ಎರಡು-ದಿನ ಪ್ರವಾಸ ಅಂಗವಾಗಿ ಮೈಸೂರಿಗೆ ವಿಶೇಷ ವಿಮಾನದಲ್ಲಿ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ
ಇಂದು ರಾತ್ರಿ ಮೈಸೂರಿನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ವಾಸ್ತವ್ಯ ಹೂಡಲಿದ್ದು ಶನಿವಾರವೂ ಬಿಡುವಿಲ್ಲದೆ ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮೈಸೂರು ಕ್ಷೇತ್ರದಿಂದ ಅವರ ಮಗ ಯತೀಂದ್ರ ಸಿದ್ದರಾಮಯ್ಯ ಸ್ಪರ್ಧಿಸುವ ನಿರೀಕ್ಷೆ ಇರುವುದರಿಂದ ಮುಖ್ಯಮಂತ್ರಿಯವರು ಈ ಭಾಗಕ್ಕೆ ಹೆಚ್ಚಿನ ಆದ್ಯತೆ ನೀಡಿದರೆ ಆಶ್ಚರ್ಯವಿಲ್ಲ.
ಮೈಸೂರು: ಇಂದಿನಿಂದ ಎರಡು ದಿನಗಳ ಕಾಲ ಮೈಸೂರು ಪ್ರವಾಸ ಕೈಗೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ವಿಶೇಷ ವಿಮಾನವೊಂದರಲ್ಲಿ ನಗರ ವಿಮಾನ ನಿಲ್ದಾಣದಲ್ಲಿ ಬಂದಿಳಿಯುವ ಮೊದಲು ಜಿಲ್ಲೆಯ ಹಲವು ಭಾಗಗಳಲ್ಲಿ ಅವರ ಸಂಚಾರಕ್ಕೆ ಬಳಕೆಯಾಗಲಿರುವ ವಾಹನದ ತಪಾಸಣೆ ಅಮೂಲಾಗ್ರವಾಗಿ ನಡೆಸಲಾಯಿತು. ದೃಶ್ಯಗಳಲ್ಲಿ ಕಾಣುತ್ತಿರುವ ಹಾಗೆ ಬಾಂಬ್ ಪತ್ತೆ ದಳ (bomb detection squad) ಮತ್ತು ಡಾಗ್ ಸ್ಕ್ವ್ಯಾಡ್ ವಾಹನದೊಳಗೆ ಇಲ್ಲವೇ ಅಡಿಭಾಗದಲ್ಲಿ ಸ್ಪೋಟಕ (explosives) ವಸ್ತುಗಳ್ಯಾವು ಇಲ್ಲದಿರುವುದನ್ನು ಖಚಿತಪಡಿಸಿಕೊಳ್ಳುತ್ತಿವೆ. ನಮಗೆ ಲಭ್ಯವಿರುವ ಮಾಹಿತಿ ಪ್ರಕಾರ ಸಿದ್ದರಾಮಯ್ಯ ಜಿಲ್ಲೆಯ ಹಲವು ಭಾಗಗಳಲ್ಲಿ ನಡೆಯಲಿರುವ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ಪತ್ರಕರ್ತರ ನೂತನ ಕಟ್ಟಡದ ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಅವರು ಇಂದು ಮಧ್ಯಾಹ್ನ ನಗರದ ಕೆಆರ್ ರಸ್ತೆಯಲ್ಲಿ ವೈದ್ಯಕೀಯ ಇಲಾಖೆ ವತಿಯಿಂದ ಆಯೋಜಿಸಲಾಗಿರುವ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಲಿದ್ದಾರೆ. ಸಂಜೆ 5.30 ಕ್ಕೆ ಮೈಸೂರು ಅರಮನೆಯಲ್ಲಿ ಮಾಗಿ ಉತ್ಸವಕ್ಕೆ ಚಾಲನೆ ನೀಡುವ ಮೊದಲು ಮುಖ್ಯಮಂತ್ರಿಯವರು ನಂಜನಗೂಡಿನ ಕವಲಂದೆಯಲ್ಲಿ ಪೊಲೀಸ್ ಠಾಣೆಯ ಹೊಸ ಕಟ್ಟಡವನ್ನು ಉದ್ಘಾಟಿಸಲಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ