ಅತ್ತ… ಇತ್ತ… ಜಿಗಿದು, ಹಾರಿ ಅದ್ಭುತ ಕ್ಯಾಚ್ ಹಿಡಿದ ಡೆವಾಲ್ಡ್ ಬ್ರೆವಿಸ್

|

Updated on: Jan 12, 2025 | 12:30 PM

Dewald Brevis Catch In SA20: ಸೌತ್ ಆಫ್ರಿಕಾ ಟಿ20 ಲೀಗ್​ನಲ್ಲಿ ಯುವ ಆಟಗಾರ ಡೆವಾಲ್ಡ್ ಬ್ರೆವಿಸ್ ಹಿಡಿದ ಕ್ಯಾಚ್ ವಿಡಿಯೋವೊಂದು ಭಾರೀ ವೈರಲ್ ಆಗಿದೆ. ಹೀಗೆ ವೈರಲ್ ಆಗಲು ಮುಖ್ಯ ಕಾರಣ ಬ್ರೆವಿಸ್ ಅವರ ಕ್ಯಾಚ್ ಟೈಮಿಂಗ್. ಬೌಂಡರಿ ಲೈನ್ ಬಳಿ ನಿಂತು ಜಿಗಿದು ಚೆಂಡನ್ನು ಹಿಡಿದ ಡೆವಾಲ್ಡ್ ಆ ಬಳಿಕ ಡೈವಿಂಗ್ ಮೂಲಕ ಕ್ಯಾಚ್ ಪೈರ್ಣಗೊಳಿಸಿದರು.

ಬೇಬಿ ಎಬಿ ಖ್ಯಾತಿಯ ಡೆವಾಲ್ಡ್ ಬ್ರೆವಿಸ್ ಅತ್ಯದ್ಭುತ ಕ್ಯಾಚ್ ಹಿಡಿಯುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಸೌತ್ ಆಫ್ರಿಕಾದಲ್ಲಿ ನಡೆಯುತ್ತಿರುವ ಎಸ್​ಎ20 ಲೀಗ್​ನ 4ನೇ ಪಂದ್ಯದಲ್ಲಿ ಈ ಅದ್ಭುತ ಫೀಲ್ಡಿಂಗ್ ಕಂಡು ಬಂದಿದೆ. ಈ ಮ್ಯಾಚ್​ನಲ್ಲಿ ಎಂಐ ಕೇಪ್​ಟೌನ್ ಹಾಗೂ ಜೋಬರ್ಗ್ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಿದ್ದವು.

ಮೊದಲು ಬ್ಯಾಟ್ ಮಾಡಿದ ಎಂಐ ಕೇಪ್​ಟೌನ್ ತಂಡವು 20 ಓವರ್​ಗಳಲ್ಲಿ 6 ವಿಕೆಟ್ ಕಳೆದುಕೊಂಡು 140 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಲು ಜೋಬರ್ಗ್ ಸೂಪರ್ ಕಿಂಗ್ಸ್ ಪರ ನಾಯಕ ಫಾಫ್ ಡುಪ್ಲೆಸಿಸ್ ಆರಂಭಿಕರಾಗಿ ಕಣಕ್ಕಿಳಿದಿದ್ದರು.

22 ಎಸೆತಗಳನ್ನು ಎದುರಿಸಿದ ಫಾಫ್ ಡುಪ್ಲೆಸಿಸ್ 1 ಸಿಕ್ಸ್ ಹಾಗೂ 4 ಫೋರ್​ಗಳೊಂದಿಗೆ 30 ರನ್ ಬಾರಿಸಿ ಅಪಾಯಕಾರಿಯಾಗುವ ಸೂಚನೆ ನೀಡಿದ್ದರು. ಈ ಹಂತದಲ್ಲಿ ದಾಳಿಗಿಳಿದ ಕಗಿಸೊ ರಬಾಡ ಎಸೆತವನ್ನು ಫಾಫ್ ಡೀಪ್ ಕವರ್​ನತ್ತ ಬಾರಿಸಿದ್ದರು. ಅಲ್ಲೇ ಫೀಲ್ಡಿಂಗ್​ನಲ್ಲಿ ಡೆವಾಲ್ಡ್ ಬ್ರೆವಿಸ್ ಜಿಗಿಯುವ ಮೂಲಕ ಚೆಂಡನ್ನು ಹಿಡಿದರು.

ಆದರೆ ಜಿಗಿತದೊಂದಿಗೆ ನಿಯಂತ್ರಣ ತಪ್ಪಿದ ಡೆವಾಲ್ಡ್ ಬ್ರೆವಿಸ್ ಚೆಂಡನ್ನು ಗಾಳಿಯಲ್ಲಿ ಎಸೆದು ಬೌಂಡರಿ ಲೈನ್​ ದಾಟಿದರು. ಅಲ್ಲದೆ ಕ್ಷಣಾರ್ಧದಲ್ಲೇ ಮತ್ತೆ ಬೌಂಡರಿ ಒಳಗೆ ಡೈವ್ ಹೊಡೆಯುವ ಮೂಲಕ ಚೆಂಡನ್ನು ಹಿಡಿದರು. ಈ ಅದ್ಭುತ ಕ್ಯಾಚ್ ವಿಡಿಯೋ ಇದೀಗ ಭಾರೀ ವೈರಲ್ ಆಗಿದ್ದು, ಬೇಬಿ ಎಬಿಯ ಫೀಲ್ಡಿಂಗ್​ಗೆ ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ.

ಇನ್ನು ಜೋಬರ್ಗ್ ಸೂಪರ್ ಕಿಂಗ್ಸ್ ತಂಡವು 11.3 ಓವರ್​ಗಳಲ್ಲಿ 82 ರನ್​ಗಳಿಸಿದ್ದ ವೇಳೆ ಮಳೆ ಬಂದಿದ್ದರಿಂದ ಪಂದ್ಯವನ್ನು ಸ್ಥಗಿತಗೊಳಿಸಲಾಯಿತು. ಈ ವೇಳೆ ಡಕ್​ವರ್ತ್ ಲೂಯಿಸ್ ನಿಯಮದ ಪ್ರಕಾರ ಜೋಬರ್ಗ್ ಸೂಪರ್ ಕಿಂಗ್ 6 ರನ್​​ಗಳಿಂದ ಮುಂದಿದ್ದರಿಂದ JSK ತಂಡವನ್ನು ವಿಜಯಿ ಎಂದು ಘೋಷಿಸಲಾಯಿತು.