ನಕಲಿ ಔಷಧಿ ದಂಧೆಯ ಅಸಲಿ ಕಿಂಗ್‌ಪಿನ್ ಕೃಪಾ ಫಾರ್ಮಾ ವೀರೇಶ್: ಎಸ್‌ಐಟಿ ತನಿಖೆಯಲ್ಲಿ ಸ್ಫೋಟಕ ಮಾಹಿತಿ ಬಯಲು

Edited By:

Updated on: Sep 15, 2026 | 7:27 AM

ನಕಲಿ ಔಷಧಿ ಜಾಲದ ಅಸಲಿ ಕಿಂಗ್‌ಪಿನ್ ವೀರೇಶ್ ಮುಖವಾಡ ಕಳಚಿ ಬಿದ್ದಿದೆ. ಬೆಂಗಳೂರಿನ ಕೃಪಾ ಫಾರ್ಮಾ ಮಾಲೀಕ ವೀರೇಶ್, ವರ್ಷಕ್ಕೆ 15 ಕೋಟಿಗೂ ಹೆಚ್ಚು ವಹಿವಾಟು ನಡೆಸುತ್ತಿದ್ದ ಈ ದಂಧೆಯ ಮುಖ್ಯಸ್ಥನೆಂದು ಎಸ್ಐಟಿ ತನಿಖೆಯಲ್ಲಿ ಬಯಲಾಗಿದೆ. ಹೊರ ರಾಜ್ಯಗಳಿಗೂ ವಿಸ್ತರಿಸಿದ್ದ ಈ ಜಾಲಕ್ಕೆ ಟರ್ಕಿ ಲಿಂಕ್ ಕೂಡಾ ಇತ್ತು ಎನ್ನಲಾಗಿದೆ.

ಬೆಂಗಳೂರು, ಸೆ.15: ನಕಲಿ ಔಷಧಿ ಜಾಲ ಕರ್ನಾಟಕವನ್ನೇ ಬೆಚ್ಚಿ ಬೀಳಿಸಿತ್ತು. ಈಗ ಈ ದಂಧೆಯ ಅಸಲಿ ಕಿಂಗ್‌ಪಿನ್ ವೀರೇಶ್ ಮುಖವಾಡ ಕಳಚಿ ಬಿದ್ದಿದೆ. ಆರೋಪಿಗಳು ನಕಲಿ ಔಷಧಿ ಮಾರಾಟದಿಂದಲೇ ಕೋಟಿ ಕೋಟಿ ಹಣ ಗಳಿಸಿರುವುದು ಬಯಲಾಗಿದೆ. ದೊಡ್ಡೇರಿ ಫಾರ್ಮ್ ಹೌಸ್‌ನಲ್ಲಿ ನಕಲಿ ಮೆಡಿಸಿನ್ ದಂಧೆ ಪತ್ತೆಯಾದಾಗಿನಿಂದ, ಇದರ ಮುಖ್ಯಸ್ಥ ಯಾರು ಎಂಬುದು ಎಸ್‌ಐಟಿಗೆ ದೊಡ್ಡ ಸವಾಲಾಗಿತ್ತು. ಇದೀಗ ತನಿಖೆಯಲ್ಲಿ ಬೆಂಗಳೂರಿನ ಕೃಪಾ ಫಾರ್ಮಾ ಮಾಲೀಕ ವೀರೇಶ್ ಈ ದಂಧೆಗೆ ಕಿಂಗ್‌ಪಿನ್ ಎಂಬ ಸ್ಫೋಟಕ ಮಾಹಿತಿ ಹೊರಬಿದ್ದಿದೆ. ಪ್ರಮುಖ ಆರೋಪಿ ಪ್ರಶಾಂತ್ ಜೊತೆ ಮೆಡಿಕಲ್ ರೆಪ್ ಆಗಿ ಕೆಲಸ ಮಾಡುತ್ತಿದ್ದ ವೀರೇಶ್, ನಂತರ ವ್ಯವಸ್ಥಿತವಾಗಿ ನಕಲಿ ಮೆಡಿಸಿನ್ ಜಾಲವನ್ನು ರೂಪಿಸಿದ್ದಾನೆ. ಕೆಲ ವರ್ಷಗಳಿಂದ ತನ್ನದೇ ಫಾರ್ಮಾ ತೆರೆದು, ದಂಧೆಯಿಂದ ವರ್ಷಕ್ಕೆ 15 ಕೋಟಿಗೂ ಹೆಚ್ಚು ಟರ್ನೋವರ್ ಮಾಡಿರುವುದು ಗೊತ್ತಾಗಿದೆ. ಎಸ್‌ಐಟಿ ತನಿಖೆಯಲ್ಲಿ ಪ್ರಶಾಂತ್ ಮತ್ತು ಆತನ ತಂಡಕ್ಕೆ ವೀರೇಶನೇ ಮಾತ್ರೆ, ಸಿರಪ್ ಮತ್ತು ಔಷಧಿಗಳನ್ನು ಸರಬರಾಜು ಮಾಡುತ್ತಿದ್ದ ಎಂಬುದು ದೃಢಪಟ್ಟಿದೆ. 80ಕ್ಕೂ ಹೆಚ್ಚು ಮೆಡಿಕಲ್ ಶಾಪ್ ಮತ್ತು ಖಾಸಗಿ ಆಸ್ಪತ್ರೆಗಳಿಗೆ, ಬೆಂಗಳೂರಿನ ಆಸ್ಪತ್ರೆಗಳೂ ಸೇರಿದಂತೆ, ಈ ನಕಲಿ ಔಷಧಿಗಳನ್ನು ಪೂರೈಕೆ ಮಾಡಲಾಗಿದೆ. ಹೊರ ರಾಜ್ಯಗಳಾದ ಹೈದರಾಬಾದ್ ಸೇರಿದಂತೆ ಹಲವೆಡೆ ಎಸ್ಐಟಿ ದಾಳಿ ನಡೆಸಿದ್ದು, ಈ ಜಾಲದ ವಿಸ್ತರಣೆಯ ಬಗ್ಗೆ ತನಿಖೆ ಮುಂದುವರೆದಿದೆ. ವೀರೇಶನನ್ನು ಎಸ್ಐಟಿ ತೀವ್ರ ವಿಚಾರಣೆಗೆ ಒಳಪಡಿಸಿದ್ದು, ಮತ್ತಷ್ಟು ಸ್ಫೋಟಕ ಮಾಹಿತಿ ಸಿಗುವ ಸಾಧ್ಯತೆಯಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Sep 15, 2026 05:58 AM
Loading...
Unable to load recommendations.
Follow Us