ಬೆಳಗಾವಿ: ಫೈನಾನ್ಸ್ ಕಿರುಕುಳಕ್ಕೆ ಬೇಸತ್ತು ರೈತ ಆತ್ಮಹತ್ಯೆ
ಬೆಳಗಾವಿಯ ಕಡೋಲಿ ಗ್ರಾಮದಲ್ಲಿ 78 ವರ್ಷದ ರೈತ ಸಾತೇರಿ ಹೊನ್ನಪ್ಪ ರುಟಕುಟೆ ಅವರು ಮಣ್ಣೂರು ಕೋ-ಆಪರೇಟಿವ್ ಫೈನಾನ್ಸ್‌ನ ಕಿರುಕುಳದಿಂದ ಜೀವ ಕಳೆದುಕೊಂಡಿದ್ದಾರೆ. 12 ಲಕ್ಷ ರೂ. ಸಾಲದಲ್ಲಿ 4 ಲಕ್ಷ ರೂ. ಮರುಪಾವತಿಸಿದ್ದರೂ, ಬಡ್ಡಿ ಸಮೇತ 16 ಲಕ್ಷ ರೂ. ಪಾವತಿಸುವಂತೆ ಫೈನಾನ್ಸ್ ಸಿಬ್ಬಂದಿ ಒತ್ತಡ ಹೇರಿ ಸಾರ್ವಜನಿಕವಾಗಿ ಅವಮಾನಿಸಿದ್ದಾಗಿ ಆರೋಪಿಸಲಾಗಿದೆ. ಈ ಬಗ್ಗೆ ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳಗಾವಿ, ನವೆಂಬರ್ 13: ಫೈನಾನ್ಸ್ ಕಿರುಕುಳಕ್ಕೆ ಬೇಸತ್ತು ರೈತ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿ ತಾಲೂಕಿನ ಕಡೋಲಿ ಗ್ರಾಮದಲ್ಲಿ ನಡೆದಿದೆ. ಸಾತೇರಿ ಹೊನ್ನಪ್ಪ ರುಟಕುಟೆ (78) ಮೃತ ದುರ್ದೈವಿಯಾಗಿದ್ದು, ಮಣ್ಣೂರ ಗ್ರಾಮದ ಕೋ ಆಪರೇಟಿವ್ ಫೈನಾನ್ಸ್ ಮೇಲೆ ಕಿರುಕುಳದ ಆರೋಪ ಕೇಳಿಬಂದಿದೆ. ರೈತ ಸಾತೇರಿ ಹೊನ್ನಪ್ಪ ರುಟಕುಟೆ ಫೈನಾನ್ಸ್ ನಲ್ಲಿ 12 ಲಕ್ಷ ರೂಪಾಯಿ ಸಾಲ ತೆಗೆದುಕೊಂಡಿದ್ದರು. ಆ ಪೈಕಿ 4 ಲಕ್ಷ ರೂ. ಮರುಪಾವತಿ ಮಾಡಿದ್ದರು. ಹೀಗಿದ್ದರೂ ಬಡ್ಡಿ ಮತ್ತು ಅಸಲು ಸೇರಿ ಮತ್ತೆ 16 ಲಕ್ಷ ಪಾವತಿಸುವಂತೆ ಫೈನಾನ್ಸ್ ಕಿರುಕುಳ ನೀಡಿದೆ. ಸಾಲ ತೀರಿಸದೆ ಇದ್ದರೆ ಮನೆ ಹರಾಜು ಹಾಕುವುದಾಗಿ ಬೆದರಿಕೆ ಹಾಕಿದ್ದಲ್ಲದೆ, ಫೈನಾನ್ಸ್ ಸಿಬ್ಬಂದಿ ಊರಿನಲ್ಲಿ ಡಂಗುರ ಸಾರಿದ್ದಾರೆ. ಹೀಗಾಗಿ ಮರ್ಯಾದೆ ಹೋಯಿತು ಎಂದು ಮನನೊಂದು ಸಾತೇರಿ ಹೊನ್ನಪ್ಪ ರುಟಕುಟೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಫೈನಾನ್ಸ್ ಸಿಬ್ಬಂದಿಯೇ ಸಾವಿಗೆ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದು, ಈ ಬಗ್ಗೆ ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
