ಗೃಹಲಕ್ಷ್ಮಿ, ಕಿಸಾನ್ ಸಮ್ಮಾನ್ ಯೋಜನೆಯ ಹಣ ಸಹಾಯ..ಪಿಯು ಟಾಪರ್ ಸಂತಸ; ವಿಡಿಯೋ
2023-24ನೇ ಸಾಲಿನ ದ್ವಿತೀಯ ಪಿಯು ಪರೀಕ್ಷೆ ಫಲಿತಾಂಶ ಇಂದು (ಏಪ್ರಿಲ್ 10) ಹೊರಬಿದ್ದಿದೆ. ಕಲಾ ವಿಭಾಗದಲ್ಲಿ ವಿಜಯಪುರದ SS ಪಿಯು ಕಾಲೇಜಿನ ವಿದ್ಯಾರ್ಥಿ ವೇದಾಂತ ನಾವಿ ರಾಜ್ಯಕ್ಕೆ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ.
ವಿಜಯಪುರ, (ಏಪ್ರಿಲ್ 10): 2023-24ನೇ ಸಾಲಿನ ದ್ವಿತೀಯ ಪಿಯು ಪರೀಕ್ಷೆ ಫಲಿತಾಂಶ ಇಂದು (ಏಪ್ರಿಲ್ 10) ಹೊರಬಿದ್ದಿದೆ. ಕಲಾ ವಿಭಾಗದಲ್ಲಿ ವಿಜಯಪುರದ SS ಪಿಯು ಕಾಲೇಜಿನ ವಿದ್ಯಾರ್ಥಿ ವೇದಾಂತ ನಾವಿ ರಾಜ್ಯಕ್ಕೆ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. ವೇದಾಂತ ಮೂಲತಃ ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಕಳಬೀಳಗಿ ಗ್ರಾಮದವರು. ಬಡತನದ ಮಧ್ಯೆಯೂ ಗ್ರಾಮೀಣ ಭಾಗದ ವಿದ್ಯಾರ್ಥಿ ಸಾಧನೆ ಮಾಡಿರುವುದಕ್ಕೆ ಶುಭಾಶಯಗಳ ಮಹಾಪೂರ ಹರಿದು ಬಂದಿದೆ. 2020ರಲ್ಲಿ ಕೋವಿಡ್ನಲ್ಲಿ ತಂದೆಯನ್ನು ಕಳೆದುಕೊಂಡಿದ್ದ ವೇದಾಂತ, ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳ ಹಣದಿಂದ ನನ್ನ ಓದಿಗೆ ಸಹಾಯವಾಯಿತು ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ಮೋದಿ ಅವರು ರೈತರಿಗೆ ನೀಡುವ ಕಿಸಾನ್ ಸಮ್ಮಾನ್ ಯೋಜನೆ ಮತ್ತು ರಾಜ್ಯ ಕಾಂಗ್ರೆಸ್ ಸರ್ಕಾರದ ಗೃಹ ಲಕ್ಷ್ಮೀ ಯೋಜನೆಯ ಹಣ ಓದಿಗೆ ಸಹಾಯವಾಯಿತು ಎಂದಿದ್ದಾರೆ. ಈ ಯೋಜನೆಗಳು ಜಾರಿಗೆ ಬರುವ ಮುನ್ನ ನನ್ನ ತಾಯಿ ಕೂಲಿ ಕೆಲಸ ಮಾಡಿ ನಮ್ಮನ್ನು ಸಾಕಿದಳು . ನನ್ನ ಅಕ್ಕ ಖಾಸಗಿ ಶಾಲೆಯಲ್ಲಿ ಕೆಲಸ ಮಾಡಿ ನನ್ನ ಓದಿಗೆ ಬೆನ್ನೆಲುಬಾಗಿ ನಿಂತರು ಎಂದು ವೇದಾಂತ ನೆನಪಿಸಿಕೊಂಡಿದ್ದಾರೆ.