ಗಗನಕ್ಕೇರಿದ ತರಕಾರಿ ಬೆಲೆ; ವ್ಯಾಪಾರಿಯೊಬ್ಬರಿಗೆ ಸೇರಿದ 60 ಕೆಜಿ ಲಿಂಬು ಕದ್ದೊಯ್ದ ಕಳ್ಳರು

ಲಿಂಬು ಹಣ್ಣಿಗೆ ಮಾರುಕಟ್ಟೆಯಲ್ಲಿ ಸದ್ಯ ಕೆಜಿಗೆ 200 ರೂಪಾಯಿ ಇದೆ. ಇದೀಗ ಒಟ್ಟಾರೆ ಕದ್ದುಕೊಂಡು ಹೋಗಿರುವ ಲಿಂಬು ಬೆಲೆ ಸುಮಾರು 10 ಸಾವಿರ ರೂಪಾಯಿ ಎಂದು ತರಕಾರಿ ವ್ಯಾಪಾರಿ ತಿಳಿಸಿದ್ದಾರೆ.

ಗಗನಕ್ಕೇರಿದ ತರಕಾರಿ ಬೆಲೆ; ವ್ಯಾಪಾರಿಯೊಬ್ಬರಿಗೆ ಸೇರಿದ 60 ಕೆಜಿ ಲಿಂಬು ಕದ್ದೊಯ್ದ ಕಳ್ಳರು
ಸಾಂಕೇತಿಕ ಚಿತ್ರ
Edited By:

Updated on: Apr 12, 2022 | 8:40 PM

ತರಕಾರಿ ಬೆಲೆ ಗಗನಕ್ಕೇರುತ್ತಿರುವ ಬೆನ್ನಲ್ಲೇ ಕಳವಿನ ಪ್ರಕರಣಗಳೂ ಹೆಚ್ಚುತ್ತಿವೆ. ಉತ್ತರ ಪ್ರದೇಶದ ಶಹಜಾನ್​ಪುರದಲ್ಲಿ ತರಕಾರಿ ವ್ಯಾಪಾರಿಯೊಬ್ಬರ ಬಳಿಯಿದ್ದ ಬರೋಬ್ಬರಿ 60 ಕೆಜಿ ಲಿಂಬು ಹಣ್ಣನ್ನು ಕಳ್ಳರು ಕದ್ದೊಯ್ದಿದ್ದಾರೆ.  ಈ ವ್ಯಾಪಾರಿ ಲಿಂಬುಹಣ್ಣನ್ನು ಗೋದಾಮಿನಲ್ಲಿ ಇಟ್ಟಿದ್ದರು. ಆದರೆ ಅದನ್ನು ಕದಿಯಲಾಗಿದೆ. ಬರೀ ಲಿಂಬುವಷ್ಟೇ ಅಲ್ಲ, ಅವರು 40 ಕೆಜಿ ಈರುಳ್ಳಿ, 38 ಕೆಜಿ ಬೆಳ್ಳುಳ್ಳಿಯನ್ನೂ ಕದ್ದುಕೊಂಡು ಹೋಗಿದ್ದಾಗಿ ತರಕಾರಿ ವ್ಯಾಪಾರಿ ತಿಳಿಸಿದ್ದಾರೆ.

ಲಿಂಬು ಹಣ್ಣಿಗೆ ಮಾರುಕಟ್ಟೆಯಲ್ಲಿ ಸದ್ಯ ಕೆಜಿಗೆ 200 ರೂಪಾಯಿ ಇದೆ. ಇದೀಗ ಒಟ್ಟಾರೆ ಕದ್ದುಕೊಂಡು ಹೋಗಿರುವ ಲಿಂಬು ಬೆಲೆ ಸುಮಾರು 10 ಸಾವಿರ ರೂಪಾಯಿ ಎಂದು ತರಕಾರಿ ವ್ಯಾಪಾರಿ ತಿಳಿಸಿದ್ದಾರೆ. ಭಾನುವಾರ ಮಧ್ಯರಾತ್ರಿ ಕಳ್ಳರು ತಮ್ಮ ಗೋದಾಮಿಗೆ ಕನ್ನ ಹಾಕಿದ್ದಾಗಿಯೂ ಅವರು ಹೇಳಿದ್ದಾರೆ. ಅಂದಹಾಗೆ, ಈ ವ್ಯಾಪಾರಿ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಆದರೆ ಇಷ್ಟು ಪ್ರಮಾಣದ ಲಿಂಬು, ಈರುಳ್ಳಿ ಕಳವಾಗಿದ್ದು ಸ್ಥಳದಲ್ಲಿ ಬಹುದೊಡ್ಡ ಸುದ್ದಿಯಾಗಿದೆ.

ಲಿಂಬು, ಈರುಳ್ಳಿ ಮತ್ತು ಬೆಳ್ಳುಳ್ಳಿ ಕಳವಾಗಿರುವ ಬಗ್ಗೆ ನಮಗೆ ತರಕಾರಿ ವ್ಯಾಪಾರಿ ಮನೋಜ್​ ಕಶ್ಯಪ್​ ಎಂಬುವರು ಕರೆ ಮಾಡಿ ದೂರು ನೀಡಿದ್ದಾರೆ. ತಾವು ಅಂಗಡಿಯ ಸಮಯ ಮುಗಿದ ಬಳಿಕ ತರಕಾರಿಗಳನ್ನೆಲ್ಲ ಬಜರಿಯಾ ಸಬ್ಜಿ ಮಂಡಿಯ ಗೋದಾಮಿನಲ್ಲಿ ಇಟ್ಟಿದ್ದಾಗಿ ಅವರು ತಿಳಿಸಿದ್ದಾರೆ. ಅಲ್ಲಿಂದಲೇ ಅದನ್ನು ಕದಿಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.  ನಮಗೆ ಮನೋಜ್ ಕಶ್ಯಪ್​ ಫೋನ್​ ಮಾಡಿ ದೂರು ನೀಡಿದ್ದಷ್ಟೇ, ಇದುವರೆಗೂ ಅಧಿಕೃತವಾಗಿ ದೂರು ನೀಡಿಲ್ಲ ಎಂದೂ ಹೇಳಿದ್ದಾರೆ.

ಇದನ್ನೂ ಓದಿ: ಬಿಜೆಪಿಯ ಬುಲ್ಡೋಜರ್ ದ್ವೇಷ, ಭಯೋತ್ಪಾದನೆಯನ್ನು ಹೊತ್ತಿದೆ: ರಾಹುಲ್ ಗಾಂಧಿ