ಅನೂಜ್ ರಾವತ್ ಆರ್ಭಟ: ದಾಖಲೆಯ ರನ್ ಚೇಸ್

Updated on: Aug 09, 2025 | 12:32 PM

DPL 2025: ಈ ಗೆಲುವಿನೊಂದಿಗೆ ಡೆಲ್ಲಿ ಪ್ರೀಮಿಯರ್ ಲೀಗ್​ನಲ್ಲಿ ಗರಿಷ್ಠ ಸ್ಕೋರ್ ಚೇಸ್ ಮಾಡಿದ ದಾಖಲೆಯನ್ನು ಈಸ್ಟ್ ಡೆಲ್ಲಿ ರೈಡರ್ಸ್ ತನ್ನದಾಗಿಸಿಕೊಂಡಿದೆ. ಇದಕ್ಕೂ ಮುನ್ನ ಈ ದಾಖಲೆ ವೆಸ್ಟ್ ಡೆಲ್ಲಿ ಲಯನ್ಸ್ ತಂಡದ ಹೆಸರಿನಲ್ಲಿತ್ತು. ಈಸ್ಟ್ ಡೆಲ್ಲಿ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ವೆಸ್ಟ್ ಡೆಲ್ಲಿ ಲಯನ್ಸ್ ತಂಡವು 209 ರನ್​ಗಳ ಗುರಿ ಬೆನ್ನತ್ತುವ ಮೂಲಕ ಈ ದಾಖಲೆ ನಿರ್ಮಿಸಿದ್ದರು.

ಡೆಲ್ಲಿ ಪ್ರೀಮಿಯರ್ ಲೀಗ್​ನ 12ನೇ ಪಂದ್ಯದಲ್ಲಿ ಈಸ್ಟ್ ಡೆಲ್ಲಿ ರೈಡರ್ಸ್ ತಂಡ ಭರ್ಜರಿ ಜಯ ಸಾಧಿಸಿದೆ. ಅದು ಕೂಡ ದಾಖಲೆಯ ರನ್ ಚೇಸ್ ಮಾಡುವ ಮೂಲಕ ಎಂಬುದು ವಿಶೇಷ. ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಈಸ್ಟ್ ಡೆಲ್ಲಿ ರೈಡರ್ಸ್ ತಂಡದ ನಾಯಕ ಅನೂಜ್ ರಾವತ್ ಬೌಲಿಂಗ್ ಆಯ್ದುಕೊಂಡಿದ್ದರು.

ಅದರಂತೆ ಮೊದಲು ಬ್ಯಾಟ್ ಮಾಡಿ ಔಟರ್ ಡೆಲ್ಲಿ ವಾರಿಯರ್ಸ್ ಪರ ಪ್ರಿಯಾಂಶ್ ಆರ್ಯ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಕೇವಲ 56 ಎಸೆತಗಳನ್ನು ಎದುರಿಸಿದ ಪ್ರಿಯಾಂಶ್ 9 ಭರ್ಜರಿ ಸಿಕ್ಸ್ ಹಾಗೂ 7 ಫೋರ್​ಗಳೊಂದಿಗೆ 111 ರನ್ ಚಚ್ಚಿದರು. ಈ ಶತಕದ ನೆರವಿನೊಂದಿಗೆ ಔಟರ್ ಡೆಲ್ಲಿ ವಾರಿಯರ್ಸ್ ತಂಡವು 20 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು 231 ರನ್ ಕಲೆಹಾಕಿತು.

ಈ ಬೃಹತ್ ಗುರಿಯನ್ನು ಬೆನ್ನತ್ತಿದ ಈಸ್ಟ್ ಡೆಲ್ಲಿ ರೈಡರ್ಸ್​ ತಂಡಕ್ಕೆ ಆರಂಭಿಕ ದಾಂಡಿಗ ಅರ್ಪಿತ್ ರಾಣಾ (79) ಭರ್ಜರಿ ಆರಂಭ ಒದಗಿಸಿದ್ದರು. ಇದಾದ ಬಳಿಕ ಬ್ಯಾಕ್ ಟು ಬ್ಯಾಕ್ ವಿಕೆಟ್ ಕಳೆದುಕೊಂಡರೂ ಮಧ್ಯಮ ಕ್ರಮಾಂಕದಲ್ಲಿ ಅನೂಜ್ ರಾವತ್ ಆರ್ಭಟಿಸಿದರು.

ಕೇವಲ 35 ಎಸೆತಗಳನ್ನು ಎದುರಿಸಿದ ಅನೂಜ್ ರಾವತ್ 9 ಸಿಕ್ಸ್ ಹಾಗೂ 2 ಫೋರ್​ಗಳೊಂದಿಗೆ 84 ರನ್​ ಚಚ್ಚಿದರು. ಈ ಸ್ಫೋಟಕ ಅರ್ಧಶತಕದ ನೆರವಿನೊಂದಿಗೆ ಈಸ್ಟ್ ಡೆಲ್ಲಿ ರೈಡರ್ಸ್ ತಂಡವು 19.2 ಓವರ್​ಗಳಲ್ಲಿ 235 ರನ್ ಬಾರಿಸಿ 5 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ.

ಈ ಗೆಲುವಿನೊಂದಿಗೆ ಡೆಲ್ಲಿ ಪ್ರೀಮಿಯರ್ ಲೀಗ್​ನಲ್ಲಿ ಗರಿಷ್ಠ ಸ್ಕೋರ್ ಚೇಸ್ ಮಾಡಿದ ದಾಖಲೆಯನ್ನು ಈಸ್ಟ್ ಡೆಲ್ಲಿ ರೈಡರ್ಸ್ ತನ್ನದಾಗಿಸಿಕೊಂಡಿದೆ. ಇದಕ್ಕೂ ಮುನ್ನ ಈ ದಾಖಲೆ ವೆಸ್ಟ್ ಡೆಲ್ಲಿ ಲಯನ್ಸ್ ತಂಡದ ಹೆಸರಿನಲ್ಲಿತ್ತು. ಈಸ್ಟ್ ಡೆಲ್ಲಿ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ವೆಸ್ಟ್ ಡೆಲ್ಲಿ ಲಯನ್ಸ್ ತಂಡವು 209 ರನ್​ಗಳ ಗುರಿ ಬೆನ್ನತ್ತುವ ಮೂಲಕ ಈ ದಾಖಲೆ ನಿರ್ಮಿಸಿದ್ದರು. ಇದೀಗ 232 ರನ್​ಗಳ ಗುರಿ ಬೆನ್ನತ್ತಿ ಗೆದ್ದು ಈಸ್ಟ್ ಡೆಲ್ಲಿ ರೈಡರ್ಸ್ ತಂಡವು ಭರ್ಜರಿ ದಾಖಲೆ ಬರೆದಿದೆ.

 

Published on: Aug 09, 2025 12:11 PM