ಅಮಿತ್ ಶಾ ಹೇಳಿಕೆ ಖಂಡಿಸಿ ಗದಗ-ಬೆಟಗೇರಿ ಬಂದ್: ಶಾಲಾ-ಕಾಲೇಜುಗಳಿಗೆ ರಜೆ
ಕೇಂದ್ರ ಸಚಿವ ಅಮಿತ್ ಶಾ ಅವರು ಡಾ. ಬಿ.ಆರ್.ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿದ್ದಾರೆ ಎಂದು ಆರೋಪಿಸಿ ದಲಿತ ಸಂಘಟನೆಗಳು ಗದಗ-ಬೆಟಗೇರಿ ಬಂದ್‌ಗೆ ಕರೆ ನೀಡಿವೆ. ವಿವಿಧ ಸಂಘಟನೆಗಳು ಅಮಿತ್ ಶಾ ಅವರ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟಿಸಿದವು. ಬಂದ್‌ನಿಂದಾಗಿ ನಗರ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಗದಗ, ಡಿಸೆಂಬರ್ 24: ಸಂಸತ್ನಲ್ಲಿ ಕೇಂದ್ರ ಸಚಿವ ಅಮಿತ್ ಶಾ (Amit Shah) ಅವರು ಡಾ. ಬಿಆರ್ ಅಂಬೇಡ್ಕರ್ (BR Ambedkar) ಅವರಿಗೆ ಅಪಮಾನ ಮಾಡಿದ್ದಾರೆ ಅಂತ ವಿವಿಧ ದಲಿತಪರ ಸಂಘಟನೆಗಳು ಮಂಗಳವಾರ (ಡಿ.24) ಗದಗ-ಬೆಟಗೇರಿ ಅವಳಿ ನಗರ ಸಂಪೂರ್ಣ ಬಂದ್‌ಗೆ ಕರೆ ಕೊಟ್ಟಿವೆ. ಬಂದ್‌ಗೆ ಗದಗ ಜಿಲ್ಲಾ ಕಾಂಗ್ರೆಸ್ ಕಮಿಟಿ, ಲಿಂಗಾಯತ ಪ್ರಗತಿಶೀಲ ಸಂಘ, ಕನ್ನಡಪರ ಸಂಘಟನೆಗಳು, ವ್ಯಾಪಾರಿ ಸಂಘಟನೆಗಳು ಸಂಪೂರ್ಣ ಬೆಂಬಲ ವ್ಯಕ್ತಪಡಿಸಿವೆ.
ಅಮಿತ್ ಶಾ ಅವರ ವಿರುದ್ಧ ವಿವಿಧ ಸಂಘಟನೆಗಳು ನಗರದಲ್ಲಿ ಪ್ರತಿಭಟನೆ ನಡೆಸುತ್ತಿವೆ. ಸಂಜೆ 6 ಗಂಟೆಯವರೆಗೆ ಅವಳಿ ನಗರ ಬಂದ್ ಇರಲಿದೆ. ಸಂಘಟನೆಗಳು ಅಮಿತ್ ಶಾ ಅವರ ರಾಜಿನಾಮೆ ಆಗ್ರಹಿಸಿವೆ. ಗದಗ ನಗರದ ಮುಳಗುಂದ ನಾಕಾ ಬಳಿ ಹುಬ್ಬಳ್ಳಿ ರಸ್ತೆಯಲ್ಲಿ ಮತ್ತು ಬೆಟಗೇರಿಯಲ್ಲಿ ರೋಣ ರಸ್ತೆ ತಡೆದು ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದವು. ಬಂದ್ ಹಿನ್ನೆಲೆ ಗದಗ-ಬೆಟಗೇರಿ ನಗರದ ತರಕಾರಿ ಮಾರುಕಟ್ಟೆ ಸ್ಥಬ್ದವಾಗಿದೆ.
ಇದನ್ನೂ ಓದಿ: ಅಮಿತ್ ಶಾ ಹೇಳಿಕೆ ಖಂಡಿಸಿ ಕಲಬುರಗಿ ಬಂದ್: ಬಸ್ಗಳಿಲ್ಲದೆ ನಿಲ್ದಾಣ ಖಾಲಿ
ವಿವಿಧ ಸಂಘಟನೆಗಳು ಎನ್ಡಬ್ಲೂಕೆಆರ್ಟಿಸಿ ಡಿಪೋ ಮುತ್ತಿಗೆ ಹಾಕಿ ಪ್ರತಿಭಟಿಸಿದವು. ಬಸ್ ಸಂಚಾರಕ್ಕೆ ಅಣಿಯಾಗುತ್ತಿದ್ದ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತವಾಯಿತು. ಇದರಿಂದ ಪ್ರಯಾಣಿಕರು ಪರದಾಡಿದರು. ಶಾಲಾ-ಕಾಲೇಜು ವಿದ್ಯಾರ್ಥಿಗಳು, ಪ್ರಯಾಣಿಕರಿಗೆ ಬಂದ್ ಬಿಸಿ ತಟ್ಟಿದೆ. ಬಂದ್ ಹಿನ್ನೆಲೆಯಲ್ಲಿ ಗದಗ-ಬೆಟಗೇರಿ ನಗರದ ಶಾಲೆಗಳಿಗೆ ರಜೆ ನೀಡಲಾಗಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ