ಚಿನ್ನದ ಹುಡುಗ ನೀರಜ್ ಚೋಪ್ರಾಗೆ ಗೌರವ ಲೆಫ್ಟಿನೆಂಟ್ ಕರ್ನಲ್ ಹುದ್ದೆ ಪ್ರದಾನ

Updated on: Oct 22, 2025 | 5:53 PM

Neeraj Chopra Honored: ಭಾರತದ ಜಾವೆಲಿನ್ ಹೀರೋ ನೀರಜ್ ಚೋಪ್ರಾ ಅವರಿಗೆ ಪ್ರಾದೇಶಿಕ ಸೇನೆಯಲ್ಲಿ ಗೌರವ ಲೆಫ್ಟಿನೆಂಟ್ ಕರ್ನಲ್ ಹುದ್ದೆ ಪ್ರದಾನ ಮಾಡಲಾಗಿದೆ. ರಾಷ್ಟ್ರಕ್ಕೆ ಅವರ ಕೊಡುಗೆಗಳನ್ನು ಗುರುತಿಸಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಈ ಗೌರವ ನೀಡಿದರು. ಟೋಕಿಯೊ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ನೀರಜ್, ಭಾರತೀಯ ಸೇನೆಯೊಂದಿಗೆ ದೀರ್ಘಕಾಲದ ನಂಟನ್ನು ಹೊಂದಿದ್ದು, ಈ ಮಹತ್ವದ ಗೌರವ ಅವರ ಸಾಧನೆಗಳಿಗೆ ಮತ್ತಷ್ಟು ಮೆರುಗು ನೀಡಿದೆ.

ಭಾರತದ ಗೋಲ್ಡನ್ ಬಾಯ್ ಎಂದೇ ಖ್ಯಾತರಾಗಿರುವ ಜಾವೆಲಿನ್ ಥ್ರೋ ಹೀರೋ ನೀರಜ್ ಚೋಪ್ರಾ ಅವರಿಗೆ ಮಹತ್ವದ ಗೌರವ ಸಂದಿದೆ. ರಾಷ್ಟ್ರಕ್ಕೆ ನೀಡಿದ ಕೊಡುಗೆಗಳಿಗಾಗಿ, ಅವರಿಗೆ ಪ್ರಾದೇಶಿಕ ಸೇನೆಯಲ್ಲಿ ಗೌರವ ಲೆಫ್ಟಿನೆಂಟ್ ಕರ್ನಲ್ ಹುದ್ದೆಯನ್ನು ಪ್ರದಾನ ಮಾಡಲಾಗಿದೆ. ದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ಪ್ರಾದೇಶಿಕ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ನೀರಜ್​ಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಲೆಫ್ಟಿನೆಂಟ್ ಕರ್ನಲ್ ಗೌರವ ಹುದ್ದೆಯ ಚಿಹ್ನೆಯನ್ನು ಪ್ರದಾನ ಮಾಡಿದರು. ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಮತ್ತು ಪಡೆಯ ಹಲವಾರು ಹಿರಿಯ ಅಧಿಕಾರಿಗಳು ಸಹ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಮತ್ತು ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದ ನೀರಜ್ ಚೋಪ್ರಾ ಕಳೆದ ಒಂಬತ್ತು ವರ್ಷಗಳಿಂದ ಭಾರತೀಯ ಸೇನೆಯಲ್ಲಿದ್ದಾರೆ. ಆಗಸ್ಟ್ 26, 2016 ರಂದು ನೈಬ್ ಸುಬೇದಾರ್ ಆಗಿ ಭಾರತೀಯ ಸೇನೆಯನ್ನು ಸೇರಿದ್ದ ನಿರಾಜ್​ಗೆ 2021 ರಲ್ಲಿ ಸುಬೇದಾರ್ ಮತ್ತು 2022 ರಲ್ಲಿ ಸುಬೇದಾರ್ ಮೇಜರ್ ಆಗಿ ಬಡ್ತಿ ಪಡೆದಿದ್ದರು. ಡಿಸೆಂಬರ್ 24, 1997 ರಂದು ಹರಿಯಾಣದ ಪಾಣಿಪತ್‌ನ ಖಂದ್ರಾ ಗ್ರಾಮದಲ್ಲಿ ಜನಿಸಿದ ನೀರಜ್ ಚೋಪ್ರಾ, 2020 ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪುರುಷರ ಜಾವೆಲಿನ್ ಥ್ರೋನಲ್ಲಿ ಭಾರತಕ್ಕೆ ಮೊದಲ ಒಲಿಂಪಿಕ್ ಚಿನ್ನದ ಪದಕವನ್ನು ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿದ್ದರು.

ದೆಹಲಿಯಲ್ಲಿ ನಡೆದ ಈ ಸಮಾರಂಭದಲ್ಲಿ ನೀರಜ್ ಅವರ ತಂದೆ ಸತೀಶ್ ಚೋಪ್ರಾ, ತಾಯಿ ಸರೋಜ್ ದೇವಿ, ಪತ್ನಿ ಹಿಮಾನಿ ಮತ್ತು ಚಿಕ್ಕಪ್ಪ ಭೀಮ್ ಚೋಪ್ರಾ ಉಪಸ್ಥಿತರಿದ್ದರು. ನೀರಜ್ ಚೋಪ್ರಾ ಅವರ ಅಥ್ಲೆಟಿಕ್ಸ್ ಸಾಧನೆಗಳಿಗಾಗಿ ಅರ್ಜುನ ಪ್ರಶಸ್ತಿ ಮತ್ತು ಖೇಲ್ ರತ್ನ ಪ್ರಶಸ್ತಿಯನ್ನು ಸಹ ನೀಡಲಾಗಿದೆ. ನೀರಜ್ ಚೋಪ್ರಾ ಕಳೆದ ತಿಂಗಳು ನಡೆದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಸ್ಪರ್ಧಿಸಿದ್ದರು. ಆದಾಗ್ಯೂ, ಪಂದ್ಯಾವಳಿಯಲ್ಲಿ ಅವರ ಪ್ರದರ್ಶನ ನಿರಾಶಾದಾಯಕವಾಗಿತ್ತು. ಜಾವೆಲಿನ್ ಥ್ರೋ ಫೈನಲ್‌ನಲ್ಲಿ ಅವರು ಕೇವಲ 84.03 ಮೀಟರ್ ದೂರ ಜಾವೆಲಿನ್ ಎಸೆದು, ಅಗ್ರ ಆರರಲ್ಲಿ ಸ್ಥಾನ ಪಡೆಯುವಲ್ಲಿಯೂ ವಿಫಲರಾದರು. ಹೀಗಾಗಿ ನೀರಜ್ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ ಪ್ರಶಸ್ತಿಯನ್ನು ಉಳಿಸಿಕೊಳ್ಳುವಲ್ಲಿ ವಿಫಲರಾದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Oct 22, 2025 05:49 PM