ಅಂಬೇಡ್ಕರ್ ವಿರೋಧಿ ಪಕ್ಷವಾದ ಕಾಂಗ್ರೆಸ್ ಸುಳ್ಳುಗಳನ್ನು ಹರಡುತ್ತಿದೆ; ವಿವಾದದ ಬಳಿಕ ಅಮಿತ್ ಶಾ ಸುದ್ದಿಗೋಷ್ಠಿ
ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಕುರಿತು ನಿನ್ನೆ ರಾಜ್ಯಸಭಾ ಅಧಿವೇಶನದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ನೀಡಿದ್ದ ಹೇಳಿಕೆ ಭಾರೀ ವಿವಾದಕ್ಕೀಡಾಗಿತ್ತು. ಅಂಬೇಡ್ಕರ್ ಬಗ್ಗೆ ಅವಮಾನಕಾರಿಯಾಗಿ ಮಾತನಾಡಿದ ಅಮಿತ್ ಶಾ ದೇಶದ ಜನರ ಕ್ಷಮೆ ಕೇಳಬೇಕು, ಪ್ರಧಾನಿ ಮೋದಿ ಅಮಿತ್ ಶಾ ಅವರನ್ನು ಕೂಡಲೇ ಸಂಪುಟದಿಂದ ವಜಾಗೊಳಿಸಬೇಕು ಎಂದು ವಿರೋಧ ಪಕ್ಷಗಳು ಪಟ್ಟು ಹಿಡಿದು ಪ್ರತಿಭಟನೆ ನಡೆಸಿದ್ದವು. ಈ ಹಿನ್ನೆಲೆಯಲ್ಲಿ ಅಮಿತ್ ಶಾ ತುರ್ತು ಸುದ್ದಿಗೋಷ್ಠಿ ನಡೆಸಿದ್ದಾರೆ.
ನವದೆಹಲಿ: ರಾಜ್ಯಸಭೆಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಬಗ್ಗೆ ಮಾತನಾಡಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಅಂಬೇಡ್ಕರ್ ಜಪ ಪಠಿಸುವುದು ಫ್ಯಾಶನ್ ಆಗಿಬಿಟ್ಟಿದೆ. ಈ ರೀತಿ 100 ಬಾರಿ ಅಂಬೇಡ್ಕರ್ ಹೆಸರು ಹೇಳುವ ಬದಲು ದೇವರ ನಾಮವನ್ನಾದರೂ ಪಠಿಸಿದ್ದರೆ ಏಳೇಳು ಜನ್ಮದಲ್ಲೂ ಸ್ವರ್ಗಕ್ಕೆ ಹೋಗುತ್ತಿದ್ದಿರಿ ಎಂದು ವ್ಯಂಗ್ಯವಾಡಿದ್ದರು. ಇದಕ್ಕೆ ವಿರೋಧ ಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿ, ಅಂಬೇಡ್ಕರ್ ಕುರಿತು ಅವಮಾನಕಾರಿಯಾಗಿ ಮಾತನಾಡಿದ ಅಮಿತ್ ಶಾ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿರುವ ಅಮಿತ್ ಶಾ, ಸಂವಿಧಾನ ವಿರೋಧ ಹಾಗೂ ಅಂಬೇಡ್ಕರ್ ವಿರೋಧಿಯಾದ ಕಾಂಗ್ರೆಸ್ ಸುಳ್ಳುಗಳನ್ನು ಹರಡುತ್ತಿದೆ. ನಾನು ಅಂಬೇಡ್ಕರ್ ವಿರುದ್ಧ ಯಾವುದೇ ಹೇಳಿಕೆ ನೀಡಿಲ್ಲ. ನನ್ನ ಮಾತನ್ನು ತಿರುಚಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ದೆಹಲಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಇಂದು ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ವಿರೋಧ ಪಕ್ಷವು ಸಂಸತ್ತಿನಲ್ಲಿ ನಾನು ಮಾಡಿದ ಟೀಕೆಗಳನ್ನು ತಿರುಚಿದೆ ಮತ್ತು ಅಂಬೇಡ್ಕರ್ ವಿರೋಧಿ ನಿಲುವನ್ನು ಅನುಸರಿಸುತ್ತಿದೆ ಎಂದು ಆರೋಪಿಸಿದರು.
Addressing a press conference in New Delhi. Watch Live… https://t.co/xeoNlGQGu3
— Amit Shah (@AmitShah) December 18, 2024
ರಾಜ್ಯಸಭೆಯಲ್ಲಿ ಸಂವಿಧಾನದ ಚರ್ಚೆಯ ವೇಳೆ ಮಾಡಿದ ಟೀಕೆಗಳ ಕುರಿತು ಪ್ರತಿಕ್ರಿಯಿಸಿದ ಅಮಿತ್ ಶಾ, “ನನ್ನ ಹೇಳಿಕೆಗಳನ್ನು ತಪ್ಪಾಗಿ ನಿರೂಪಿಸಲಾಗಿದೆ. ಕಾಂಗ್ರೆಸ್ ಸುಳ್ಳು ಸುದ್ದಿಗಳನ್ನು ಹರಡುತ್ತದೆ, ನಾನು ಅಂಬೇಡ್ಕರ್ ವಿರುದ್ಧ ಮಾತನಾಡಿಲ್ಲ. ಸಂಸತ್ತಿನಲ್ಲಿ ಮಾಡಿದ ಕಾಮೆಂಟ್‌ಗಳನ್ನು ಕಾಂಗ್ರೆಸ್ ತಿರುಚಿದ ರೀತಿ ಅತ್ಯಂತ ಖಂಡನೀಯವಾಗಿದೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಅಮಿತ್ ಶಾ ಅವರನ್ನು ಮೋದಿ ರಾತ್ರಿಯೊಳಗೆ ಸಂಪುಟದಿಂದ ಕೈಬಿಡಬೇಕು; ಅಂಬೇಡ್ಕರ್ ಕುರಿತ ಹೇಳಿಕೆಗೆ ಖರ್ಗೆ ಒತ್ತಾಯ
ಕಾಂಗ್ರೆಸ್ ಅಂಬೇಡ್ಕರ್ ಮತ್ತು ಸಂವಿಧಾನ ವಿರೋಧಿ ಪಕ್ಷವಾಗಿದೆ. ಬಿಆರ್ ಅಂಬೇಡ್ಕರ್ ಅವರಿಗೆ ಭಾರತ ರತ್ನ ನೀಡದಿರಲು ಕಾಂಗ್ರೆಸ್ ಪ್ರಯತ್ನಿಸಿದೆ. ನಿನ್ನೆಯಿಂದ ಕಾಂಗ್ರೆಸ್ ಸತ್ಯವನ್ನು ತಿರುಚಿ ಪ್ರಸ್ತುತಪಡಿಸುತ್ತಿದೆ. ಕಾಂಗ್ರೆಸ್ ಬಿ.ಆರ್ ಅಂಬೇಡ್ಕರ್ ವಿರೋಧಿಯಾಗಿದ್ದು, ಮೀಸಲಾತಿ ಮತ್ತು ಸಂವಿಧಾನದ ವಿರುದ್ಧವಾಗಿದೆ ಎಂದರು. ಕಾಂಗ್ರೆಸ್ ವೀರ ಸಾವರ್ಕರ್ ಅವರನ್ನು ಕೂಡ ಅವಮಾನಿಸಿದೆ. ತುರ್ತು ಪರಿಸ್ಥಿತಿಯನ್ನು ಹೇರುವ ಮೂಲಕ ಕಾಂಗ್ರೆಸ್ ಎಲ್ಲಾ ಸಾಂವಿಧಾನಿಕ ಮೌಲ್ಯಗಳನ್ನು ಉಲ್ಲಂಘಿಸಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
#WATCH | Delhi: Union Home Minister Amit Shah says, “……Since yesterday, Congress has been presenting the facts in a distorted way and I condemn it… Congress is anti-BR Ambedkar, it is against reservation and the Constitution. Congress also insulted Veer Savarkar. By… pic.twitter.com/V2QYjPz11V
— ANI (@ANI) December 18, 2024
ನನ್ನ ಹೇಳಿಕೆಯನ್ನು ತಿರುಚಿ ಪ್ರಸ್ತುತಪಡಿಸಲಾಗಿದೆ. ಈ ಹಿಂದೆ ಅವರು ಪ್ರಧಾನಿ ನರೇಂದ್ರ ಮೋದಿಯವರ ಎಡಿಟೆಡ್ ಹೇಳಿಕೆಗಳನ್ನು ಕಾಂಗ್ರೆಸ್ ಬಿಡುಗಡೆ ಮಾಡಿತ್ತು. ಚುನಾವಣೆ ನಡೆಯುತ್ತಿರುವಾಗ ನನ್ನ ಹೇಳಿಕೆಯನ್ನು ಎಐ ಬಳಸಿ ಎಡಿಟ್ ಮಾಡಲಾಗಿತ್ತು. ಇಂದು ಅವರು ನನ್ನ ಹೇಳಿಕೆಯನ್ನು ತಿರುಚಿ ಸುಳ್ಳು ಹರಡುತ್ತಿದ್ದಾರೆ. ನನ್ನ ಸಂಪೂರ್ಣ ಹೇಳಿಕೆಯನ್ನು ಸಾರ್ವಜನಿಕರ ಮುಂದೆ ಇಡಲು ನಾನು ವಿನಂತಿಸುತ್ತೇನೆ. ನಾನು ಎಂದಿಗೂ ಅಂಬೇಡ್ಕರ್ ಅವರನ್ನು ಅವಮಾನಿಸುವ ರೀತಿಯ ಹೇಳಿಕೆ ನೀಡಿಲ್ಲ. ಬಿಜೆಪಿ ಅಧಿಕಾರದಲ್ಲಿದ್ದಾಗಲೆಲ್ಲ ನಾವು ಅಂಬೇಡ್ಕರ್ ಅವರ ತತ್ವಗಳನ್ನು ಪ್ರಚಾರ ಮಾಡಿದ್ದೇವೆ. ಕಾಂಗ್ರೆಸ್‌ನ ಈ ನೀಚ ಪ್ರಯತ್ನಕ್ಕೆ ಬೆಂಬಲ ನೀಡಿಲ್ಲ ಎಂದು ಅಮಿತ್ ಶಾ ಹೇಳಿದ್ದಾರೆ.
ಇದಕ್ಕೂ ಮುನ್ನ ಮಾತನಾಡಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಅಮಿತ್ ಶಾ ಅವರು ಕ್ಷಮೆ ಯಾಚಿಸಬೇಕು ಮತ್ತು ಪ್ರಧಾನಿ ಮೋದಿಗೆ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಮೇಲೆ ನಂಬಿಕೆ ಇದ್ದರೆ ಮಧ್ಯರಾತ್ರಿಯೊಳಗೆ ಅವರನ್ನು ವಜಾಗೊಳಿಸಬೇಕು ಎಂಬುದು ನಮ್ಮ ಬೇಡಿಕೆಯಾಗಿದೆ. ಅವರಿಗೆ ಸಂಪುಟದಲ್ಲಿ ಉಳಿಯುವ ಹಕ್ಕಿಲ್ಲ. ವಜಾಗೊಳಿಸಿದರೆ ಮಾತ್ರ ಜನರು ಮೌನವಾಗಿರುತ್ತಾರೆ, ಇಲ್ಲದಿದ್ದರೆ ಜನರು ಡಾ ಬಿಆರ್ ಅಂಬೇಡ್ಕರ್‌ಗಾಗಿ ಪ್ರಾಣ ತ್ಯಾಗ ಮಾಡಲು ಸಿದ್ಧರಿದ್ದಾರೆ ಎಂದು ಹೇಳಿದ್ದರು.
ಏನಿದು ವಿವಾದ?:
ನಿನ್ನೆ (ಮಂಗಳವಾರ) 75 ವರ್ಷಗಳ ಸಂವಿಧಾನದ ಕುರಿತು ರಾಜ್ಯಸಭೆಯಲ್ಲಿ ಮಾಡಿದ ಭಾಷಣದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ್ದರು.ಇತ್ತೀಚಿನ ದಿನಗಳಲ್ಲಿ ಅಂಬೇಡ್ಕರ್, ಅಂಬೇಡ್ಕರ್, ಅಂಬೇಡ್ಕರ್, ಅಂಬೇಡ್ಕರ್, ಅಂಬೇಡ್ಕರ್ ಎನ್ನುವುದು ಫ್ಯಾಶನ್ ಆಗಿದೆ. ಒಂದುವೇಳೆ ಅವರು ಅಂಬೇಡ್ಕರ್ ಬದಲು ಈ ರೀತಿ 100 ಬಾರಿ ದೇವರ ಹೆಸರು ಜಪ ಮಾಡಿದ್ದರೆ 7 ಜನ್ಮಗಳಲ್ಲೂ ಸ್ವರ್ಗದಲ್ಲಿ ಸ್ಥಾನ ಪಡೆಯುತ್ತಿದ್ದರು ಎಂದು ಹೇಳಿದ್ದರು. ಈ ಹೇಳಿಕೆ ವಿಪಕ್ಷಗಳ ನಾಯಕರ ಟೀಕೆಗೆ ಕಾರಣವಾಯಿತು. ಈ ಬಗ್ಗೆ ತೀವ್ರ ಪ್ರತಿಭಟನೆಯೂ ನಡೆಯಿತು. ಈ ಹಿನ್ನೆಲೆಯಲ್ಲಿ ಅಮಿತ್ ಶಾ ತುರ್ತು ಸುದ್ದಿಗೋಷ್ಠಿ ನಡೆಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:12 pm, Wed, 18 December 24