ರೈತರೊಬ್ಬರು ಮುಂಜಾನೆ ಎದ್ದು ಹೊಲಕ್ಕೆ ಹೋದಾಗ ಎದುರಾದ ದೈತ್ಯ ಕಪ್ಪಾದ ವಸ್ತುವನ್ನು ನೋಡಿ ಬೆಚ್ಚಿಬಿದ್ದಿದ್ದಾರೆ. ಅದಾಗ್ಯೂ ಅದೇನೆಂದು ನೋಡಲು ಗಾಬರಿಯಿಂದಲೇ ಹತ್ತಿರಕ್ಕೆ ಹೋದಾಗ ತುಣುಕು ವಸ್ತು ಎಂದು ಕಂಡುಕೊಂಡರು. ಆದರೆ ಏನು ಅದು ಎಂದು ಅರ್ಥವಾಗದೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾನೆ. ಅದರಂತೆ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ ಅಧಿಕಾರಿಗಳು, ಅದು ‘ಸ್ಪೇಸ್‌ಎಕ್ಸ್‘ ಕ್ಯಾಪ್ಸೂಲ್‌ನ ತುಣುಕು ಎಂದು ದೃಢಪಡಿಸಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಇದರ ವಿಡಿಯೋ ವೈರಲ್ ಆಗುತ್ತಿದೆ.
ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್ ಬಳಿಯ ಗ್ರಾಮೀಣ ಭಾಗದ ರೈತ ಮಿಕ್ ಮೈನರ್ಸ್ ಅವರ ಜಮೀನಿನಲ್ಲಿ ಈ ಸ್ಪೇಸ್‌ಎಕ್ಸ್ ಕ್ಯಾಪ್ಸೂಲ್‌ನ ತುಣುಕು ಪತ್ತೆಯಾಗಿದೆ. ಅಧಿಕಾರಿಗಳ ಪ್ರಕಾರ, ಈ ತುಣುಕು ಜು.9ರಂದು ಬಿದ್ದಿದ್ದು, ರೈತ ಇದನ್ನು ಕೆಲವು ದಿನಗಳ ನಂತರ ಗುರುತಿಸಿದ್ದಾರೆ. ಈ ತುಣುಕು ಸುಮಾರು 3 ಮೀಟರ್ ಉದ್ದ ಮತ್ತು 20 ರಿಂದ 30 ಕೆಜಿ ತೂಕವಿರುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಆಸ್ಟ್ರೇಲಿಯಾದ ಮೌಂಟ್ ಸ್ಟ್ರೋಮ್ಲೋ ಅಬ್ಸರ್ವೇಟರಿಯ ಖಗೋಳ ಭೌತಶಾಸ್ತ್ರಜ್ಞ ಡಾ.ಬ್ರಾಡ್ ಟಕರ್ ಅವಶೇಷಗಳನ್ನು ಪರೀಕ್ಷಿಸಿ ಇದೊಂದು ಅದ್ಭುತ ಆವಿಷ್ಕಾರ ಎಂದು ಹೇಳಿದ್ದಾರೆ.
ಸಾಮಾನ್ಯವಾಗಿ ಇಂತಹ ಅವಶೇಷಗಳು ಸಮುದ್ರದಲ್ಲಿ ಬೀಳುತ್ತವೆ, ಆದರೆ ಭೂಮಿಗೆ ಬೀಳುವುದು ತುಂಬಾ ವಿರಳವಾಗಿದೆ. ರೈತರ ಹೊಲದ ಬಳಿ ಶೋಧ ಕಾರ್ಯಾಚರಣೆ ನಡೆಸಿದಾಗ ಇನ್ನೂ 2 ಅವಶೇಷಗಳು ಪತ್ತೆಯಾಗಿವೆ. ಆಸ್ಟ್ರೇಲಿಯನ್ ಬಾಹ್ಯಾಕಾಶ ಸಂಸ್ಥೆ ಸಾರ್ವಜನಿಕರಿಗೆ ಅಂತಹ ಯಾವುದೇ ದೃಶ್ಯಗಳು ಕಂಡುಬಂದಲ್ಲಿ ತಕ್ಷಣವೇ ತಿಳಿಸುವಂತೆ ಮನವಿ ಮಾಡಿದೆ.
ಮತ್ತಷ್ಟು ಟ್ರೆಂಡಿಂಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:21 pm, Fri, 5 August 22