ. ‘ಪ್ರಾಣಿಗಳು ಟೀ ಶರ್ಟ್ ತೊಡಲು ಆರಂಭಿಸಿವೆ’ ಎಂದು ಬಾಲ ಹಿಡಿದೆಳೆಯುತ್ತಿರುವ ವ್ಯಕ್ತಿಯ ಬಗ್ಗೆ ಪ್ರತಿಕ್ರಿಯೆಯ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ ಒಬ್ಬರು. ಇನ್ನೊಬ್ಬರು, ‘ಬಹುಶಃ ಚಿರತೆಗೆ ವಯಸ್ಸಾಗಿದೆ ಅಥವಾ ಗಾಯಗೊಂಡಿದೆ ಎನ್ನಿಸುತ್ತದೆ’ ಎಂದಿದ್ದಾರೆ. ಇನ್ನೂ ಹಲವರು, ‘ಪ್ರಾಣಿಗಳೊಂದಿಗೆ ಹೀಗೆಲ್ಲ ವರ್ತಿಸಬಾರದು’ ಎಂದು ವಿನಂತಿಸಿಕೊಂಡಿದ್ದಾರೆ. ಹಾಗೆಯೇ ಮತ್ತೂ ಕೆಲವರು, ‘ಈ ವಿಡಿಯೋದಲ್ಲಿರುವ ವ್ಯಕ್ತಿಗೆ ಶಿಕ್ಷೆಯಾಗಬೇಕು’ ಎಂದಿದ್ದಾರೆ.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 3:42 pm, Thu, 18 August 22