ದಾವಣಗೆರೆ: ದೇವರಬೆಳಕೆರೆ ಪಿಕಪ್‌ ಜಲಾಶಯದ ಹಿನ್ನೀರಿನಲ್ಲಿ ಮುಳುಗಿ ತಂದೆ-ಮಗ ಸಾವು, ಮತ್ತೊಬ್ಬ ಬಚಾವ್

Edited By: ಸಾಧು ಶ್ರೀನಾಥ್​

Updated on: Sep 28, 2023 | 7:24 PM

Devarabelakere pickup reservoir: ಹರಿಹರ ತಾಲ್ಲೂಕಿನ ದೇವರ ಬೆಳಕೆರೆ ಪಿಕಪ್‌ ಜಲಾಶಯದ ಹಿನ್ನೀರಿನಲ್ಲಿ ಸ್ನಾನ ಮಾಡುತ್ತಿದ್ದಾಗ ನೀರಿನ ಹರಿವು ಜಾಸ್ತಿಯಾಗಿ ತಂದೆ–ಮಗ ಗುರುವಾರ ಮೃತಪಟ್ಟಿದ್ದಾರೆ. ಹರಿಹರ ತಾಲ್ಲೂಕಿನ ಮಿಟ್ಲಕಟ್ಟೆಯ ಚಂದ್ರಪ್ಪ ಹಾಗೂ ಪುತ್ರ ಶೌರ್ಯ ಮೃತರು.

ದಾವಣಗೆರೆ, ಸೆಪ್ಟೆಂಬರ್ 28: ಹರಿಹರ ತಾಲ್ಲೂಕಿನ ದೇವರ ಬೆಳಕೆರೆ ಪಿಕಪ್‌ ಜಲಾಶಯದ ಹಿನ್ನೀರಿನಲ್ಲಿ (Devarabelakere pickup reservoir) ಸ್ನಾನ ಮಾಡುತ್ತಿದ್ದಾಗ ನೀರಿನ ಹರಿವು ಜಾಸ್ತಿಯಾಗಿ ತಂದೆ–ಮಗ ಗುರುವಾರ ಮೃತಪಟ್ಟಿದ್ದಾರೆ. ಹರಿಹರ ತಾಲ್ಲೂಕಿನ ಮಿಟ್ಲಕಟ್ಟೆಯ ಚಂದ್ರಪ್ಪ (42) ಹಾಗೂ ಪುತ್ರ ಶೌರ್ಯ(10) ಮೃತಪಟ್ಟವರು.

ಚಂದ್ರಪ್ಪ ಅವರ ಪುತ್ರರಾದ ಶೌರ್ಯ ಹಾಗೂ ಅಥರ್ವ ಇಬ್ಬರೂ ಸ್ನಾನ ಮಾಡುತ್ತಿರುವಾಗ ಏಕಾಏಕಿ ನೀರಿನ ಹರಿವು ಜಾಸ್ತಿಯಾಗಿ ಇಬ್ಬರೂ ಮುಳುಗಿದ್ದಾರೆ. ಶೌರ್ಯನನ್ನು ರಕ್ಷಿಸಲು ಹೋದ ಚಂದ್ರಪ್ಪ ಸೇರಿ ಇಬ್ಬರೂ ನೀರಿನಲ್ಲಿ ಮುಳುಗಿದ್ದಾರೆ. 13 ವರ್ಷದ ಅಥರ್ವನನ್ನು ಅಲ್ಲಿಯೇ ಇದ್ದ ಸ್ಥಳೀಯ ಯುವಕರೊಬ್ಬರು ರಕ್ಷಿಸಿದ್ದಾರೆ. ಚಂದ್ರಪ್ಪ ಖಾಸಗಿ ಕಂಪನಿಯೊಂದರ ಉದ್ಯೋಗಿಯಾಗಿದ್ದು, ವಿಹಾರಕ್ಕೆಂದು ಮಕ್ಕಳ ಜೊತೆ ಪಿಕಪ್‌ಗೆ ಬಂದಿದ್ದರು. ಅಗ್ನಿಶಾಮಕ ದಳದ ಸಿಬ್ಬಂದಿ ಇಬ್ಬರ ಶವವನ್ನು ಹೊರ ತೆಗೆದಿದ್ದಾರೆ. ಹರಿಹರ ಗ್ರಾಮಾಂತರ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Basavaraj Mudnur

ಆದ್ಯ ವಚನಕಾರ ದೇವರ ದಾಸಿಮಯ್ಯನ 'ಮುದನೂರು' ನಮ್ಮ ಮೂಲ ಊರು. ಸಂತಗುಣದ ತಾತ ಕಿರಿ ವಯಸ್ಸಿನಲ್ಲೇ ಊರು-ಮನೆ ತೊರೆದು ಬರಿಗೈಲಿ ಬಂದು ಯಾದಗಿರಿ ಜಿಲ್ಲೆಯ ಶಹಾಪುರದಲ್ಲಿ ಸ್ವಾಭಿಮಾನದ ಬದುಕು ಕಟ್ಟಿಕೊಂಡರು. ಅಪ್ಪ ಶಿಕ್ಷಕರಾಗಿ ಬದುಕು ರೂಪಿಸಿಕೊಂಡರು. ನನಗೂ ಜೀವನ ಪಾಠ ಕಲಿಸಿದ 'ಗುರು' & 'ಗಾಡ್ ಫಾದರ್' ನನ್ನಪ್ಪ. ಓದು ಮತ್ತು ಬರವಣಿಗೆ ನನ್ನ ಹವ್ಯಾಸ. ಕೋಟೆ-ಕೊತ್ತಲು‌, ಕಾಡು-ಮೇಡು‌‌‌ ಸುತ್ತಾಟ, ಚಾರಣವೆಂದರೆ ಪ್ರಾಣಪ್ರೀತಿ. ಹಳೇ ಹಿಂದಿ ಹಾಡು, ಗಝಲ್, ಜನಪದ, ಭಾವಗೀತೆಗಳು ಮತ್ತು ಭಜನೆ ನನಗಿಷ್ಟ. ಕಾಲೇಜು ದಿನಗಳಲ್ಲಿದ್ದ ಕ್ರಿಕೆಟ್ ಹುಚ್ಚು ಕಡಿಮೆ ಆಗಿದೆ. ಕೋಟೆನಾಡು‌ ಚಿತ್ರದುರ್ಗ ಜಿಲ್ಲೆಯ ಟಿವಿ9 ಪ್ರತಿನಿಧಿಯಾಗಿ ಒಂದೂವರೆ ದಶಕದಿಂದ ಕಾರ್ಯ ನಿರ್ವಹಿಸುತ್ತಿದ್ದೇನೆ. 'ಹೆಣ್ಣಾಗಿದ್ದೇ ತಪ್ಪಾ?' ಅಭಿಯಾನದ ಮೂಲಕ ಮೌಢ್ಯದ ವಿರುದ್ಧ ಜಾಗೃತಿ, 'ವಿಷಾಮೃತ' ಅಭಿಯಾನದ ಮೂಲಕ ನೀರಿನ ಕುರಿತು ಸರ್ಕಾರದ ಕಣ್ತೆರೆಸುವ ಕಾರ್ಯ, 'ಕೆರೆ ಉಳಿಸಿ' ಅಭಿಯಾನದ ಮೂಲಕ ಜಲಮೂಲಗಳ ಸಂರಕ್ಷಣೆ, 'ಆಪರೇಷನ್ ಚಿನ್ನ' ಸರಣಿ ವರದಿ ಮೂಲಕ ವಂಚಕರ ಜಾಲ ಬೇಧಿಸುವ ಕರ್ತವ್ಯ, ಬುಡಕಟ್ಟು ಸಮುದಾಯಗಳ ಜೀವನ, ಸಂಸ್ಕೃತಿ, ಆಚರಣೆಗಳ ಅನಾವರಣ, ಬಯಲುಸೀಮೆಯ ರೈತರ ಸಂಕಷ್ಟ, ಭದ್ರಾ ಮೇಲ್ದಂಡೆ ಯೋಜನೆ ಅಗತ್ಯತೆ ಕುರಿತು ವರದಿ, ಭ್ರಷ್ಟರ ಮುಖವಾಡ ಬಯಲು, ಕಾವಿಧಾರಿಗಳ ಕಪಟತನ ತೆರೆದಿಡುವುದು ಸೇರಿ ಅನೇಕ ಜೀವಪರ, ಜನಪರ ವರದಿಗಾರಿಕೆಗೆ ಟಿವಿ9 ವಾಹಿನಿಯಲ್ಲಿ ಅವಕಾಶ ಸಿಕ್ಕಿದ್ದು ಹೆಮ್ಮೆಯ ಸಂಗತಿ.

Read More