ಚಿಕ್ಕಾಬಳ್ಳಾಪುರದಲ್ಲೂ ಭಾರಿ ಮಳೆ; ಉಕ್ಕಿ ಹರಿಯುತ್ತಿದೆ ಚಿತ್ರಾವತಿ ನದಿ, ರಸ್ತೆಗಳ ಮೇಲೆ ಐದಡಿ ನೀರು!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Nov 19, 2021 | 5:22 PM

ವರದೇಗಾರಪಳ್ಳಿ ಮತ್ತು ಭೋಗೇಪಲ್ಲಿ ಹೆಸರಿನ ಎರಡು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುತ್ತಿದ್ದ ಸೇತುವೆಯು ಕೊಚ್ಚಿಕೊಂಡು ಹೋಗಿದೆ, ರಸ್ತೆಗಳ ಮೇಲೆ ಸುಮಾರು ಐದು ಅಡಿಗಳಷ್ಟು ಎತ್ತರ ನೀರು ಹರಿಯುತ್ತಿದೆ.

ಕರ್ನಾಟಕದಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆರಾಯ ಯಾರ ಮೊರೆಯನ್ನೂ ಕೇಳುತ್ತಿಲ್ಲ. ಸುರಿಯುವುದೊಂದೇ ಎನ್ನಯ ಧರ್ಮ ಎನ್ನುವಂತಿದೆ ವರುಣನ ಪ್ರತಾಪ. ರಾಜ್ಯದ ಒಂದೆಡೆ ಅಂತಲ್ಲ, ಎಲ್ಲಾ ಭಾಗಗಳಲ್ಲೂ ಮಳೆ ಧಾರಾಕಾರವಾಗಿ ಸುರಿಯುತ್ತಿದೆ. ಈ ವಿಡಿಯೋವನ್ನು ನೋಡಿ. ಇದ ಚಿಕ್ಕಬಳ್ಳಾಪುರದಲ್ಲಿ ಹರಿಯುವ ಚಿತ್ರಾವತಿ ನದಿ. ಆದರೆ ಇಲ್ಲಿ ಕಾಣುತ್ತಿರುವುದು ನದಿ ತನ್ನ ಜಾಡು ಹಿಡಿದು ಹರಿದು ಹೋಗುತ್ತಿರುವ ದೃಶ್ಯವಲ್ಲ. ಭಾರೀ ಮಳೆಯಿಂದಾಗಿ ಉಕ್ಕಿ ಹರಿಯುತ್ತಿರುವ ಚಿತ್ರಾವತಿ ನದಿಯು ಜಿಲ್ಲೆಯ ಬಾಗೇಪಲ್ಲಿ ತಾಲ್ಲೂಕಿನ ಗಾಮಗಳ ಮಧ್ಯೆದ ಸೇತುವೆಯನ್ನು ಒಡೆದು ಬೇರೆ ಕಡೆಯೂ ಹರಿಯಲಾರಂಭಿಸಿದೆ. ಸ್ಥಳೀಯರೊಬ್ಬರು ಈ ದೃಶ್ಯವನ್ನು ತಮ್ಮ ಮೊಬೈಲ್ನಲ್ಲಿ ರೆಕಾರ್ಡ್ ಮಾಡಿ ಜನರಿಗೆ ಈ ಭಾಗಕ್ಕೆ ಬಾರದಿರುವಂತೆ ಅಗ್ರಹಿಸಿದ್ದಾರೆ. ವರದೇಗಾರಪಳ್ಳಿ ಮತ್ತು ಭೋಗೇಪಲ್ಲಿ ಹೆಸರಿನ ಎರಡು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುತ್ತಿದ್ದ ಸೇತುವೆಯು ಕೊಚ್ಚಿಕೊಂಡು ಹೋಗಿದೆ, ರಸ್ತೆಗಳ ಮೇಲೆ ಸುಮಾರು ಐದು ಅಡಿಗಳಷ್ಟು ಎತ್ತರ ನೀರು ಹರಿಯುತ್ತಿದೆ. ಹಾಗಾಗೀ ಯಾರೂ ಈ ಕಡೆ ಬರುವ ಪ್ರಯತ್ನ ಮಾಡಬಾರದು ಅಂತ ಅವರು ಹೇಳುತ್ತಿರುವುದು ಸ್ಪಷ್ಟವಾಗಿ ಕೇಳಿಸುತ್ತದೆ.

ಮಳೆಯಿಂದಾಗಿ ಕೋವಿಡ್-19 ಲಸಿಕಾ ಅಭಿಯಾನ ಕುಂಠಿತಗೊಂಡಿದೆ. ಜನರು ಮನೆಯಿಂದ ಆಚೆ ಬರುವುದನ್ನು ಇಷ್ಟಪಡುತ್ತಿಲ್ಲ. ಅಲ್ಲದೆ ಮಳೆಯಿಂದಾಗಿ ರಾಜ್ಯದೆಲ್ಲೆಡೆ ದಿನ ಮತ್ತು ರಾತ್ರಿಯ ತಾಪಮಾನ ಗಣನೀಯವಾಗಿ ಕುಸಿದಿದೆ. ಲಸಿಕೆ ಹಾಕಿಸಿಕೊಂಡಾಗ ಒಂದೆರಡು ದಿನಗಳ ಮಟ್ಟಿಗೆ ಜ್ವರ ಬರೋದು ಎಲ್ಲರಿಗೂ ಗೊತ್ತಿದೆ. ಹಾಗಾಗಿ ಮಳೆ ಸೃಷ್ಟಿಸುತ್ತಿರುವ ಅವಾಂತರಗಳ ಹಿನ್ನೆಲೆಯಲ್ಲಿ ಅವರಿಗೆ ಲಸಿಕೆ ಹಾಕಿಸಿಕೊಳ್ಳುವುದು ಬೇಡವಾಗಿದೆ.

ಹವಾಮಾನ ಇಲಾಖೆಯವರು ಕಳೆದ ಒಂದು ತಿಂಗಳಿನಿಂದ ‘ಇನ್ನೆರಡು ದಿನಗಳ ಕಾಲ’ ಮಳೆಯಾಗಲಿದೆ ಅಂತ ಹೇಳುತ್ತಿದ್ದಾರೆ! ಈ ಮಳೆ ಅವರಿಗೂ ದಿಕ್ಕು ತೋಚದಂತೆ ಮಾಡಿದೆ.

ಇದನ್ನೂ ಓದಿ:   Tirupathi: ತಿರುಪತಿಯಲ್ಲಿ ಪ್ರವಾಹದ ಪರಿಸ್ಥಿತಿ, ಗುಡ್ಡಗಳಿಂದ ಭೋರ್ಗರೆಯುತ್ತಿರುವ ನೀರು; ವಿಡಿಯೋ ನೋಡಿ