ಅಂಬೇಡ್ಕರ್ ವಿವಾದ; ಅಮಿತ್ ಶಾ ವಿರುದ್ಧ ಸಂಸತ್ನಲ್ಲಿ ವಿಶೇಷ ಹಕ್ಕು ನೋಟಿಸ್ ಸಲ್ಲಿಸಿದ ಮಲ್ಲಿಕಾರ್ಜುನ ಖರ್ಗೆ
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ರಾಜ್ಯಸಭೆಗೆ ನೀಡಿದ ನೋಟಿಸ್‌ನಲ್ಲಿ ಗೃಹ ಸಚಿವ ಅಮಿತ್ ಶಾ ಅವರ ಅಂಬೇಡ್ಕರ್ ಕುರಿತ ಹೇಳಿಕೆಯಿಂದ ಬಿಆರ್ ಅಂಬೇಡ್ಕರ್ ಅವರಿಗೆ ಅವಮಾನವಾಗಿದೆ ಎಂದು ಆರೋಪಿಸಿದ್ದಾರೆ. ಅಮಿತ್ ಶಾ ಮಂಗಳವಾರ ರಾಜ್ಯಸಭೆ ಅಧಿವೇಶನದಲ್ಲಿ ಮಾತನಾಡುವಾಗ, ಅಂಬೇಡ್ಕರ್ ಅಂಬೇಡ್ಕರ್ ಎಂದು ನೂರು ಬಾರಿ ಜಪ ಮಾಡುವ ಬದಲು ದೇವರ ಜಪವನ್ನಾದರೂ ಮಾಡಿದ್ದರೆ ನಿಮಗೆಲ್ಲರಿಗೂ ಸ್ವರ್ಗ ಪ್ರಾಪ್ತಿಯಾಗುತ್ತಿತ್ತು ಎಂದು ಲೇವಡಿ ಮಾಡಿದ್ದರು.
ನವದೆಹಲಿ: ಡಿಸೆಂಬರ್ 17ರಂದು ರಾಜ್ಯಸಭೆಯಲ್ಲಿ ಬಿ.ಆರ್ ಅಂಬೇಡ್ಕರ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಕ್ಕಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಇಂದು ವಿಶೇಷ ಹಕ್ಕು ನೋಟಿಸ್ ಸಲ್ಲಿಸಿದ್ದಾರೆ. ಅಮಿತ್ ಶಾ ಅವರಿಂದ ಸಂವಿಧಾನದ ಶಿಲ್ಪಿಗೆ ಅವಮಾನವಾಗಿದೆ. ಮತ್ತು ಅವರು ಸದನದ ನಿಯಮವನ್ನು ಉಲ್ಲಂಘನೆ ಮಾಡಿದ್ದಾರೆ ಎಂದು ಮಲ್ಲಿಕಾರ್ಜುನ ಖರ್ಗೆ ಟೀಕಿಸಿದ್ದಾರೆ.
“ರಾಜ್ಯಸಭೆಯ ಕಾರ್ಯವಿಧಾನ ಮತ್ತು ವ್ಯವಹಾರದ ನಿಯಮಗಳ ನಿಯಮ 188ರ ಅಡಿಯಲ್ಲಿ ಗೃಹ ವ್ಯವಹಾರಗಳ ಸಚಿವರಾದ ಅಮಿತ್ ಶಾ ವಿರುದ್ಧ ನಾನು ವಿಶೇಷ ಹಕ್ಕುಗಳ ಪ್ರಶ್ನೆಯ ನೋಟಿಸ್ ಅನ್ನು ಈ ಮೂಲಕ ನೀಡುತ್ತೇನೆ” ಎಂದು ಮಲ್ಲಿಕಾರ್ಜುನ ಖರ್ಗೆ ನೋಟಿಸ್ ನೀಡಿದ್ದಾರೆ. ಡಿಸೆಂಬರ್ 17ರಂದು ‘ಭಾರತದ ಸಂವಿಧಾನದ 75 ವರ್ಷಗಳ ವೈಭವದ ಪ್ರಯಾಣ’ ಕುರಿತ ಚರ್ಚೆಗೆ ರಾಜ್ಯಸಭೆಯಲ್ಲಿ ನೀಡಿದ ಉತ್ತರದ ವೇಳೆ ಅಮಿತ್ ಶಾ ಅವರು ಅಂಬೇಡ್ಕರ್ ಅವರನ್ನು ‘ಅವಮಾನಕರ ಮತ್ತು ಮಾನಹಾನಿಕರ’ ಎಂದು ಉಲ್ಲೇಖಿಸಿದ್ದರು ಎಂದು ಖರ್ಗೆ ಹೇಳಿದ್ದಾರೆ.
The Leader of the Opposition in the Rajya Sabha and Congress President Shri @kharge has submitted a privilege notice against the Union Home Minister Amit Shah for his insulting remarks on Dr. Ambedkar in the Rajya Sabha on December 17, 2024.
Here is the copy 👇 pic.twitter.com/my47h4ZlFr
— Congress (@INCIndia) December 19, 2024
ಇದನ್ನೂ ಓದಿ: ಅಂಬೇಡ್ಕರ್ ವಿರೋಧಿ ಪಕ್ಷವಾದ ಕಾಂಗ್ರೆಸ್ ಸುಳ್ಳುಗಳನ್ನು ಹರಡುತ್ತಿದೆ; ವಿವಾದದ ಬಳಿಕ ಅಮಿತ್ ಶಾ ಸುದ್ದಿಗೋಷ್ಠಿ
“ಸದನದ ಸಮ್ಮುಖದಲ್ಲಿ ಯಾವುದೇ ದುರ್ನಡತೆ ಮತ್ತು ಮಾನಹಾನಿಕರ ಹೇಳಿಕೆಗಳನ್ನು ನೀಡುವುದು ಸದನದ ಅವಹೇಳನವಾಗಿದೆ ಎಂದು ದೃಢಪಡಿಸಲಾಗಿದೆ” ಎಂದು ಖರ್ಗೆ ಪ್ರಸ್ತಾಪಿಸಿದ್ದಾರೆ. ಭಾರತದ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಹೆಸರನ್ನು ಬಳಸುವುದು ಡಾ. ಅಂಬೇಡ್ಕರ್ ಅವರಿಗೆ ಮಾಡಿದ ಅವಮಾನ, ಸದನದಲ್ಲಿ ನೀಡಿದ ಅವರ ಹೇಳಿಕೆಗಳು ಸಂಪೂರ್ಣವಾಗಿ ಅವಹೇಳನಕಾರಿ ಎಂದು ಅವರು ತಮ್ಮ ನೋಟಿಸ್‌ನಲ್ಲಿ ಹೇಳಿದ್ದಾರೆ.
ವಿಶೇಷಾಧಿಕಾರದ ಸೂಚನೆಯ ಪ್ರತಿಯನ್ನು ಕಾಂಗ್ರೆಸ್ ತನ್ನ ಅಧಿಕೃತ ಹ್ಯಾಂಡಲ್‌ನಿಂದ ಎಕ್ಸ್ನಲ್ಲಿ ಹಂಚಿಕೊಂಡಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ