ಹಿಂದೂ ಕಾರ್ಯಕರ್ತರು ಹೆದರಿ ಮನೆಯಲ್ಲೇ ಕೂರುವ ವಾತಾವರಣ ಕಾಂಗ್ರೆಸ್ ಸರ್ಕಾರ ಸೃಷ್ಟಿಸುತ್ತಿದೆ: ಆರ್ ಅಶೋಕ, ವಿಪಕ್ಷ ನಾಯಕ
ರಾಜ್ಯದ ರಾಮ ಭಕ್ತರು, ಕರಸೇವಕರು ಮತ್ತು ಹಿಂದೂ ಕಾರ್ಯಕರ್ತರು ಯಾವ ಕಾರಣಕ್ಕೂ ಹೆದರುವ ಮತ್ತು ಅನಾಥ ಪ್ರಜ್ಞೆಯಿಂದ ಬಳಲುವ ಅಗತ್ಯವಿಲ್ಲ, ಅವರೆಲ್ಲರೊಂದಿಗೆ ರಾಜ್ಯದ ಬಿಜೆಪಿ ಘಟಕ ಇದೆ, ಹುಬ್ಬಳ್ಳಿಯಲ್ಲಿ ಪ್ರತಿಯೊಬ್ಬ ಹಿಂದೂ ಕಾರ್ಯಕರ್ತನ ಮನೆಗೆ ತೆರಳಿ ಅವರಲ್ಲಿ ಧೈರ್ಯ ಮತ್ತು ಆತ್ಮವಿಶ್ವಾಸ ತುಂಬುವ ಕೆಲಸ ತಾನು ಮಾಡುವುದಾಗಿ ಅಶೋಕ ಹೇಳಿದರು.
ದಾವಣಗೆರೆ: ದೇಶದೆಲ್ಲೆಡೆ ಜನ ರಾಮನ ಭಜನೆ ಮಾಡುತ್ತಿದ್ದರೆ ಕರ್ನಾಟಕದಲ್ಲಿ ಹಿಂದೂಗಳಿಗೆ ಅದನ್ನು ಮಾಡದಂತೆ ತಡೆದಿದ್ದೇವೆ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಲಿಷ್ಠವಾಗಿದೆ ಎಂಬ ಸಂದೇಶವನ್ನು ಸೋನಿಯ ಗಾಂಧಿ (Sonia Gandhi) ಮತ್ತು ರಾಹುಲ್ ಗಾಂಧಿಗೆ (Rahul Gandhi) ರವಾನಿಸಲು ಸಿದ್ದರಾಮಯ್ಯ ಸರ್ಕಾರ (Siddaramaiah government) ಹಿಂದೂ ಕಾರ್ಯಕರ್ತರನ್ನು, ಕರಸೇವಕರನ್ನು ಬಂಧಿಸುವ ಕೆಲಸ ಮಾಡುತ್ತಿದೆ ಎಂದು ವಿರೋಧ ಪಕ್ಷದ ನಾಯಕ ಆರ್ ಅಶೋಕ (R Ashoka) ಹೇಳಿದರು. ಹುಬ್ಬಳ್ಳಿಗೆ ತೆರಳುವ ಮುನ್ನ ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅಶೋಕ, ಹಿಂದೆ ತಾನು ಗೃಹ ಸಚಿವನಾಗಿ ಕೆಲಸ ಮಾಡಿರುವುದರಿಂದ ರಾಜ್ಯದಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ಗೊತ್ತಾಗುತ್ತದೆ, ಸಿದ್ದರಾಮಯ್ಯ ಸರ್ಕಾರ ಹಿಂದೂ ಕಾರ್ಯಕರ್ತರಲ್ಲಿ, ರಾಮ ಭಕ್ತರಲ್ಲಿ ಭಯ ಮೂಡಿಸವ ಕೆಲಸ ಮಾಡುತ್ತಿದೆ, ರಾಮ ಮಂದಿರ ಪ್ರಾಣ ಪ್ರತಿಷ್ಠೆ ನಡೆಯುವಾಗ ಭಕ್ತರನ್ನೆಲ್ಲ ಮನೆಯೊಳಗೆ ಕೂರುವಂಥ ಪರಿಸ್ಥಿತಿ ನಿರ್ಮಾಣ ಮಾಡುವ ಹುನ್ನಾರ ಸರ್ಕಾರದಿಂದ ನಡೆದಿದೆ ಎಂದು ಅಶೋಕ ಹೇಳಿದರು. ಬ್ರಿಟಿಷರ ವಿರುದ್ಧ ಹೋರಾಡಲಾಗದ, ತನ್ನ ಮಕ್ಕಳನ್ನು ಒತ್ತೆಯಿಟ್ಟ ಮತ್ತು ಮೈಸೂರು ಮಹಾರಾಜರನ್ನು ಬಂಧನದಲ್ಲಿರಿಸಿ ಅಡಳಿತ ಕೈಗೆತ್ತಿಕೊಂಡು ಲಕ್ಷಾಂತರ ಹಿಂದೂಗಳನ್ನು ಸಂಹಾರ ಮಾಡಿದ ಟಿಪ್ಪು ಸುಲ್ತಾನ್ ನಂಥ ಹೇಡಿಯನ್ನು ಆದರ್ಶವಾಗಿಟ್ಟುಕೊಂಡಿರುವವರಿಗೆ ಬೇರೆ ಏನು ತಾನೆ ಮಾಡಲು ಸಾಧ್ಯ ಎಂದು ಅವರು ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ