ಚಂದ್ರ ಗ್ರಹಣದ ದಿನವೇ ಗದಗದಲ್ಲಿ ಸಪ್ತಪದಿ ತುಳಿದ 19 ಜೋಡಿಗಳು: ಗ್ರಹಣ ಶುಭ ಕಾರ್ಯಗಳಿಗೆ ಅಡ್ಡಿಯಲ್ಲ

Edited By:

Updated on: Mar 03, 2026 | 7:32 PM

ಗದಗದಲ್ಲಿ ಹೋಳಿ ಹುಣ್ಣಿಮೆ ಹಾಗೂ ಚಂದ್ರಗ್ರಹಣದಂದು 19 ಜೋಡಿಗಳು ಸಾಮೂಹಿಕ ವಿವಾಹವಾದರು. ಪಂಡಿತ ಪುಟ್ಟರಾಜ ಗವಾಯಿಗಳ 112ನೇ ಜಯಂತ್ಯುತ್ಸವದ ಅಂಗವಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅಶುಭವೆಂಬ ನಂಬಿಕೆಗೆ ಸವಾಲೆಸೆದು, ಗಣ್ಯರು ಹಾಗೂ ಮಠಾಧೀಶರ ಸಮ್ಮುಖದಲ್ಲಿ ಸರ್ವಧರ್ಮದ ಜೋಡಿಗಳು ಸಪ್ತಪದಿ ತುಳಿದು, ಗ್ರಹಣವು ನೈಸರ್ಗಿಕ ವಿದ್ಯಮಾನ, ಶುಭ ಕಾರ್ಯಕ್ಕೆ ಅಡ್ಡಿಯಲ್ಲ ಎಂಬ ಸಂದೇಶ ಸಾರಿದರು.

ಗದಗ, ಮಾ.3: ಸಾಮಾನ್ಯವಾಗಿ ಗ್ರಹಣವೆಂದರೆ ಅಶುಭ, ಈ ಸಮಯದಲ್ಲಿ ಯಾವುದೇ ಶುಭ ಕಾರ್ಯ ಮಾಡಬಾರದು ಎಂಬ ನಂಬಿಕೆ ಬಲವಾಗಿದೆ. ಆದರೆ, ಗದಗ ನಗರದಲ್ಲಿ ಈ ಎಲ್ಲಾ ಕಟ್ಟುಪಾಡುಗಳನ್ನು ಮೀರಿ ಹೋಳಿ ಹುಣ್ಣಿಮೆ ಹಾಗೂ ಚಂದ್ರಗ್ರಹಣದ ದಿನದಂದೇ 19 ಜೋಡಿಗಳು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಅಂಧರ ಬಾಳಿನ ಬೆಳಕು, ಪಂಡಿತ ಪುಟ್ಟರಾಜ ಗವಾಯಿಗಳ 112ನೇ ಜಯಂತೋತ್ಸವದ ಅಂಗವಾಗಿ ಈ ಅರ್ಥಪೂರ್ಣ ಸಾಮೂಹಿಕ ವಿವಾಹವನ್ನು ಆಯೋಜಿಸಲಾಗಿತ್ತು. ದಿ. ಕೆ.ಎಚ್. ಪಾಟೀಲ್ ಅಭಿಮಾನಿಗಳ ಬಳಗವು ಗದಗ ಎಪಿಎಂಸಿ ಆವರಣದ ಪುಟ್ಟರಾಜ ಗವಾಯಿಗಳ ಮಠದ ಆವರಣದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಜಾತಿ-ಮತದ ಭೇದವಿಲ್ಲದೆ ಸರ್ವಧರ್ಮದ ಒಟ್ಟು 19 ಜೋಡಿಗಳು ಗಣ್ಯರು ಹಾಗೂ ಮಠಾಧೀಶರ ಸಮ್ಮುಖದಲ್ಲಿ ಸಪ್ತಪದಿ ತುಳಿದರು. ಗವಾಯಿಗಳ 112ನೇ ಜಯಂತಿಯ ಸ್ಮರಣಾರ್ಥ 112 ಕೆಜಿ ತೂಕದ ಬೃಹತ್ ಕೇಕ್ ಕತ್ತರಿಸುವ ಮೂಲಕ ವಿವಾಹ ಮಹೋತ್ಸವಕ್ಕೆ ಅದ್ಧೂರಿ ಚಾಲನೆ ನೀಡಲಾಯಿತು. ಮದುವೆಗೂ ಮುನ್ನ ನಗರದ ಪ್ರಮುಖ ರಸ್ತೆಗಳಲ್ಲಿ ಪುಟ್ಟರಾಜ ಗವಾಯಿಗಳ ಭಾವಚಿತ್ರದ ಮೆರವಣಿಗೆ ನಡೆಯಿತು. 112 ಸುಮಂಗಲೆಯರು ಕುಂಭ ಹೊತ್ತು ಸಾಗಿದ್ದು ಮೆರವಣಿಗೆಗೆ ಕಳೆ ನೀಡಿತ್ತು. ಗದಗನ ಗವಾಯಿಗಳ ಮಠದ ಕಲ್ಲಯ್ಯಜ್ಜನವರು ಹಾಗೂ ತೋಂಟದ ಡಾ. ಸಿದ್ದರಾಮ ಶ್ರೀಗಳು ಸೇರಿದಂತೆ ಹಲವು ಮಠಾಧೀಶರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು, ನವಜೋಡಿಗಳನ್ನು ಆಶೀರ್ವದಿಸಿದರು. “ಗ್ರಹಣವು ಒಂದು ನೈಸರ್ಗಿಕ ವಿದ್ಯಮಾನ, ಅದು ಶುಭ ಕಾರ್ಯಗಳಿಗೆ ಅಡ್ಡಿಯಲ್ಲ” ಎಂಬ ಸಂದೇಶವನ್ನು ಈ ಕಾರ್ಯಕ್ರಮದ ಮೂಲಕ ಜನರಿಗೆ ನೀಡಲಾಯಿತು.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published on: Mar 03, 2026 07:32 PM
Follow Us
Sanjeev Pandre

ಸಂಜೀವಕುಮಾರ. ರಾ. ಪಾಂಡ್ರೆ, ಮೂಲತಃ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಅಗರಖೇಡ ಗ್ರಾಮದವರು. ಸಧ್ಯ ಟಿರ್ವಿ ವಾಹಿನಿಯ ಗದಗ ಜಿಲ್ಲಾ ಹಿರಿಯ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬಿಎ., ಡಿಪ್ಲೋಮಾ ಇನ್ ಜರ್ನಲಿಸಮ್ ಹಾಗೂ ಅಪ್ಟೇಕ್ ನಲ್ಲಿ ಕಂಪ್ಯೂಟರ್ (HDSE) ಓದಿರುವ ಇವರು. ವಿಜಯಪುರದ‌‌ ಪಿಡಿಜೆ ಹೈಸ್ಕೂಲ್ ನಲ್ಲಿ ಎರಡು ವರ್ಷ ಕಂಪ್ಯೂಟರ್ ಶಿಕ್ಷಕನಾಗಿ ಕಾರ್ಯ ನಿರ್ವಹಿಸಿದ್ದಾರೆ. 20 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯವಾಗಿದ್ದು, 2004ರಲ್ಲಿ ಮುದ್ರಣ ಮಾಧ್ಯಮದ‌ ಮೂಲಕ ಪತ್ರಿಕೋದ್ಯಮ ವೃತ್ತಿ ಆರಂಭಿಸಿದ್ದು, ನಂತರ 2007ರಿಂದ ಎಲೇಕ್ಟ್ರಾನಿಕ್‌ ಮಾಧ್ಯಮದಲ್ಲಿ ಸೇವೆ ಆರಂಭಿಸಿದ್ದಾರೆ. ಟಿರ್ವಿ ವಾಹಿನಿಯಲ್ಲಿ ಬಾಗಲಕೋಟೆ, ವಿಜಯಪುರ ನಂತರ ಗದಗ ಜಿಲ್ಲೆಯ ವರದಿಗಾರರಾಗಿ 15 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಕ್ರೀಡೆ, ಸಂಗೀತ ಹವ್ಯಾಸವಾಗಿದೆ...

Read More