Viral Video : ರಾಮೆನ್! ಜಪಾನಿ ನೂಡಲ್ಸ್, ಸೂಪ್ ಸವಿಯದವರು ಯಾರಿಲ್ಲ? ಜಪಾನಿನಲ್ಲಂತೂ ರಾಮೆನ್ ಇಲ್ಲದೆ ಬೆಳಗೂ ಆಗುವುದಿಲ್ಲ ಹಾಗೇ ರಾತ್ರಿಯೂ. ಆದರೆ ಈಗ ಇದೇ ರಾಮೆನ್ನಿಂದ ರೈಲೂ ಓಡುತ್ತದೆ ಎಂಬ ಹೊಸ ವಿಷಯ ನಿಮಗೆ ಗೊತ್ತೆ? ಅರೆ, ರಾಮೆನ್ಗೂ ರೈಲಿಗೂ ಏನು ಸಂಬಂಧ ಎಂದು ಯೋಚಿಸುತ್ತಿದ್ದೀರಾ? ಬನ್ನಿ ಹಾಗಿದ್ದರೆ ಈ ವಿಡಿಯೋ ನೋಡಿ.
ಎಷ್ಟೇ ಲೆಕ್ಕ ಹಾಕಿ ಮಾಡಿದರೂ ಮಾಡಿದ ಅಡುಗೆ ಉಳಿಯುವುದೇ ಅಲ್ಲವೆ? ಉಳಿದದ್ದನ್ನು ಹೇಗೆ ಕೆಡಿಸುವುದು, ಹಾಗಂತ ತಂಗಳನ್ನು ತಿನ್ನುವುದು ಎಷ್ಟು ಆರೋಗ್ಯಕರ ಎಂಬ ಪ್ರಶ್ನೆ ಕಾಡುತ್ತದೆ. ಈ ದ್ವಂದ್ವದಲ್ಲಿಯೇ ಅಡುಗೆ ಕಸದಬುಟ್ಟಿ ಸೇರಿಯಾಗಿರುತ್ತದೆ. ಆದರೆ ಇದೀಗ ಜಪಾನ್ನ ರೈಲೊಂದು ತಂಗಳು ರಾಮೆನ್ ನೂಡಲ್ಸ್ನ ಸಾರ ಮತ್ತು ಸೂಪ್ ಅನ್ನು ಜೈವಿಕ ಇಂಧನವನ್ನಾಗಿ ಪರಿವರ್ತಿಸಿದೆ. ಹೇಗಿದೆ ಈ ರಚನಾತ್ಮಕ ಆಲೋಚನೆ!
ಇದನ್ನೂ ಓದಿ : ಹಸ್ಕಿಗೀತೆ; ಸಂಗೀತ ಕಲಿಯುವಲ್ಲಿ ಎಂಥಾ ಶ್ರದ್ಧೆ ಈ ತಾಯಿ ಮಕ್ಕಳದು
ಜಪಾನಿನ ವಿಶೇಷ ಪ್ರವಾಸದ ರೈಲಿನಲ್ಲಿ ಈ ಪ್ರಯೋಗ ಶುರುವಾಗಿದೆ. ಇಲ್ಲಿಯ ಸಾರಿಗೆ ಸಂಸ್ಥೆ ನಿಶಿದಾ ಲಾಜಿಸ್ಟಿಕ್ಸ್ ಈ ಪರ್ಯಾಯ ಇಂಧನವನ್ನು ಕಂಡುಹಿಡಿದಿದೆ. ನೂಡಲ್ಸ್ ರಸ, ಸೂಪ್ನಂಥ ದ್ರವಾಹಾರವನ್ನು ಸ್ಥಳೀಯ ರೆಸ್ಟೋರೆಂಟ್ಗಳಿಂದ ಸಂಗ್ರಹಿಸಲಾಗುತ್ತದೆ. ಇದು ಶೇ. 90 ರಷ್ಟು ಟೆಂಪುರಾ ಎಣ್ಣೆ ಮತ್ತು ಶೇ. 10 ರಷ್ಟು ರಾಮೆನ್ ಸೂಪ್ ಅನ್ನು ಒಳಗೊಂಡಿರುತ್ತದೆ. ನಂತರ ಅದನ್ನು ಸಂಸ್ಕರಿಸಿ ಇಂಧನವನ್ನಾಗಿ ಪರಿವರ್ತಿಸಲಾಗುತ್ತದೆ.
ಈ ಜೈವಿಕ ಇಂಧನವು ಇತರೇ ಇಂಧನಗಳಂತೆ ಪರಿಸರಕ್ಕೆ ಮಾರಕವಲ್ಲ. ಪರಿಸರ ಸ್ನೇಹಿಯೂ ಹೌದು ಹಾಗೆಯೇ ರೈಲು ಚಲಿಸುತ್ತಿರುವಂತೆ ವಿಶೇಷ ಪರಿಮಳವನ್ನು ಪಸರಿಸುತ್ತದೆ. ಆಗ ಪ್ರಯಾಣಿಕರು, ಆಹಾ ಹತ್ತಿರದಲ್ಲಿ ರಾಮೆನ್ ರೆಸ್ಟೋರೆಂಟ್ ಇದೆ ಎಂದು ಮೂಗರಳಿಸಿದಲ್ಲಿ ಅಚ್ಚರಿಯೇನಲ್ಲ.
ಇದನ್ನೂ ಓದಿ : ಡೋಲೋ 650 ಶಶಿರೇಖಾ; ನಿಮ್ಮ ಮನೆಮಗಳೀಗ ಮಾಡೆಲಿಂಗ್ಗೂ ಸೈ?
ಜಪಾನಿನ ಮಿಯಾಜಾಕಿ ಪ್ರಾಂತ್ಯದಲ್ಲಿ ಈ ವಿಶೇಷ ರೈಲು ಪ್ರಯಾಣವನ್ನು ಅನುಭವಿಸಬಹುದಾಗಿದೆ. ಇದು ಸುಮಾರು 60 ಪ್ರಯಾಣಿಕರ ಸಾಮರ್ಥ್ಯವನ್ನು ಹೊಂದಿದೆ. ಈ ರೈಲಿಗೆ ಅಮಟೆರಾಸು ಎಂದು ಹೆಸರಿಸಲಾಗಿದೆ. 30 ನಿಮಿಷಗಳ ಈ ಓಪನ್ ರೈಲುಪ್ರಯಾಣದ ಮೂಲಕ ಹಳ್ಳಿಪರಿಸರವನ್ನು ಆನಂದಿಸಬಹುದಾಗಿದೆ. 344 ಅಡಿ ಎತ್ತರದಲ್ಲಿರುವ ಸೇತುವೆಯ ಮೇಲೆ ಇದು ಚಲಿಸುವುದರಿಂದ ಸುಂದರ ಭೂದೃಶ್ಯವನ್ನು ನೋಡಬಹುದಾಗಿದೆ ಹಾಗೆಯೇ ಸುರಂಗ ಮಾರ್ಗದ ಅದ್ಭುತ ಅನುಭವವನ್ನು ಪ್ರಯಾಣಿಕರು ಹೊಂದಬಹುದಾಗಿದೆ.
ನಿಮ್ಮ ಮನೆಯ ತಂಗಳು ಸಾರು, ಸಾಂಬಾರನ್ನು ಏನು ಮಾಡುವುದು ಎಂದು ಯೋಚಿಸುತ್ತಿದ್ದೀರಾ?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 12:07 pm, Fri, 5 May 23