Baby Elephant: ತಾಯಿಯಿಂದ ದೂರವಾದ ಮರಿ ಆನೆ ರೋಧನೆ, ಅಯ್ಯಯ್ಯೋ…!
ಕಾಡಾನೆ ಮರಿಯೊಂದು ಗುಂಪಿನಿಂದ ತಪ್ಪಿಸಿಕೊಂಡಿದ್ದು ಕಾಗೋಡು ಗ್ರಾಮದ ಕಾಫಿ ತೋಟದಲ್ಲಿ ಓಡಾಡುತ್ತಿದೆ. ತಾಯಿಯಿಂದ ದೂರಾದ ಕಾಡಾನೆ ಎಲ್ಲಿಯೂ ಹೋಗಲು ಸಾಧ್ಯವಾಗದೆ ಪರಿತಪಿಸುತ್ತಿದೆ.
ಹಾಸನ, ಜುಲೈ 31: ಗಜಪಡೆ ಹಿಂಡಿನಿಂದ ಬೇರ್ಪಟ್ಟಿರುವ ಮರಿಯಾನೆ ಕಾಫಿ ತೋಟ ಮೊದಲಾದ ಕಡೆಗಳಲ್ಲಿ ಮೂಕವಾಗಿ ಓಡಾಡುತ್ತಿದೆ. ಹಾಸನ ಜಿಲ್ಲೆ ಬೇಲೂರು ತಾಲೂಕಿನ ಕೋಗೋಡು ಗ್ರಾಮದ ಗಿರಿಯಪ್ಪ ಶೆಟ್ಟಿ ಎಂಬುವವರ ತೋಟದಲ್ಲಿ ಮರಿಯಾನೆ ಪತ್ತೆಯಾಗಿದೆ. ಎಂಟು ಕಾಡಾನೆಗಳ ಗುಂಪಿನಲ್ಲಿ ಓಡಾಡಿಕೊಂಡಿದ್ದ ಆನೆ ಮರಿ, ಆಹಾರ ತಿನ್ನುವಾಗಲೋ ಅಥವಾ ಬೇರಾವುದೋ ಸಂದರ್ಭದಲ್ಲಿ ಹಿಂಡಿನಿಂದ ತಪ್ಪಿಸಿಕೊಂಡಿದೆ. ದಾರಿ ತಪ್ಪಿರುವ ಮರಿಯನ್ನು ಮರಳಿ ಕಾಡಾನೆ ಗುಂಪಿಗೆ ಸೇರಿಸಲು ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಹರಸಾಹಸ ಪಡುತ್ತಿದ್ದು, ಹಸಿವಿನಿಂದ ಬಳಲುತ್ತಿರುವ ಮರಿಯಾನೆಗೆ ಆಹಾರ ನೀಡಿ ಆರೈಕೆ ಮಾಡಿದ್ದಾರೆ.
ಕಾಡಾನೆ ಮರಿಯೊಂದು ಗುಂಪಿನಿಂದ ತಪ್ಪಿಸಿಕೊಂಡಿದ್ದು ಕಾಗೋಡು ಗ್ರಾಮದ ಕಾಫಿ ತೋಟದಲ್ಲಿ ಓಡಾಡುತ್ತಿದೆ. ತಾಯಿಯಿಂದ ದೂರಾದ ಕಾಡಾನೆ ಎಲ್ಲಿಯೂ ಹೋಗಲು ಸಾಧ್ಯವಾಗದೆ ಪರಿತಪಿಸುತ್ತಿದೆ. ಸುದ್ದಿ ತಿಳಿದ ಅರಣ್ಯ ಇಲಾಖೆ ಸಿಬ್ಬಂದಿ ಕಳೆದ ಎರಡು ದಿನಗಳಿಂದಲೂ ಮರಿಯಾನೆ ಚಲನವಲನ ಗಮಿಸುತ್ತಿದ್ದಾರೆ. ತನ್ನ ಪರಿವಾರದಿಂದ ದೂರವಾದ ಮರಿಯಾನೆ ಸಿಟ್ಟಿನಿಂದ ಅಥವಾ ಗಾಬರಿಯಿಂದ ಗ್ರಾಮಗಳ ಕಡೆ ಬಾರದಂತೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಮುನ್ನೆಚ್ಚರಿಕೆ ವಹಿಸಿದ್ದಾರೆ. ಕಾಡಾನೆ ಮರಿಗೆ ಹಲಸಿನ ಹಣ್ಣು, ಕಬ್ಬು ನೀಡಿ ಆರೈಕೆ ಮಾಡಲಾಗುತ್ತಿದೆ. ಅರಣ್ಯ ಇಲಾಖೆ ಸಿಬ್ಬಂದಿ ಹರಸಾಹಸಪಟ್ಟು ಎರಡು ಬಾರಿ ಕಾಡಾನೆ ಗುಂಪಿಗೆ ಸೇರಿಸಿದ್ದಾರೆ. ಆದರೂ ಕಾಡಾನೆಗಳು ಮರಿಯನ್ನು ಬಿಟ್ಟು ಹೋಗಿವೆ. ಇದರಿಂದಾಗಿ ಮರಿಯಾನೆ ಕಾಫಿ ತೋಟವೊಂದರಲ್ಲಿ ಬೀಡುಬಿಟ್ಟಿದೆ. ಕಾಡಾನೆ ವೀಕ್ಷಣೆಗೆ ಬಂದ ಪರಿಸರ ಪ್ರೇಮಿ ಹುರುಡಿ ವಿಕ್ರಂ ಮೇಲೆ ಮರಿಯಾನೆ ದಾಳಿ ಮಾಡಿದ್ದು, ಆನೆಯೊಂದಿಗೆ ವಿಕ್ರಂ ಸೆಣೆಸಾಡಿದ್ದಾರೆ. ಕಾಡಾನೆ ಮರಿಯನ್ನು ನೋಡಲು ಜನರು ಮುಗಿಬಿದ್ದಿದ್ದು, ತಾಯಿಗಾಗಿ ಪರಿತಪಿಸುತ್ತಿರುವ ಮರಿಯಾನೆಯ ಸಂಕಟ ಕಂಡು ಮೊಮ್ಮಲ ಮರುಗಿದ್ದಾರೆ.
ಮರಿಯಾನೆ ಕಾಫಿ ತೋಟದಲ್ಲಿ ಉಳಿದಿರುವುದರಿಂದ ಕಾಡಾನೆಗಳು ವಾಪಾಸ್ ಮರಿಯನ್ನು ಕರೆದೊಯ್ಯಲು ಬರುತ್ತವೆ ಎಂಬ ಆತಂಕದಿಂದ ತೋಟದ ಮಾಲೀಕರು ಅತ್ತ ಸುಳಿಯುತ್ತಿಲ್ಲ. ಇನ್ನೊಂದೆಡೆ ಜೀವ ಭಯದಿಂದ ಕಾಫಿ ತೋಟದ ಕೆಲಸಕ್ಕೆ ಕಾರ್ಮಿಕರು ಬರಲು ಹಿಂದೇಟು ಹಾಕುತ್ತಿದ್ದಾರೆ. ಕಳೆದ ಎರಡು ದಿನಗಳಿಂದ ಮರಿಯಾನೆ ಗೋಳಾಡುತ್ತಿದ್ದರು ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಬಂದು ಕಾಡಾನೆ ಓಡಾಟ ಗಮನಿಸುತ್ತಿದ್ದಾರೆ ಹೊರತು ಯಾವುದೇ ಕ್ರಮ ಕೈಗೊಂಡಿಲ್ಲ. ಮರಿಯಾನೆ ಆಹಾರವಿಲ್ಲದೆ ನಿತ್ರಾಣಗೊಳ್ಳುತ್ತದೆ. ಅಲ್ಲದೆ ಕಾಡಾನೆ ಮೈಮೇಲೆ ಗಾಯಗಳಾಗಿದ್ದು ಅರಣ್ಯ ಇಲಾಖೆ ಸಿಬ್ಬಂದಿ ಯಾವುದೇ ಕ್ರಮ ಕೈಗೊಳ್ಳದೆ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ಮರಿಯಾನೆಗೆ ಚಿಕಿತ್ಸೆ ನೀಡಿ ಸೆರೆ ಹಿಡೆದು ಸ್ಥಳಾಂತರ ಮಾಡಬೇಕು ಇಲ್ಲವಾದರೆ ಮರಿಯಾನೆ ಸಾವನ್ನಪ್ಪಲಿದೆ ಎಂದು ಜನರು ಆತಂಕ ವ್ಯಕ್ತಪಡಿಸಿದ್ದಾರೆ. ಆದ್ರೆ ಕಾಡಾನೆ ಮರಿ ಗುಂಪಿನಿಂದ ಬೇರ್ಪಟ್ಟ ಬಳಿಕ ಆನೆಮರಿಯನ್ನು ಹಿಂಡಿಗೆ ಸೇರಿಸಲು ಸಾಕಷ್ಟು ಪ್ರಯತ್ನ ನಡೆದಿದೆ, ತಾಯಿ ಆನೆ ತನ್ನ ಮರಿಯನ್ನು ಹುಡುಕಿ ಬರಬಹುದು ಎಂಬ ನಿರೀಕ್ಷೆಯೊಂದಿಗೆ ಕಾಯುತ್ತಿದ್ದು ಮೇಲಾಧೀಕಾರಿಗಳ ಸೂಚನೆಯಂತೆ ಕ್ರಮ ವಹಿಸುವುದಾಗಿ ಅರಣ್ಯ ಅಧಿಕಾರಿ ತಿಳಿಸಿದ್ದಾರೆ.
ಒಟ್ನಲ್ಲಿ ಕಳೆದ ಎರಡು ದಶಕಗಳಿಂದ ಹಾಸನ ಜಿಲ್ಲೆಯಲ್ಲಿ ಕಾಡಾನೆಗಳ ಉಪಟಳವಿದ್ದು, ವರ್ಷದಿಂದ ವರ್ಷಕ್ಕೆ ಸಂತತಿ ಜಾಸ್ತಿಯಾಗುತ್ತಿವೆ. ಇದರಿಂದಾಗಿ ಮಲೆನಾಡು ತಾಲೂಕುಗಳಲ್ಲಿ ಕಾಡಾನೆ ಕಾಟ ಹೆಚ್ಚಾಗಿ ಬೆಳೆ, ಆಸ್ತಿಪಾಸ್ತಿ ನಷ್ಟವಾಗುತ್ತಿರುವುದು ಒಂದೆಡೆಯಾದರೆ, ಈ ರೀತಿಯ ಸಾವು-ನೋವು ಸಂಭವಿಸುತ್ತಿರುವುದು ಆನೆ ಮತ್ತು ಮಾನವರ ಸಂಘರ್ಷ ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ