ಅತಾವುಲ್ಲಾ ಹತ್ಯೆ ಪ್ರಕರಣದ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಚನ್ನಗಿರಿ ಪೊಲೀಸರು

Updated on: May 16, 2026 | 10:23 PM

ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ನಲ್ಲೂರು ಗ್ರಾಮದಲ್ಲಿ ಮಾಜಿ ಪಂಚಾಯತ್ ಸದಸ್ಯ ಅತಾವುಲ್ಲಾ ಕೊಲೆ ನಡೆದಿದೆ. ಹಣಕಾಸಿನ ವಿಚಾರ ಹಾಗೂ ಮದುವೆ ಸಂಬಂಧಿತ ದ್ವೇಷವೇ ಕೊಲೆಗೆ ಕಾರಣ ಎಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ. ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಹೆಚ್ಚಿನ ವಿಚಾರಣೆ ನಡೆಯುತ್ತಿದೆ. ಎಸ್‌ಪಿ ಶೇಖರ್ ಹೆಚ್.ಟಿ. ಅವರು ತನಿಖೆಯ ಪ್ರಗತಿ ಬಗ್ಗೆ ಮಾಹಿತಿ ನೀಡಿದ್ದಾರೆ.

ದಾವಣಗೆರೆ, ಮೇ.16: ಜಿಲ್ಲೆಯ ಚನ್ನಗಿರಿ ತಾಲೂಕಿನ ನಲ್ಲೂರು ಗ್ರಾಮದಲ್ಲಿ ನಡೆದ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಅತಾವುಲ್ಲಾ (42) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಪ್ರಮುಖ ಆರೋಪಿಗಳನ್ನು ಬಂಧಿಸಿದ್ದಾರೆ. ನಿನ್ನೆ ರಾತ್ರಿ ಸುಮಾರು 10:00-10:45ರ ಸಮಯದಲ್ಲಿ ನಲ್ಲೂರು ಗ್ರಾಮದ ಮುಖ್ಯ ರಸ್ತೆಯಲ್ಲಿ ಅತಾವುಲ್ಲಾ ಅವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಲಾಗಿತ್ತು. ಮೃತರ ಅಣ್ಣ ಶೇಖ್ ಜಾಕೀರ್ ಅವರು ನೀಡಿದ ದೂರಿನ ಮೇರೆಗೆ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಚನ್ನಗಿರಿ ಇನ್ಸ್‌ಪೆಕ್ಟರ್ ರವೀಶ್ ನೇತೃತ್ವದಲ್ಲಿ ನಡೆದ ತನಿಖೆಯಲ್ಲಿ ಶೇಖ್ ದಸ್ತಗಿರ್ (68) ಮತ್ತು ಅವರ ಮಗ ಶೇಖ್ ಜಬಿಲ್ಲ (29) ಎಂಬುವವರನ್ನು ಬಂಧಿಸಲಾಗಿದೆ. ಇವರಿಬ್ಬರೂ ಭದ್ರಾವತಿ ತಾಲೂಕಿನ ಕಾಗೆ ಕೊಡುಮಗೆ ಗ್ರಾಮದವರಾಗಿದ್ದಾರೆ. ಆರೋಪಿಗಳು ತಮ್ಮ ಕೃತ್ಯವನ್ನು ಒಪ್ಪಿಕೊಂಡಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ, ಅತಾವುಲ್ಲಾ ಅವರು ಆರೋಪಿಗಳ ಕುಟುಂಬಕ್ಕೆ ಎರಡು ಲಕ್ಷ ರೂಪಾಯಿ ಸಾಲ ಮರುಪಾವತಿಸದಿರುವುದು ಮತ್ತು ಮದುವೆ ವಿಚಾರಕ್ಕೆ ಸಂಬಂಧಿಸಿದ ದ್ವೇಷ ಕೊಲೆಗೆ ಪ್ರಮುಖ ಕಾರಣವಾಗಿದೆ. ಪೊಲೀಸರು ಕೊಲೆಗೆ ಬಳಸಿದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳುವ ಕಾರ್ಯದಲ್ಲಿ ತೊಡಗಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: May 16, 2026 10:21 PM
Follow Us