Dance: ನಿಮ್ಮ ಗಾತ್ರವು ನಿಮ್ಮನ್ನು ವ್ಯಾಖ್ಯಾನಿಸುವುದಿಲ್ಲ ಎನ್ನುತ್ತಾರೆ ಇನ್ಸ್ಟಾಗ್ರಾಂನ ಈ ಕಲಾವಿದೆ ದಿವ್ಯಾ ವಿಕ್ರಮ್. ಇದೀಗ ವೈರಲ್ ಆಗಿರುವ ಇವರ ಈ ವಿಡಿಯೋ ಮಿಲಿಯನ್ಗಟ್ಟಲೇ ಜನರಿಂದ ವೀಕ್ಷಿಸಲ್ಪಟ್ಟಿದೆ. ಲಕ್ಷಾಂತರ ಜನರು ಮೆಚ್ಚಿದ್ದಾರೆ. ಸಾವಿರಾರು ಜನರು ಇವರ ಆತ್ಮವಿಶ್ವಾಸ ಮಾತ್ರ ಶ್ಲಾಘನೀಯ ಎಂದು ಕೊಂಡಾಡಿದ್ದಾರೆ. ಸಾರ್ವಜನಿಕ ನೃತ್ಯ ಕಾರ್ಯಕ್ರಮಗಳನ್ನೂ ಕೊಡುವ ಈಕೆ 2 ಲಕ್ಷಕ್ಕಿಂತಲೂ ಹೆಚ್ಚು ಫಾಲೋವರ್ಗಳನ್ನು ಹೊಂದಿದ್ದಾರೆ.
ತೂಕ ಎನ್ನುವುದು ಎಂದಿಗೂ ಗಂಭೀರವಾದ ವಿಷಯವೇ ಅಲ್ಲ ಎನ್ನಿಸುತ್ತಿದೆ ನಿಮ್ಮ ನೃತ್ಯವನ್ನು ನೋಡುತ್ತಿದ್ದರೆ ಎಂದಿದ್ದಾರೆ ಅನೇಕರು. ತೂಕ ಮತ್ತು ಸೌಂದರ್ಯ ಮುಖ್ಯವಲ್ಲ. ಛಂದನೆಯ ಹೃದಯ ಮುಖ್ಯ ಎಂದು ಒಬ್ಬರು ಹೇಳಿದ್ಧಾರೆ. ನಿಮ್ಮ ಆಸಕ್ತಿ, ಆತ್ಮವಿಶ್ವಾಸ, ಶಕ್ತಿ ನಿಜಕ್ಕೂ ಸ್ತುತ್ಯಾರ್ಹ, ತೂಕವಂತರಿಗೆ ನೀವು ನಿಜಕ್ಕೂ ಮಾದರಿ ಎಂದು ಮತ್ತೊಬ್ಬರು ಹೇಳಿದ್ದಾರೆ.
ಆಕಾರ ಗಾತ್ರ ಮುಖ್ಯವಲ್ಲ, ಪ್ರತಿಭೆ ಮುಖ್ಯ. ಅದಕ್ಕೆ ತಕ್ಕಂಥ ಧೈರ್ಯ ನಿಮಗಿದೆ ಒಳ್ಳೆಯದಾಗಲಿ ಎಂದಿದ್ದಾರೆ ಅನೇಕರು. ಆದರೆ ಕೆಲವರು ಕೆಟ್ಟ ಅಭಿರುಚಿಯಿಂದ ಪ್ರತಿಕ್ರಿಯಿಸಿದ್ದಾರೆ. ತಮ್ಮ ಸ್ನೇಹಿತರನ್ನು ಟ್ಯಾಗ್ ಮಾಡಿ, ನಿನಗೆ ಈಕೆ ಒಳ್ಳೆಯ ಜೋಡಿ ಎಂದಿದ್ದಾರೆ. ಇನ್ನೂ ಕೆಲವರು, ಮುಂಬರುವ ದಿನಗಳಲ್ಲಿ ನನ್ನ ಅಣ್ಣನ ಹೆಂಡತಿಯಾಗಲಿದ್ಧಾರೆ ಎಂದಿದ್ದಾರೆ. ಮಚ್ಚಾ ನಿನ್ನ ಡವ್ ಎಂದೊಬ್ಬರು ಯಾರನ್ನೋ ಟ್ಯಾಗ್ ಮಾಡಿದ್ದಾರೆ.
ಆಕೆ ದಪ್ಪಗಿರುವುದು ಅವಳ ಸಮಸ್ಯೆ ಅಲ್ಲ. ದಯವಿಟ್ಟು ಆಕೆಯನ್ನು ಮತ್ತು ಅವಳ ಉತ್ಸಾಹವನ್ನು ಪ್ರೋತ್ಸಾಹಿಸಿ ಎಂದು ಕೆಲವರು ಮನವಿ ಮಾಡಿಕೊಂಡಿದ್ಧಾರೆ. ಮೇಡಮ್, ಅನೇಕರು ಸ್ಥೂಲಕಾಯದಿಂದ ಬಳಲುತ್ತ ಖಿನ್ನತೆಗೆ ಜಾರಿದವರಿದ್ದಾರೆ. ಅಂಥವರ ಮಧ್ಯೆ ನೀವು ನನಗೆ ವಿಶೇಷವಾಗಿ ಕಾಣಿಸುತ್ತಿದ್ದೀರಿ ಎಂದಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಅನೇಕರಿಗೆ ಅನೇಕ ವಿಷಯಗಳಲ್ಲಿ ತಮ್ಮ ಅಸ್ತಿತ್ವ ಕಂಡುಕೊಳ್ಳಲು ಅವಕಾಶವಿದೆ. ಎಲ್ಲರ ಆತ್ಮವಿಶ್ವಾಸ, ಅಭಿವ್ಯಕ್ತಿ, ಅಭಿರುಚಿಗೆ ತಕ್ಕಂಥ ವೇದಿಕೆ ಇದಾಗಿದೆ. ಹುಟ್ಟಿದ ಮೇಲೆ ಬದುಕನ್ನು ಛಂದಗೊಳಿಸಿಕೊಳ್ಳುವುದು ಮುಖ್ಯ. ಅದಕ್ಕಾಗಿ ಹಿಂಜರಿಕೆಯನ್ನು ಹಿಂದೆಯೇ ಬಿಡಬೇಕು. ಹೀಗಳೆಯುವವರನ್ನು ಕಡೆಗಣಿಸಬೇಕು. ಅವರಿಗೆ ದೇವರು ಬಹಳ ಒಳ್ಳೆಯದನ್ನೇ ಮಾಡಲಿ!
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 11:29 am, Mon, 22 May 23